Landslide: ಮಡಿಕೇರಿ ಜಿಲ್ಲಾಧಿಕಾರಿ ಕಚೇರಿ ತಡೆಗೋಡೆ ಬಿರುಕು
ಕೊಡಗಿನಾದ್ಯಂತ ಭಾರೀ ಮಳೆ ಸುರಿದಿರುವ ಹಿನ್ನೆಲೆ ಪ್ರವಾಹ ಪರಿಸ್ಥಿತಿ ಸೃಷ್ಟಿಸಿದೆ. ಮಡಿಕೇರಿಯಲ್ಲಿ ಡಿಸಿ ಕಚೇರಿಯ ತಡೆಗೋಡೆ ಕುಸಿದಿದ್ದು ಮಳೆಯಿಂದಾಗಿ ಅಪಾರ ಹಾನಿಯಾಗಿದೆ.
ಮಡಿಕೇರಿ (ಜು.18): ಭಾರೀ ಮಳೆ ಸುರಿದಿರುವ ಹಿನ್ನೆಲೆ ನಗರದ ಜಿಲ್ಲಾಧಿಕಾರಿ ಕಚೇರಿಯ ಕೆಳ ಭಾಗದಲ್ಲಿ ನಿರ್ಮಿಸಲಾಗುತ್ತಿರುವ ತಡೆಗೋಡೆ ಬಿರುಕು ಬಿಡುತ್ತಿದ್ದು, ಕುಸಿಯುವ ಆತಂಕ ಎದುರಾಗಿದೆ. ಈಗಾಗಲೇ ಕುಸಿದುಬೀಳುವ ಹಂತಕ್ಕೆ ತಲುಪಿದೆ. ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ಮಂಗಳೂರು ರಸ್ತೆ ಸಂಚಾರ ಬಂದ್ ಮಾಡಲಾಗಿದೆ. ಬದಲಿ ಮಾರ್ಗದಲ್ಲಿ ಸಂಚರಿಸಲು ಸೂಚನೆ ನೀಡಲಾಗಿದೆ.
ಮಡಿಕೇರಿಯಿಂದ(Madikeri) ಮಂಗಳೂರಿಗೆ(Mangaluru) ತೆರಳುವವರು ಮತ್ತು ಮಂಗಳೂರಿನಿಂದ ಮಡಿಕೇರಿಗೆ ಬರುವವರು ಮೇಕೆರಿ- ತಾಳತ್ತಮನೆ- ಅಪ್ಪಂಗಳ ಮಾರ್ಗವಾಗಿ ಸಾಗುವಂತೆ ಸೂಚನೆ ನೀಡಲಾಗಿದೆ. ತಿಮ್ಮಯ್ಯ ವೃತ್ತ (General Thimmaiah Circle)ದಲ್ಲಿ ಶನಿವಾರ ರಾತ್ರಿ ಬ್ಯಾರಿಕೇಡ್ ಅಳವಡಿಸಿ ಮಂಗಳೂರು ರಸ್ತೆಯನ್ನು ಸಂಚಾರಿ ಪೊಲೀಸರು ಬಂದ್ ಮಾಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಮಾರ್ಗ ಬಂದ್ ಮಾಡಲಾಗಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಜನರಲ್ ತಿಮ್ಮಯ್ಯ ವೃತ್ತ ದಿಂದ ಮಂಗಳೂರು ರಸ್ತೆ ಬಂದ್ ಮಾಡಲಾಗಿರುವುದರಿಂದ ಮೇಕೇರಿ ಮಾರ್ಗವಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿದ್ದು ಟ್ರಾಫಿಕ್ ಜಾಮ್ ಉಂಟಾಗಿದೆ. ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ತಡೆಗೋಡೆ ಕುಸಿಯುವ ಹಂತದಲ್ಲಿರುವುದರಿಂದ ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: 373 ಮಂದಿ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಣೆ
ರಾಷ್ಟ್ರೀಯ ಹೆದ್ದಾರಿ ಬಿರುಕು!: ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ 275ನಲ್ಲಿ ಮತ್ತೊಂದು ಆತಂಕ ಎದುರಾಗಿದೆ. ಮಡಿಕೇರಿ- ಸುಳ್ಯ ನಡುವಿನ ದೇವರಕೊಲ್ಲಿ-ಕೊಯನಾಡು ಬಳಿ ರಸ್ತೆ ಬಿರುಕು ಬಿಟ್ಟದೆ. ರಸ್ತೆ ಕತ್ತರಿಸಿದಂತೆ ಬಿರುಕು ಬಿಟ್ಟಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಆತಂಕ ಹೆಚ್ಚಾಗಿದೆ. ಬಿರುಕು ಬಿಟ್ಟಿದ್ದಲ್ಲದೆ ಸ್ವಲ್ಪ ಜಗ್ಗಿದ ಹಾಗೆ ರಾಷ್ಟ್ರೀಯ ಹೆದ್ದಾರಿ ಕಾಣುತ್ತಿದೆ. ರಸ್ತೆಯಲ್ಲಿನ ಬಿರುಕು ಹೆಚ್ಚಾದರೆ ರಸ್ತೆ ಸಂಪರ್ಕ ಬಂದ್ ಆಗುವ ಸಾಧ್ಯತೆ ಎದುರಾಗಿದೆ. ಬಿರುಕು ಬಿಟ್ಟಿರುವ ರಸ್ತೆಗೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ.
ಕೊಡಗಿನಲ್ಲಿ ಮಳೆ ತೀವ್ರತೆ ಇಳಿಮುಖ: ಕೊಡಗು ಜಿಲ್ಲಾದ್ಯಂತ ಭಾನುವಾರ ಮಳೆ ಪ್ರಮಾಣ ಕಡಿಮೆಯಾಗಿದ್ದು, ಪ್ರವಾಹ ಕೂಡ ಇಳಿಮುಖವಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವು ಕಡೆಗಳಲ್ಲಿ ಮಳೆ ಬಿಡುವು ನೀಡಿ ಸಾಧಾರಣವಾಗಿ ಸುರಿಯಿತು.ಇದನ್ನೂ ಓದಿ: ಕೊಡವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದಾತ ಬಂಧನ
ಸೋಮವಾರ ಬೆಳಗ್ಗೆ ವರಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಚ್ ಸೂಚನೆ ನೀಡಿದೆ. ಮಳೆ ಕಡಿಮೆ ಹಿನ್ನೆಲೆಯಲ್ಲಿ ಸೋಮವಾರ ಶಾಲಾ-ಕಾಲೇಜುಗಳು ಎಂದಿನಂತೆ ಇರಲಿದೆ. ಭಾಗಮಂಡಲದಲ್ಲಿ ಕೂಡ ಮಳೆ ಪ್ರಮಾಣ ಇಳಿಮುಖಗೊಂಡಿದ್ದು, ಭಾಗಮಂಡಲ- ನಾಪೋಕ್ಲು, ಭಾಗಮಂಡಲ- ಮಡಿಕೇರಿ ರಸ್ತೆ ಮೇಲೆ ನೀರು ಇಳಿಮುಖವಾಗಿದೆ. ಮಳೆ ಕಡಿಮೆಯಾಗಿರುವುದರಿಂದ ನದಿ ತಟದಲ್ಲಿ ವಾಸಿಸುತ್ತಿರುವವರು ನಿಟ್ಟುಸಿರು ಬಿಡುವಂತಾಗಿದೆ. ಅಯ್ಯಂಗೇರಿ 124 ಮಿ.ಮೀ, ಮದೆನಾಡು 167 ಮಿ.ಮೀ, ಬೇಂಗೂರು 125 ಮಿ.ಮೀ, ಗಾಳಿಬೀಡು ಗ್ರಾಪಂ ವ್ಯಾಪ್ತಿಯಲ್ಲಿ 127 ಮಿ.ಮೀ ಮಳೆಯಾಗಿದೆ.
ರಾಮನಕೊಲ್ಲಿ ಸೇತುವೆಗೆ ಹಾನಿಯಾಗಲ್ಲ; ಆತಂಕ ಬೇಡ: ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ 2ನೇ ಮೊಣ್ಣಂಗೇರಿಯಲ್ಲಿ ತೀವ್ರ ಮಳೆಯಿಂದಾಗಿ ರಾಮನಕೊಲ್ಲಿ ಸೇತುವೆಗೆ ಹಾನಿಯಾಗಿದೆ ಎಂಬ ಮಾಹಿತಿಯಂತೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ನಾಗೇಂದ್ರಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜವರೇಗೌಡ, ತಹಸೀಲ್ದಾರ್ ಮಹೇಶ್ ಮತ್ತು ಹೋಬಳಿ ಮಟ್ಟದ ನೋಡಲ್ ಅಧಿಕಾರಿ ಅವರೊಂದಿಗೆ ಶನಿವಾರ ಸ್ಥಳ ಪರಿಶೀಲನೆ ನಡೆಸಿದರು.
ರಾಮನಕೊಲ್ಲಿ ಸೇತುವೆಗೆ ಯಾವುದೇ ಹಾನಿಯಾಗಿಲ್ಲ ಎಂದು ಕಾರ್ಯಪಾಲಕ ಅಭಿಯಂತರರಾದ ನಾಗೇಂದ್ರಪ್ಪ ಅವರು ಸ್ಪಷ್ಟಪಡಿಸಿದ್ದಾರೆ.ಈ ಸೇತುವೆ ಕಾಮಗಾರಿಯು ಇನ್ನೂ ಪ್ರಗತಿಯಲ್ಲಿದ್ದು, ಸೇತುವೆಗೆ ಹಾನಿಯಾಗಿಲ್ಲ , ಮಳೆಯಿಂದ ಸಂಪರ್ಕ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲವಾದ್ದರಿಂದ, ಈ ಸ್ಥಳದಲ್ಲಿ ಮರಳು ಮೂಟೆಗಳನ್ನು ಇಟ್ಟು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.