ಕೊಡಗಿನಲ್ಲಿ ಮತ್ತೆ ಭೂ ಕುಸಿತ ಭೀತಿ: ಐದು ದಿನಗಳ ಭರ್ಜರಿ ಮಳೆಗೆ ಧರೆಗುರುಳಿದ ಮರ, ವಿದ್ಯುತ್ ಕಂಬಗಳು
ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಸಂಜೆಯಿಂದ ಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮರಗಳು, ಕಂಬಗಳು ಬೀಳುತ್ತಿದ್ದು, ಮತ್ತೆ ಭೂ ಕುಸಿತದ ಭೀತಿ ಎದುರಾಗಿದೆ.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜು.22): ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಸಂಜೆಯಿಂದ ಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿದ್ದು, ಜಿಲ್ಲೆಯಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಬಿಟ್ಟು ಬಿಡದೆ ಮಳೆ ಸುರಿಯುತ್ತಿರುವುದರಿಂದ ಜನರು ಮನೆಯಿಂದ ಹೊರಗೆ ಬರಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದ್ದು, ಹೊರಗೆ ಬರಲು ಹಿಂದೆ ಮುಂದೆ ನೋಡುತ್ತಿದ್ದಾರೆ.
ಚಂಡಮಾರುತ್ತವೇನೋ ಎನ್ನುವ ರೀತಿ ಭೀಕರ ಗಾಳಿ ಬೀಸುತ್ತಿದ್ದು ಜಿಲ್ಲೆಯ ಹಲವೆಡೆ ಮರ, ವಿದ್ಯುತ್ ಕಂಬಗಳು ಧರೆಗುರುಳಿವೆ. ಇದರಿಂದ ವಾಹನಗಳ ಸಂಚಾರಕ್ಕೂ ತೀವ್ರ ಸಮಸ್ಯೆಯಾಗಿದೆ. ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ, ಕುಶಾಲನಗರ ಮತ್ತು ಪೊನ್ನಂಪೇಟೆ ತಾಲ್ಲೂಕುಗಳಲ್ಲಿ ಭಾರೀ ಮಳೆಯಾಗುತ್ತಿದೆ. ಮಡಿಕೇರಿ ನಗರದ ಮುತ್ತಪ್ಪ ದೇವಾಲಯದ ಬಳಿ ಶನಿವಾರ ಬೆಳಿಗ್ಗೆ ಬೃಹತ್ ಗಾತ್ರದ ಮರ ಅಬ್ಬಿಫಾಲ್ಸ್ ಮತ್ತು ಮಾಂದಲಪಟ್ಟಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಉರುಳಿ ಬಿದ್ದಿತ್ತು. ಇದರಿಂದ ಎರಡು ವಿದ್ಯತ್ ಕಂಬಗಳು ಕೂಡ ಉರುಳಿ ಬಿದ್ದವು.
ಮಳೆಗಾಲದಲ್ಲಿ ಪ್ರವಾಸಿಗರನ್ನು ಸೆಳೆಯುವ ಚಾರ್ಮಾಡಿಯ ಮಿನಿ ಜಲಪಾತಗಳು: ಎಂದೂ ನೋಡಿರದ ದೃಶ್ಯಕಾವ್ಯಗಳು
ಮರ ಮತ್ತು ವಿದ್ಯುತ್ ಕಂಬಗಳು ಬಿದ್ದಿದ್ದರಿಂದ ಮಡಿಕೇರಿಯಿಂದ ಅಬ್ಬಿಫಾಲ್ಸ್ ಮತ್ತು ಮಾಂದಲಪಟ್ಟಿಯ ರಸ್ತೆ ಸಂಪರ್ಕ ಕಡಿತಗೊಂಡಿತು. ಇದರಿಂದ ಎರಡು ಪ್ರವಾಸಿ ತಾಣಗಳಿಗೆ ಹೋಗುವ ನೂರಾರು ಪ್ರವಾಸಿಗರು ಮತ್ತು ಸ್ಥಳೀಯ ಪ್ರಯಾಣಿಕರು ಎರಡು ಗಂಟೆಗಳ ಕಾಲ ಪರದಾಡಬೇಕಾಯಿತು. ಬಳಿಕ ಪೊಲೀಸ್, ಕೆಇಬಿ ಮತ್ತು ಸಾರ್ವಜನಿಕರು ಸೇರಿ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿದರು. ಇನ್ನು ಪೊನ್ನಂಪೇಟೆ ತಾಲ್ಲೂಕಿನ ಹೈಸೊಡ್ಲೂರು ಗ್ರಾಮದ ರಸ್ತೆಯಲ್ಲಿ ಶುಕ್ರವಾರ ಸಂಜೆಯೇ ಬೃಹತ್ ಗಾತ್ರದ ಮರ ಬಿದ್ದು ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಮರವನ್ನು ತೆರವುಗೊಳಿಸದೆ ರಸ್ತೆ ಸಂಪರ್ಕ ಇಲ್ಲದೆ ಸ್ಥಳೀಯರು ಪರದಾಡಿದರು. ಆದರೆ ಶನಿವಾರ ಸಂಜೆ ಪಂಚಾಯಿತಿ ಸಿಬ್ಬಂದಿ ಮತ್ತು ಸ್ಥಳೀಯರು ಮರವನ್ನು ತೆರವುಗೊಳಿಸಿದ್ದಾರೆ.
ಇನ್ನು ಮಡಿಕೇರಿ ತಾಲ್ಲೂಕಿನ ಆವಂದೂರಿನಲ್ಲಿ ಯೋಗೀಶ್ ಎಂಬುವರ ಮನೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದೆ. ಮರ ಬಿದ್ದ ರಭಸಕ್ಕೆ ವಿದ್ಯುತ್ ಕಂಬವೂ ಮನೆ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಸಮಸ್ಯೆ ಆಗಿಲ್ಲ. ಇನ್ನು ಮಡಿಕೇರಿ ತಾಲ್ಲೂಕಿನ ಸುತ್ತಮುತ್ತ ಭಾರೀ ಮಳೆಯಾಗುತ್ತಿದ್ದು, ಹಾರಂಗಿ ಜಲಾಶಯಕ್ಕೆ ಸಾಕಷ್ಟು ನೀರು ಹರಿದು ಬರುತ್ತಿದೆ. 2858 ಅಡಿ ಎತ್ತರದ ಜಲಾಶಯಕ್ಕೆ 2854.30 ಅಡಿಯಷ್ಟು ನೀರು ತುಂಬಿದೆ. ಹಾರಂಗಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಶನಿವಾರ ಸಂಜೆ 18000 ಕ್ಯೂಸೆಕ್ ನೀರು ಹರಿದು ಬರುತಿತ್ತು. ಹೀಗಾಗಿ ಜಲಾಶಯ ಭರ್ತಿಯಾಗುವ ಸಾಧ್ಯತೆ ಇರುವುದರಿಂದ ಶನಿವಾರ ಸಂಜೆ ಆರು ಗಂಟೆ ವೇಳೆ ಜಲಾಶಯದ ನಾಲ್ಕು ಗ್ರೆಸ್ ಗೇಟ್ಗಳನ್ನು ತೆರೆದು ನದಿಗೆ 2000 ಸಾವಿರ ಕ್ಯೂಸೆಕ್ ನೀರನ್ನು ಹರಿಸುವುದಾಗಿ ಹಾರಂಗಿ ಅಧಿಕಾರಿಗಳು ಮಾಹಿತಿ ನೀಡಿದರು.
ಮಳೆ ಕೊರತೆ ನಡುವೆಯೂ ಜಲಾಶಯ ಭರ್ತಿ, ಈ ವರ್ಷ ತುಂಬಿದ ರಾಜ್ಯದ ಮೊಟ್ಟ ಮೊದಲ ಡ್ಯಾಂಗೆ ಬಾಗಿನ ಅರ್ಪಣೆ
ಹೀಗಾಗಿ ನದಿಪಾತ್ರದ ಜನರು ಎಚ್ಚರಿಕೆ ವಹಿಸಬೇಕು. ತಮ್ಮ ಆಸ್ತಿ, ಪಾಸ್ತಿ ಮತ್ತು ಜಾನುವಾರಗಳ ಬಗ್ಗೆ ಗಮನಹರಿಸುವಂತೆ ಹಾರಂಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ತಡವಾಗಿ ಮಳೆ ಶುರುವಾಗಿದ್ದು ಈಗಾಗಲೇ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ. ಹೀಗಾಗಿ ಶಾಸಕರು ಸಾರ್ವಜನಿಕರಿಗೆ ತೊಂದರೆ ಆಗದಂತೆ ನಿಗಾವಹಿಸಿ ನದಿಗೆ ನೀರು ಹರಿಸುವಂತೆ ಸ್ಥಳೀಯರಾದ ಭಾಸ್ಕರ್ ನಾಯಕ್ ಅವರು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಇನ್ನೂ ಐದು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದ್ದು ಬೆಟ್ಟ ಗುಡ್ಡ ಹಾಗೂ ನದಿ ಪಾತ್ರ ಪ್ರದೇಶಗಳ ಜನರಲ್ಲಿ ಆತಂಕ ಮೂಡಿದೆ.