ಜಿಲ್ಲಾಡಳಿತ ಭವನ ತಡೆಗೋಡೆಗೆ ಮರಳು ಮೂಟೆ ಅಳವಡಿಕೆ ಬಳಿಕ ಲಘುವಾಹನ ಸಂಚಾರಕ್ಕೆ ಅವಕಾಶ
ಮಡಿಕೇರಿ-ಮಂಗಳೂರು ರಸ್ತೆ ಜಿಲ್ಲಾಡಳಿತ ಭವನದ ತಡೆಗೋಡೆ ಕುಸಿದಿರುವುದರಿಂದ ತಾತ್ಕಾಲಿಕವಾಗಿ ಸಾರಿಗೆ ಸಂಚಾರ ಬಂದ್ ಮಾಡಲಾಗಿದೆ
ಮಡಿಕೇರಿ (ಜು.25) : ಮಡಿಕೇರಿ- ಮಂಗಳೂರು ರಸ್ತೆ ಜಿಲ್ಲಾಡಳಿತ ಭವನ ಬಳಿ ತಡೆಗೋಡೆಯ ಸ್ಲಾ್ಯಬ್‌ಗಳು ಹೊರಚಾಚಿದ್ದ ಹಿನ್ನೆಲೆ, ತಾತ್ಕಾಲಿಕವಾಗಿ ಸಾರಿಗೆ ಸಂಚಾರ ಬಂದ್ ಮಾಡಲಾಗಿದೆ. ಸದ್ಯ ಮರಳು ಮೂಟೆ ಅಳವಡಿಸಿದ ನಂತರ ಲಘು ವಾಹನ (ದ್ವಿಚಕ್ರ, ಆಟೋ) ಸಂಚಾರಕ್ಕೆ ಅವಕಾಶ ಮಾಡಲಾಗುವುದು. ಆ ನಿಟ್ಟಿನಲ್ಲಿ ಶಾಸಕರು ಮತ್ತು ಜಿಲ್ಲಾಧಿಕಾರಿ ಜತೆ ಚರ್ಚಿಸಿ ಮುಂದಿನ ಕ್ರಮ ವಹಿಸಲಾಗುವುದು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಭಾನುವಾರ ಜಿಲ್ಲಾಡಳಿತ ಭವನ ಬಳಿಯ ಮಂಗಳೂರು ರಸ್ತೆ ತಡೆಗೋಡೆ ವೀಕ್ಷಿಸಿದ ಬಳಿಕ, ಮದೆನಾಡು ಸಮೀಪದ ಸೀಮೆಹುಲ್ಲು ಕಜೆ ಗುಡ್ಡದ ಬದಿಯೊಂದು ಕುಸಿದಿರುವ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದ ನಂತರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ತಡೆಗೋಡೆ(Barrier) ಪರಿಶೀಲನಾ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯರು, ರಸ್ತೆ ಮುಚ್ಚಿರುವುದರಿಂದ ಇಲ್ಲಿನ ಸಾರ್ವಜನಿಕರು 11 ಕಿ.ಮೀ. ಬಳಸಿಕೊಂಡು ಬರಬೇಕಿದೆ. ಆದ್ದರಿಂದ ಕೂಡಲೇ ಸಾರ್ವಜನಿಕರ ಓಡಾಟಕ್ಕೆ ಅವಕಾಶ ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು. ತಡೆಗೋಡೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಜೊತೆಗೆ ಜಿಲ್ಲಾಧಿಕಾರಿ ಅವರ ಕಚೇರಿಗೆ ತೆರಳಲು ರಸ್ತೆ ಮಾಡಿದ್ದರ ಪರಿಣಾಮವಾಗಿ ಇಂತಹ ದುಸ್ಥಿತಿ ಎದುರಿಸುವಂತಾಗಿದೆ ಎಂದು ಸ್ಥಳೀಯರೊಬ್ಬರು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಸಾರ್ವಜನಿಕರಿಗೆ ತೊಂದರೆ ಆಗದಂತೆ ಗಮನಹರಿಸಲಾಗುವುದು. ಸದ್ಯ ಮರಳು ಮೂಟೆ ಅಳವಡಿಸುವ ಕಾರ್ಯ ನಡೆಯುತ್ತಿದ್ದು, ಈ ಬಗ್ಗೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದರು. ಲೋಕೋಪಯೋಗಿ ಇಲಾಖೆ ಇಇ ನಾಗರಾಜು ತಡೆಗೋಡೆ ಕಾಮಗಾರಿ ಬಗ್ಗೆ ಮಾಹಿತಿ ನೀಡಿದರು. ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ. ಸಿಇಒ ಭಂವರ್ ಸಿಂಗ್ ಮೀನಾ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ಡಿವೈಎಸ್ಪಿ ಗಜೇಂದ್ರ ಪ್ರಸಾದ್, ತಹಸೀಲ್ದಾರ್ ಮಹೇಶ್ ಇತರರು ಇದ್ದರು.
ಮಳೆಗಾಲ ಮುಗಿಯುವ ತನಕ ಸ್ಥಳಾಂತರವಾಗಿ: ಬಿ.ಸಿ.ನಾಗೇಶ್
ಮದೆನಾಡು ಸಮೀಪದ ಸೀಮೆಹುಲ್ಲು ಕಜೆ ಗುಡ್ಡದ ಬದಿಯೊಂದು ಕುಸಿದಿರುವ ಪ್ರದೇಶಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಭಾನುವಾರ ಭೇಟಿ ನೀಡಿ, ಸ್ಥಳೀಯರಿಂದ ಮಾಹಿತಿ ಪಡೆದರು. ಈ ಪ್ರದೇಶದಲ್ಲಿ ಮೂರು ಕುಟುಂಬಗಳು ವಾಸಮಾಡುತ್ತಿದ್ದಾರೆ. ಸದ್ಯ ಮಳೆಗಾಲ ಮುಗಿಯುವವರೆಗೆ ಸಂಬಂಧಿಕರ ಮನೆಗೆ ತೆರಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಮನವಿ ಮಾಡಿದರು. ಜಾನುವಾರುಗಳಿಗೂ ಮೇವು ಒದಗಿಸಲಾಗುವುದು, ತಮ್ಮ ಜೀವ ಮತ್ತು ಜೀವನ ಅತಿಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಕೂಡಲೇ ಸ್ಥಳಾಂತರ ಆಗುವಂತೆ ಸಚಿವರು ಸಲಹೆ ಮಾಡಿದರು. ಸಂತ್ರಸ್ತರಿಗೆ ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು. ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಎಂದು ತಿಳಿಸಿದರು.
ಮುಂಗಾರು ಸಂದರ್ಭದಲ್ಲಿ 2018ರಲ್ಲಿ ಇದೇ ವ್ಯಾಪ್ತಿಯಲ್ಲಿ ಭೂಕುಸಿತ ಉಂಟಾಗಿತ್ತು, ಈ ಬಾರಿಯೂ ಇದೇ ಸ್ಥಳದಲ್ಲಿ ಭೂ ಕುಸಿತ ಸಂಭವಿಸಿದೆ. ಆದ್ದರಿಂದ ಮಳೆಗಾಲ ಮುಗಿದ ನಂತರ ತಜ್ಞರ ತಂಡವನ್ನು ಕುಳಿಸಿ ವರದಿ ಪಡೆಯಲಾಗುವುದು ಎಂದರು. 2018 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಇಲ್ಲಿನ ಜನರು ಸಂಕಷ್ಟಅನುಭವಿಸಿದ್ದಾರೆ. ಮಳೆಗಾಲದಲ್ಲಿ ಪದೇ ಪದೇ ಭೂಕುಸಿತಕ್ಕೆ ತುತ್ತಾಗುತ್ತಿರುವ ಬಗ್ಗೆ ಮತ್ತೊಂದು ಬಾರಿ ತಜ್ಞರಿಂದ ಅಧ್ಯಯನ ವರದಿ ಪಡೆಯಲಾಗುವುದು ಎಂದು ಬಿ.ಸಿ.ನಾಗೇಶ್ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಸಂಬಂಧಿಕರ ಮನೆಗೆ ತೆರಳಿದಲ್ಲಿ ಸಂಬಂಧಿಕರು ಸೇರಿದಂತೆ ಸಂತ್ರಸ್ತರಿಗೆ ಆಹಾರ ಕಿಟ್ ಸೇರಿದಂತೆ ಅಗತ್ಯ ನೆರವು ನೀಡಲಾಗುವುದು, ಸದ್ಯ ಆಗಸ್ವ್ ಅಂತ್ಯದ ವರೆಗೆ ಸಂಬಂಧಿಕರ ಮನೆಯಲ್ಲಿ ಇರುವಂತೆ ಸ್ಥಳಿಯರಲ್ಲಿ ಕೋರಿದರು. ನಂತರ ಜೋಡುಪಾಲ ಸಮೀಪದಲ್ಲಿ ಮಳೆ ಹಾನಿಗೆ ತುತ್ತಾದ ಸೇತುವೆಯನ್ನು ಪರಿಶೀಲಿಸಿದ ಸಚಿವರು, ಸೇತುವೆಯನ್ನು ಕೂಡಲೇ ಸರಿಪಡಿಸುವಂತೆ ಸಂಬಂಧಪಟ್ಟಎಂಜಿನಿಯರ್‌ಗೆ ಸೂಚಿಸಿದರು.
ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ, ಜಿ.ಪಂ. ಸಿಇಒ ಭಂವರ್ ಸಿಂಗ್ ಮೀನಾ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ಡಿವೈಎಸ್ಪಿ ಗಜೇಂದ್ರ ಪ್ರಸಾದ್, ತಹಸೀಲ್ದಾರ್ ಮಹೇಶ್ ಇತರರು ಇದ್ದರು.ಕೊಡಗಿನ ಸೀಮೆಹುಲ್ಲು ಕಜೆಯಲ್ಲಿ ಭೂಕುಸಿತ ಹಿನ್ನೆಲೆಯಲ್ಲಿ ಭಾನುವಾರ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಎರಡು ಕುಟುಂಬಗಳ ಸ್ಥಳಾಂತರಕ್ಕೆ ಸೂಚನೆ ನೀಡಿದರು. ಆದರೆ ಎರಡು ಕುಟುಂಬದವರು ಸ್ಥಳಾಂತರವಾಗಲು ಹಿಂದೇಟು ಹಾಕಿದರು. ಭೂಕುಸಿತವಾಗಿರುವ ಸಮೀಪದಲ್ಲೇ ಈ ಎರಡು ಮನೆಗಳಿವೆ. ಸ್ಥಳ ಪರಿಶೀಲಿಸಿ ಎಲ್ಲ ರೀತಿಯ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ಥಳಾಂತರವಾಗಲು ಹಿಂದೇಟು ಹಾಕಿದ ಎರಡು ಕುಟುಂಬಗಳ ಮನವೊಲಿಸಲು ಸಚಿವ ನಾಗೇಶ್ ಯತ್ನಿಸಿದರು. ಮಳೆ ಮುಗಿಯುವವರೆಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಸಲಹೆ ನೀಡಿದರು. ಆದರೆ ಏನೂ ಸಮಸ್ಯೆ ಇಲ್ಲ ಇಲ್ಲೇ ಇರುತ್ತೇವೆ ಎಂದು ಹೇಳಿದ ಕುಟುಂಬದ ಸದಸ್ಯರು ಸ್ಥಳಾಂತರವಾಗಲು ಹಿಂದೇಟು ಹಾಕಿದರು.