ಸಚಿವರು ಖುದ್ದು ತೆರಳಿ ದಲಿತ ವ್ಯಕ್ತಿಯ ಮೇಲೆ ದರ್ಪ ತೋರಿದ್ದು ಸರಿಯಲ್ಲ. ಬಡವರು ಬದುಕಲು ಗುಡಿಸಲು, ಸಣ್ಣ ಮನೆಗಳನ್ನು ನಿರ್ಮಿಸಿಕೊಂಡಿರುತ್ತಾರೆ. ಅಂತಹವರ ಮೇಲೆ ದೌರ್ಜನ್ಯ ತೋರುವುದು ಸರಿಯಲ್ಲ: ಎನ್‌.ಎಂ. ನಬಿಸಾಬ್‌ 

ಹೊಸಪೇಟೆ(ಸೆ.13): ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ ಅವರು ಭೂ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ್ದರೆ, ಕೂಡಲೇ ಜಿಲ್ಲಾಧಿಕಾರಿ ಸರ್ವೆ ನಡೆಸಿ ತೆರವುಗೊಳಿಸಬೇಕು ಎಂದು ಮಾಜಿ ಸಚಿವ ಎನ್‌.ಎಂ. ನಬಿಸಾಬ್‌ ಒತ್ತಾಯಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಆನಂದ ಸಿಂಗ್‌ ಪ್ರಭಾವಿ ಸಚಿವರಾಗಿದ್ದಾರೆ. ಒಬ್ಬ ದಲಿತ ವ್ಯಕ್ತಿಯ ಮನೆಗೆ ತೆರಳಿ ಭೂ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಲಾಗಿದೆ. ಇದನ್ನು ತೆರವು ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈಗ ಅವರ ಮನೆಯೇ ಒತ್ತುವರಿ ಮಾಡಿ ನಿರ್ಮಿಸಲಾಗಿದೆ ಎಂಬ ಆರೋಪ ಇದೆ. ಹಾಗಾಗಿ ಕೂಡಲೇ ಜಿಲ್ಲಾಧಿಕಾರಿಯವರು ಸರ್ವೆ ನಡೆಸಿ, ಒತ್ತುವರಿ ತೆರವು ಮಾಡಬೇಕು. ಬಡವರು ಒತ್ತುವರಿ ಮಾಡಿಕೊಂಡರೇ, ಕಾನೂನು ಪ್ರಕಾರ ಯಾವ ಕ್ರಮವಹಿಸಲಾಗುತ್ತದೆ. ಅದೇ ಪ್ರಕಾರ ಸಚಿವರ ಮನೆಯನ್ನೂ ತೆರವು ಮಾಡಬೇಕು ಎಂದರು.

ವಿಜಯನಗರ: ಹಂಪಿಯಲ್ಲಿ ಭಾರಿ ವಾಹನಗಳಿಗಿಲ್ಲ ಲಗಾಮು!

ಸಚಿವರು ಖುದ್ದು ತೆರಳಿ ದಲಿತ ವ್ಯಕ್ತಿಯ ಮೇಲೆ ದರ್ಪ ತೋರಿದ್ದು ಸರಿಯಲ್ಲ. ಬಡವರು ಬದುಕಲು ಗುಡಿಸಲು, ಸಣ್ಣ ಮನೆಗಳನ್ನು ನಿರ್ಮಿಸಿಕೊಂಡಿರುತ್ತಾರೆ. ಅಂತಹವರ ಮೇಲೆ ದೌರ್ಜನ್ಯ ತೋರುವುದು ಸರಿಯಲ್ಲ. ಈಗ ಅವರೇ ಸಣ್ಣ ಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಬಲವಾದ ಆರೋಪ ಇದೆ. ಈಗ ಅವರು ಕೂಡ ಕಾನೂನು ಪಾಲನೆ ಮಾಡಲಿ. ಜೆಡಿಎಸ್‌ ಈ ವಿಷಯವನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ. ಸಚಿವರು ಒತ್ತುವರಿ ಮಾಡಿಕೊಂಡಿದ್ದರೆ, ದಾಖಲೆ ಸಮೇತ ಜಿಲ್ಲಾಧಿಕಾರಿಗೆ ತೆರವು ಮಾಡಲು ಮನವಿ ಸಲ್ಲಿಸುತ್ತೇವೆ. ಜತೆಗೆ ಹೋರಾಟ ಮಾಡುತ್ತೇವೆ ಎಂದರು.

ಈ ಬಗ್ಗೆ ಈಗಾಗಲೇ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಸದನದಲ್ಲಿ ಪ್ರಸ್ತಾಪ ಮಾಡುವೆ ಎಂದಿದ್ದಾರೆ. ಅವರಿಗೆ ಪೂರಕ ದಾಖಲೆಗಳನ್ನು ಸಲ್ಲಿಸುತ್ತೇವೆ. ಬೆಂಗಳೂರಿಗೆ ತೆರಳಿ, ವಿಜಯನಗರ ಜಿಲ್ಲಾ ಜೆಡಿಎಸ್‌ ಮುಖಂಡರ ನಿಯೋಗ ಕುಮಾರಸ್ವಾಮಿಗೆ ದಾಖಲೆ ಕೊಡುತ್ತೇವೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಆರೋಗ್ಯ ಸರಿಯಿಲ್ಲ. ಅವರ ಆರೋಗ್ಯ ಸುಧಾರಿಸಿದ ಬಳಿಕ ಅವರ ಬಳಿಯೂ ಈ ಬಗ್ಗೆ ಚರ್ಚಿಸುತ್ತೇವೆ. ಜೆಡಿಎಸ್‌ ಹೋರಾಟದಿಂದ ಬೆಳೆದು ಬಂದ ಪಕ್ಷ, ನಾವು ಈ ವಿಷಯವನ್ನು ಸುಮ್ಮನೆ ಬಿಡುವುದಿಲ್ಲ ಎಂದರು.

ವಿಜಯನಗರ ಜಿಲ್ಲೆಯ ಐದು ಕ್ಷೇತ್ರಗಳಲ್ಲೂ ಜೆಡಿಎಸ್‌ ಪಕ್ಷವನ್ನು ಬಲಗೊಳಿಸಲಾಗುತ್ತಿದೆ. ಐದು ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಹಾಕಲಾಗುವುದು. ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದೇವೆ. ಈಗಾಗಲೇ ಈ ಬಗ್ಗೆ ಸಿದ್ಧತೆ ನಡೆಸಲಾಗಿದೆ. ವಿಜಯನಗರ ಕ್ಷೇತ್ರದಲ್ಲೂ ಆನಂದ ಸಿಂಗ್‌ ಅವರ ವಿರುದ್ಧ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸುತ್ತೇವೆ. ಈಗಾಗಲೇ ಗವಿಯಪ್ಪನವರು ಕಾಂಗ್ರೆಸ್‌ಗೆ ಹೋಗಿದ್ದಾರೆ. ನಾವು ಕೂಡ ಸೂಕ್ತ ಅಭ್ಯರ್ಥಿಯನ್ನೇ ಹುಡುಕುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕಾದು ನೋಡಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ವಿಜಯನಗರ ಜಿಲ್ಲಾಧ್ಯಕ್ಷ ಕೆ. ಕೊಟ್ರೇಶ್‌, ಮುಖಂಡರಾದ ನೂರ್‌ಅಹ್ಮದ್‌, ಪುತ್ರೇಶ, ಪರಮೇಶ, ಸೋಮಶೇಖರ್‌ ಮತ್ತಿತರರಿದ್ದರು.