ಅರ್ಹರಿಗೆ ಅನ್ಯಾಯವಾಗಲು ಬಿಡೆವು: ಮಂಜುನಾಥ್
ಜನಪ್ರತಿನಿಧಿಯಾಗಿ ತಮ್ಮನ್ನು ಆಯ್ಕೆ ಮಾಡಿದ ಜನರ ವಿಶ್ವಾಸಕ್ಕೆ ಚ್ಯುತಿ ಬರದಂತೆ ಹಕ್ಕು ಪತ್ರ, ಸಾಗುವಳಿ ಚೀಟಿ ವಿತರಣೆ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿರುವುದಾಗಿ ಮಾಗಡಿ ಕ್ಷೇತ್ರ ಶಾಸಕ ಎ.ಮಂಜುನಾಥ್ ಹೇಳಿದರು.
ರಾಮನಗರ : ಜನಪ್ರತಿನಿಧಿಯಾಗಿ ತಮ್ಮನ್ನು ಆಯ್ಕೆ ಮಾಡಿದ ಜನರ ವಿಶ್ವಾಸಕ್ಕೆ ಚ್ಯುತಿ ಬರದಂತೆ ಹಕ್ಕು ಪತ್ರ, ಸಾಗುವಳಿ ಚೀಟಿ ವಿತರಣೆ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿರುವುದಾಗಿ ಮಾಗಡಿ ಕ್ಷೇತ್ರ ಶಾಸಕ ಎ.ಮಂಜುನಾಥ್ ಹೇಳಿದರು.
ತಾಲೂಕಿನ ಕೈಲಾಂಚ ಹೋಬಳಿ ಹುಚ್ಚಮ್ಮನದೊಡ್ಡಿಯಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ‍್ಯಕ್ರಮದಲ್ಲಿ ಮಾಗಡಿ ವಿಧಾನಸಭಾ ಕ್ಷೇತ್ರದ ಬಿಡದಿ ಹೋಬಳಿ ಗೋಪಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಲ್ಲೆದೊಡ್ಡಿ, ಎಂ.ಗೋಪಳ್ಳಿ, ಮಾರುತಿಪುರ (ವಡ್ಡರದೊಡ್ಡಿ) ಗ್ರಾಮದ 55 ಫಲಾನುಭವಿಗಳಿಗೆ ಸಾಗುವಳಿ ಚೀಟಿ ವಿತರಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ಆದ್ಯತೆ ನೀಡದೆ ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ಹಾಗೂ ಹಕ್ಕು ಪತ್ರ ನೀಡಲು ಕ್ರಮ ವಹಿಸಲಾಗಿದೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿಯೇ 94ಸಿ ಅಡಿಯಲ್ಲಿ ಅರ್ಜಿ ಹಾಕಿದ 300ಕ್ಕೂ ಹೆಚ್ಚು ಜನರಿಗೆ ಹಕ್ಕು ಪತ್ರ ಕೊಡಿಸಲಾಗಿದೆ ಎಂದರು.
1991ರಿಂದಲೂ ಅರ್ಜಿ ಹಾಕಿದವರಿಗೆ ಸಾಗುವಳಿ ಚೀಟಿ ನೀಡಿರಲಿಲ್ಲ. ಸಾಗುವಳಿದಾರರಿಗೆ ಹಕ್ಕು ಕೊಡಿಸಲೇಬೇಕೆಂಬ ಉದ್ದೇಶದಿಂದ ಇದ್ದಂತಹ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿದ್ದೇವೆ. ಸದ್ಯಕ್ಕೆ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಗ್ರಾಮಗಳ ಜನರಿಗೆ ಸಾಗುವಳಿ ಚೀಟಿ ನೀಡಲು ಆಗುವುದಿಲ್ಲ. ಬಿಲ್ಲೆದೊಡ್ಡಿ, ಎಂ.ಗೋಪಳ್ಳಿ, ಮಾರುತಿಪುರ ಹಾಗೂ ರಾಮನಹಳ್ಳಿ ಭಾಗದವರಿಗೆ ಸಾಗುವಳಿ ಚೀಟಿ ನೀಡಲಾಗುತ್ತಿದೆ. ಉಳಿದವರಿಗೆ ಶೀಘ್ರದಲ್ಲಿಯೇ ವಿತರಿಸಲು ಕ್ರಮ ವಹಿಸಲಾಗುವುದು. ಭೂಮಿ ಉಳುಮೆ ಮಾಡುತ್ತಿರುವ ಅರ್ಹ ರೈತರಿಗೆ ಅನ್ಯಾಯವಾಗಲು ನಾವು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಸರ್ಕಾರಿ ಭೂಮಿಯನ್ನು ನಂಬಿ ಅನೇಕರು ಜೀವನ ಕಟ್ಟಿಕೊಂಡಿದ್ದಾರೆ. ಕೋಟ್ಯಂತರ ರುಪಾಯಿ ಬೆಲೆ ಬಾಳುವ ಆ ಭೂಮಿಗೆ ಮಧ್ಯವರ್ಧಿಗಳ ಹಾವಳಿ ಇಲ್ಲದೆ ಪಾರದರ್ಶಕವಾಗಿ ಸಾಗುವಳಿ ಚೀಟಿ ಹಾಗೂ ಹಕ್ಕು ಪತ್ರ ಕೊಡಿಸಿದ್ದೇವೆ. ಹಕ್ಕುಪತ್ರ ಪಡೆದ ಸಮಾಧಾನ ನಿಮಗಾದರೆ, ಹಕ್ಕು ಕೊಡಿಸಿದ ತೃಪ್ತಿ ನಮಗಿದೆ. ಇದೊಂದು ಪುಣ್ಯದ ಕೆಲಸ ಎಂದು ಮಂಜುನಾಥ್ ತಿಳಿಸಿದರು.
ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ನಾನು ಶಾಸಕಿಯಾದ ಮೇಲೆ ಈ ಭಾಗದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಆಗಿವೆ. ಜನರ ಭಾವನೆಗಳಿಗೆ ಧಕ್ಕೆ ಆಗದಂತೆ ಪ್ರಾಮಾಣಿಕವಾಗಿ ಕೆಲಸ ಮಾಡಿದ ತೃಪ್ತಿ ನನಗಿದೆ. ನಾನು ಮಾಜಿ ಮುಖ್ಯಮಂತ್ರಿ ಪತ್ನಿ ಎಂದು ಯಾರೂ ಕ್ಷೇತ್ರಕ್ಕೆ ಅನುದಾನ ನೀಡಲಿಲ್ಲ. ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಿಯೇ ಅನುದಾನ ತಂದಿದ್ದೇನೆ. ಹುಚ್ಚಮ್ಮನದೊಡ್ಡಿಯಲ್ಲಿ ಏತ ನೀರಾವರಿ ಯೋಜನೆ, ಶುದ್ಧ ಕುಡಿಯುವ ನೀರಿನ ಘಠಕ, ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚಿನ ಶ್ರಮ ವಹಿಸಿದೆ. ಒಬ್ಬ ಮಹಿಳೆ ಇಷ್ಟೆಲ್ಲ ಕೆಲಸ ಮಾಡಿದ್ದಾಳಲ್ಲ ಎಂದು ನೀವು ನನ್ನ ಬೆನ್ನು ತಟ್ಟಬೇಕು ಎಂದರು.
ನೀವು ಮನೆ ಮಗ ಕುಮಾರಸ್ವಾಮಿ ಅವರನ್ನು ಬೆಳೆಸಿದವರು. ನನಗೂ ಆಶೀರ್ವಾದ ಮಾಡಿದ್ದೀರಿ. ನಾವೆಂದೂ ನಿಮ್ಮಗಳ ಭಾವನೆಗಳಿಗೆ ಧಕ್ಕೆಯಾಗುವಂತಹ ಕೆಲಸ ಮಾಡಿಲ್ಲ. ಅದ್ದರಿಂದ ನನ್ನ ಮಗ ನಿಖಿಲ್ ಕುಮಾರಸ್ವಾಮಿ ಹಾಗೂ ಶಾಸಕ ಎ.ಮಂಜುನಾಥ್ ಮೇಲೂ ನಿಮ್ಮ ಆಶೀರ್ವಾದ ಇರಲಿ ಎಂದು ಅನಿತಾ ಮನವಿ ಮಾಡಿದರು.
ಕಾರ‍್ಯಕ್ರಮದಲ್ಲಿ ತಹಸೀಲ್ದಾರ್ ವಿಜಯ…ಕುಮಾರ್, ಉಪ ತಹಸೀಲ್ದಾರ್‌ಗಳಾದ ರುದ್ರಮ್ಮ, ಭಾಸ್ಕರ್, ರಾಜಶ್ವ ನಿರೀಕ್ಷಕರಾದ ಪುಟ್ಟರಾಜು, ರಾಜಶೇಖರ್, ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಎಚ್.ಕೆ.ಲೋಕೇಶ್, ಮುಖಂಡರಾದ ಎಚ್.ಬಿ.ಸಿದ್ದರಾಜು, ಎಚ್.ಜಿ.ಲೋಕೇಶ್, ಧನಂಜಯ, ಎಚ್.ಪಿ.ಕುಮಾರ್, ಉಮೇಶ್, ಶಿವರಾಜು, ಅಂಗಡಿ ಜಯರಾಮಯ್ಯ, ಸುರೇಶ್, ಪಿಡಿಒ ಗೋಪಳ್ಳಿ ಲೋಕೇಶ್,ಕಾರ್ಯದರ್ಶಿ ಚಂದ್ರಶೇಖರ್, ಗ್ರಾಪಂ ಅಧ್ಯಕ್ಷ ರಾಮಚಂದ್ರಯ್ಯ, ಸದಸ್ಯರಾದ ನವೀನ್ ಕುಮಾರ್, ಅನಸೂಯ, ನಾಗರಾಜು, ಟಿಎಚ್‌ಒ ಶಶಿಕಲಾ ಇತರರು ಹಾಜರಿದ್ದರು.