ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮಣ್ಣು ಕುಸಿತ: ಕೆಲ ಗಂಟೆಗಳ ಕಾಲ ಸಂಚಾರ ಸ್ಥಗಿತ, ಸಾಲುಗಟ್ಟಿ ನಿಂತ ವಾಹನಗಳು
ಕಳೆದ ಮೂರು ನಾಲ್ಕು ದಿನಗಳಿಂದ ಸಂಜೆ ವೇಳೆಗೆ ಮಲೆನಾಡಿನಲ್ಲಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ಥ ಉಂಟಾಗುತ್ತಿದೆ. ಇಂದು ಕೂಡ ಸಂಜೆ ವೇಳೆಯಲ್ಲಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸುರಿದ ಮಳೆಯಿಂದ ಮಣ್ಣು ಕುಸಿತವಾಗಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಅ.09): ಕಳೆದ ಮೂರು ನಾಲ್ಕು ದಿನಗಳಿಂದ ಸಂಜೆ ವೇಳೆಗೆ ಮಲೆನಾಡಿನಲ್ಲಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ಥ ಉಂಟಾಗುತ್ತಿದೆ. ಇಂದು ಕೂಡ ಸಂಜೆ ವೇಳೆಯಲ್ಲಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸುರಿದ ಮಳೆಯಿಂದ ಮಣ್ಣು ಕುಸಿತವಾಗಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಎರಡು ಗಂಟೆಗೂ ಅಧಿಕ ಕಾಲ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಟ ನಡೆಸಿದರು.
ರಸ್ತೆಯಲ್ಲಿ ಭಾರೀ ಪ್ರಮಾಣದ ಮಳೆ ನೀರು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಚಾರ್ಮಾಡಿ ಘಾಟಿಯ ಮೂರನೇ ತಿರುವಿನ ಬಳಿ ಮಣ್ಣು ಕುಸಿತದ ಜೊತೆಗೆ ಮರಗಳು ಉರುಳಿ ಬಿದ್ದಿದೆ. ಮರಗಳು ರಸ್ತೆಗೆ ಬಿದ್ದ ಪ್ರದೇಶದಲ್ಲಿ ಒಂದು ವಾಹನ ಮಾತ್ರ ಸಂಚರಿಸುವಷ್ಟು ಜಾಗ ಇತ್ತು. ಆದ್ರೆ ಬೇಕಾಬಿಟ್ಟಿ ವಾಹನಗಳನ್ನು ನುಗ್ಗಿಸಿದ ಕಾರಣ ಟ್ರಾಫಿಕ್ ಜಾಮ್ ಸಮಸ್ಯೆ ತಲೆದೋರಿತು. ಘಾಟಿ ಪ್ರದೇಶದಲ್ಲಿ ನಿರಂತರ ಎರಡು ತಾಸಿಗಿಂತ ಅಧಿಕಕಾಲ ಮಳೆ ಸುರಿದ ಕಾರಣ ಘಾಟಿ ರಸ್ತೆ ನದಿಯಂತಾಗಿತ್ತು.ಘಾಟಿ ಪ್ರದೇಶದಲ್ಲಿರುವ ಹಲವಾರು ಜಲಪಾತಗಳು ರಸ್ತೆ ತನಕವು ಧುಮ್ಮಿಕ್ಕಿದ ಕಾರಣ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಜಲಪಾತಗಳಿಂದ ರಸ್ತೆಗೆ ಬಿದ್ದ ನೀರು ಚರಂಡಿ ಇಲ್ಲದ ಕಾರಣ ರಸ್ತೆಯಲ್ಲಿ ಹಳ್ಳದಂತೆ ಹರಿಯಿತು.
ಕೊಟ್ಟಿಗೆ ಹಾರದಲ್ಲಿ ನಿಂತ ವಾಹನಗಳು: ಚಾರ್ಮಾಡಿ ಘಾಟ್ ಯಲ್ಲಿ ಮಳೆ ಸುರಿಯುತ್ತಿದ್ದಾರೆ , ಇತ್ತ ಘಾಟ್ ರಸ್ತೆ ಮೇಲೆಭಾಗವಾದ ಕೊಟ್ಟಿಗೆಹಾರದಲ್ಲಿ ಮೋಡ ಕವಿದ ವಾತಾವರಣವಿತ್ತು. ಘಾಟ್ ರಸ್ತೆಯಲ್ಲಿ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ವಾಹನಗಳನ್ನು ನಿಲ್ಲಿಸುವ ಕಾರ್ಯವನ್ನು ಪೊಲೀಸರು ಮಾಡಿದರು. ಇದರಿಂದ ದಕ್ಷಿಣ ಕನ್ನಡ ಹಾಗೂ ಮಲೆನಾಡಿನ ಸಂಪರ್ಕ ಕೆಲ ಕಾಲ ಸ್ಥಗತವಾಗಿತ್ತು. ಕೊಟ್ಟಿಗೆಹಾರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಭಾರೀ ಸಂಖ್ಯೆಯಲ್ಲಿ ವಾಹನಗಳು ನಿಂತಲ್ಲೇ ನಿಂತು ಪ್ರವಾಸಿಗರು, ವಾಹನ ಸವಾರರು ಪರದಾಟ ನಡೆಸಿದರು.
ಬಾಹುಬಲಿ ಶೂಟಿಂಗ್ ಟೈಮ್‌ನಲ್ಲಿ ಪ್ರಭಾಸ್‌ನ ಹೀಗೆ ಕರೆಯುತ್ತಿದ್ದರಂತೆ ಅನುಷ್ಕಾ ಶೆಟ್ಟಿ!
ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿತ ಹಾಗೂ ಮರ ಉರುಳಿರುವ ಕುರಿತು ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಜೆಸಿಬಿ ಮೂಲಕ ಮರ ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು. ಮರ ಬೀಳುವ ವೇಳೆ ಸಣ್ಣ ಪ್ರಮಾಣದ ಗುಡ್ಡ ಕುಸಿತ ಉಂಟಾಗಿದ್ದು, ಇಲ್ಲಿ ಯಾವುದೇ ಹೆಚ್ಚಿನ ಸಮಸ್ಯೆ ಉಂಟಾಗಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ತಿಳಿಸಿದ್ದಾರೆ.