ಹಾಸನ(ಸೆ.05): ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ಚಿರತೆಗಳ ಹಾವಳಿ ಹೆಚ್ಚಿದ್ದು, ಹೊಲ ಗದ್ದೆ ಕಾಡುಗಳಲ್ಲಿ ಕಂಡುಬರುತ್ತಿದ್ದ ಚಿರತೆಗಳೀಗ ರಸ್ತೆಬದಿಯೇ ಕಾಣತೊಡಗಿವೆ. ಬಾಣಾವರದಿಂದ ಹುಳಿಯಾರಿಗೆ ಹೋಗುವ ಮಾರ್ಗಮಧ್ಯೆ ರಸ್ತೆ ಬದಿಯಲ್ಲೇ ಚಿರತೆ ಮಲಗಿದ್ದನ್ನು ಕಂಡವರು ಮಾಡಿದ ವಿಡಿಯೋ ಇದೀಗ ವೈರಲ್‌ ಆಗಿದೆ.

ರಂಗನಾಥ ಹಾರ್ಡ್‌ವೇರ್‌ ಮಾಲಿಕ ಮಹೇಶ್‌ ಅವರು ತಮ್ಮ ಸ್ನೇಹಿತ ಮೌನೇಶ್‌ ಅವರ ಜತೆ ಕಾರಿನಲ್ಲಿ ಇದೇ ಮಾರ್ಗವಾಗಿ ಹೋಗುತ್ತಿದ್ದ ಸಂದರ್ಭದಲ್ಲಿ ರಾಮನಹಳ್ಳಿ ಅರಣ್ಯ ಪ್ರದೇಶದಲ್ಲಿ ಚಿರತೆಯೊಂದು ರಸ್ತೆ ಪಕ್ಕದಲ್ಲೇ ನಿರುಮ್ಮಳವಾಗಿ ಮಲಗಿತ್ತು. 

ಹಿಂದೂಗಳಿಂದ ಅಕಾಲಿಕ ಮರಣ ಹೊಂದಿದ ಮುಸ್ಲಿಂ ಯುವಕನ ಅಂತ್ಯಸಂಸ್ಕಾರ

ಚಿರತೆ ಸತ್ತಿರಬಹುದೆಂಬ ಅನುಮಾನದಲ್ಲಿ ಕಾರನ್ನು ಪಕ್ಕದಲ್ಲೇ ನಿಲ್ಲಿಸಿ ಬೆಳಕು ಬಿಟ್ಟು ನೋಡಿದರೂ ಚಿರತೆ ಕದಲಲಿಲ್ಲ. ನಂತರ ಕಾರಿನ ಹಾರನ್‌ ಮಾಡಿದಾಗ ನಿದ್ರೆಯಿಂದ ಎದ್ದ ಚಿರತೆ ಕಾರಿನ ಲೈಟ್‌ ಬೆಳಕಿಗೆ ಮಂಕಾಗಿ ಕೆಲಕಾಲ ಅಲುಗಾಡದೆ ಅಲ್ಲೇ ಕುಳಿತುಕೊಂಡಿದೆ. ನಂತರ ಕಾರಿನ ಹಾರನ್‌ ಜೋರಾಗಿ ಹೊಡೆದಾಗ ಚಿರತೆ ಅಲ್ಲಿಂದ ಓಡಿಹೋಗಿದೆ. ಈ ಮಾರ್ಗದಲ್ಲಿ ಸಂಚರಿಸುವಾಗ ಐದಾರು ಚಿರತೆಗಳನ್ನು ನೋಡಿದ್ದು, ಪ್ರಯಾಣಿಕರು ಈ ಪ್ರದೇಶದಲ್ಲಿ ವಾಹನಗಳನ್ನು ನಿಲ್ಲಿಸದಂತೆ ಮನವಿ ಮಾಡಿದ್ದಾರೆ.