ಶಿವಮೊಗ್ಗ(ಜೂ.11): ನಗರಪಾಲಿಕೆ ವ್ಯಾಪ್ತಿಯಲ್ಲಿನ ಮಾಂಸದಂಗಡಿಗಳು ಕಡ್ಡಾಯವಾಗಿ ಉದ್ದಿಮೆ ಪರವಾನಿಗೆ ಪಡೆದು ವ್ಯಾಪಾರ ನಡೆಸಬೇಕು. ಜೊತೆಗೆ ಅಂಗಡಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಆರ್‌. ಸಿ. ನಾಯ್ಕ, ಮಾಂಸದಂಗಡಿ ಮಾಲೀಕರಿಗೆ ಸೂಚನೆ ನೀಡಿದರು.

ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಬುಧವಾರ ನಡೆದ ಶಿವಮೊಗ್ಗ ನಗರ ವ್ಯಾಪ್ತಿ ಚಿಕನ್‌ ಮತ್ತು ಮಟನ್‌ ಸ್ಟಾಲ್‌ ಮಾಲೀಕ ಸಭೆಯಲ್ಲಿ ಉದ್ದಿಮೆ ಪರವಾನಗಿ ಕುರಿತು ಸುದೀರ್ಘ ಚರ್ಚೆ ನಡೆಸಿದ ಅವರು, ನಗರ ವ್ಯಾಪ್ತಿಯಲ್ಲಿನ ಕೆಲವು ಚಿಕನ್‌ ಮತ್ತು ಮಟನ್‌ಸ್ಟಾಲ್‌ ಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ಸಂಗ್ರಹಣೆ ಹಾಗೂ ಸ್ವಚ್ಛತೆ ಕುರಿತು ಸಾಕಷ್ಟುದೂರು ಕೇಳಿಬರುತ್ತಿವೆ. ಸ್ಟಾಲ್‌ಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ತ್ಯಾಜ್ಯ ನಿರ್ವಹಣೆ ಹಾಗೂ ಸಂಗ್ರಹಣೆ ಸಮರ್ಪಕವಾಗಿರಬೇಕು ಎಂದು ಸೂಚಿಸಿದರು.

ಕಡ್ಡಾಯ ಉದ್ದಿಮೆ ಪರವಾನಗಿ ಪಡೆದುಕೊಳ್ಳಬೇಕು. ಪರವಾನಗಿ ಇಲ್ಲದೆ ಉದ್ಯಮ ನಡೆಸುವುದು ಕಂಡುಬಂದರೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕೊವಿಡ್‌ -19 ಹಿನ್ನೆಲೆಯಲ್ಲಿ ಅಂಗಡಿಗಳಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಪಾಡಿಕೊಳ್ಳಬೇಕು. ಮುಖ್ಯವಾಗಿ ತ್ಯಾಜ್ಯವಸ್ತುಗಳನ್ನು ವಿಲೇ ಮಾಡಲು ಮಟನ್‌- ಚಿಕನ್‌ ಸ್ಟಾಲ್‌ ಮಾಲೀಕರು ಸಂಘ ರಚಿಸಿಕೊಂಡು ಆ ಮೂಲಕವೇ ವಾಹನ ನಿಗದಿಪಡಿಸಿಕೊಂಡು ವಿಲೇ ಮಾಡಿಕೊಳ್ಳುವಂತೆ ಸೂಚನೆ ನೀಡಲಾಯಿತು.

ಶರಾವತಿ ಭೂಗರ್ಭ ಜಲ ವಿದ್ಯುತ್‌ ವಿರೋಧಿ ಅಲೆ ಶುರು

ಮಾರಾಟಗಾರರು ಯಾವುದೇ ಕಾರಣಕ್ಕೂ ಗ್ರಾಹಕರಿಗೆ ಪ್ಲಾಸ್ಟಿಕ್‌ ಚೀಲದಲ್ಲಿ ಮಾಂಸ ನೀಡಬಾರದು. ಶಿವಮೊಗ್ಗ ಪ್ಲಾಸ್ಟಿಕ್‌ ಮುಕ್ತ ನಗರವಾಗಿದೆ. ಇದನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಪ್ಲಾಸ್ಟಿಕ್‌ ಬ್ಯಾಗ್‌ ಬದಲಿಗೆ ಬಟ್ಟೆಬ್ಯಾಗ್‌ ಬಳಸಬೇಕು ಎಂದು ಸೂಚನೆ ನೀಡಿದರು. ಸಭೆಯಲ್ಲಿ ಪಾಲಿಕೆ ಸದಸ್ಯ ನಾಗರಾಜ್‌ ಕಂಕಾರಿ ಮತ್ತಿತರರು ಉಪಸ್ಥಿತರಿದ್ದರು.