ಎಸ್.ಜಿ. ತೆಗ್ಗಿನಮನಿ 

ನರಗುಂದ(ಸೆ.30): ಮಲಪ್ರಭಾ ನದಿಗೆ ಪ್ರವಾಹ ಬಂದಾಗೆಲ್ಲ ತೀವ್ರ ಸಂಕಷ್ಟ ಅನುಭವಿಸುವ ನದಿ ತಟದಲ್ಲಿರುವ ತಾಲೂಕಿನ ಲಖಮಾಪುರ ಗ್ರಾಮ ಸ್ಥಳಾಂತರ ಮಾಡಲು ಭೂಮಿ ಹುಡುಕುವುದೇ ಈಗ ಅಧಿಕಾರಿಗಳಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕಾರಣ, ಈ ಗ್ರಾಮ ಸ್ಥಳಾಂತರ ಮಾಡಲು ಹೊಸ ಜಾಗವೇ ಅಧಿಕಾರಿಗಳಿಗೆ ಲಭಿಸುತ್ತಿಲ್ಲ. 

ಈ ಬಾರಿ ಪ್ರವಾಹ ಬಂದಾಗ ಗ್ರಾಮ ತೊರೆದಿದ್ದ ಸಂತ್ರಸ್ತರು, ತಮ್ಮ ಗ್ರಾಮಕ್ಕೆ ಹೋಗಿ ಜಲಾವೃತಗೊಂಡ ಮನೆಗಳನ್ನು ಸ್ವಚ್ಛ ಮಾಡಿ ವಾಸ ಮಾಡಲು ಪ್ರಾರಂಭಿಸಿದ್ದರು. ಆದರೆ, ಸದ್ಯ ಈ ಮನೆಗಳು ಪ್ರವಾಹದಿಂದ ಸಂಪೂರ್ಣ ಜಲಾವೃತಗೊಂಡು ಯಾವ ಸಮಯದಲ್ಲಿ ಕುಸಿದು ಬೀಳುವವೋ ಎಂದು ಸಂತ್ರಸ್ತರು ಜೀವಭಯದಲ್ಲಿ ದಿನ ದೂಡುತ್ತಿದ್ದಾರೆ. ಮೇಲಾಗಿ ಎಲ್ಲ ಗ್ರಾಮಸ್ಥರ ಒಪ್ಪಿಗೆ ಪಡೆದು ಈ ಗ್ರಾಮವನ್ನು ಸಂಪೂರ್ಣ ಸ್ಥಳಾಂತರ ಮಾಡಬೇಕೆಂದು ಅಧಿಕಾರಿಗಳು ನದಿಯಿಂದ ಸುರಕ್ಷಿತ ಪ್ರದೇಶದಲ್ಲಿ ಜಮೀನು ಖರೀದಿ ಮಾಡಿ ಸಂತ್ರಸ್ತರಿಗೆ ಸದ್ಯ ತಾತ್ಕಾಲಿಕ ಶೆಡ್‌ಗಳ ನಿರ್ಮಾಣ ಮಾಡಬೇಕಾಗಿದೆ. ಆದರೆ, ಇದಕ್ಕೆ ಭೂಮಿ ಕೊಡಲು ಯಾವ ರೈತರೂ ಮುಂದೆ ಬಾರದಿರುವುದು ಅಧಿಕಾರಿಗಳನ್ನು ಚಿಂತೆಗೀಡುಮಾಡಿದೆ. 

ಭೂಮಿ ನೀಡಲು ನಿರಾಕರಣೆ: 

ಲಖಮಾಪುರ ಗ್ರಾಮವನ್ನು ಕೊಣ್ಣೂರಿನಿಂದ ರಾಮದುರ್ಗಕ್ಕೆ ಹೋಗುವ ರಸ್ತೆ ಪಕ್ಕದಲ್ಲಿ ಸ್ಥಳಾಂತರ ಮಾಡಬೇಕೆಂದು ಸಂತ್ರಸ್ತರು ಬೇಡಿಕೆ ಇಟ್ಟಿದ್ದಾರೆ. ಈ ಪ್ರದೇಶದಲ್ಲಿ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ರೈತರ ಜಮೀನುಗಳು ಇರುವ ಪ್ರದೇಶದಲ್ಲಿ ಹಲವಾರು ರೈತರನ್ನು ಅಧಿಕಾರಿಗಳು ಸಂಪರ್ಕ ಮಾಡಿದ್ದಾರೆ. 

ಅಧಿಕಾರಿಗಳು 5 ವರ್ಷದ ಮಟ್ಟಿಗೆ ಬಾಡಿಗೆ ರೂಪದಲ್ಲಿ ಜಮೀನು ನೀಡಿ. ಒಂದು ವೇಳೆ ಖರೀದಿ ಕೊಡುತ್ತೇನೆಂದರೆ ಸರ್ಕಾರದಿಂದ ನಿಮ್ಮ ಜಮೀನನ್ನು ಖರೀದಿ ಮಾಡುತ್ತೇವೆಂದು ಹೇಳಿದರೂ ಈ ಭಾಗದ ಯಾವ ರೈತರು ಕೂಡ ಜಮೀನು ಕೊಡಲು ಒಪ್ಪದ್ದರಿಂದ ಈ ಗ್ರಾಮ ಸ್ಥಳಾಂತರ ಮಾಡುವುದು ಜಿಲ್ಲಾ ಮತ್ತು ತಾಲೂಕು ಆಡಳಿತ ಅಧಿಕಾರಿಗಳಗೆ ದೊಡ್ಡ ತೇಲಿ ನೋವು ಆಗಿದೆ. 

203 ಕುಟುಂಬಗಳು: 

ತಾಲೂಕಿನ ಬೆಳಗಾವಿ ಗಡಿ ಭಾಗಕ್ಕೆ ಹೊಂದಿರುವ ಲಖಮಾಪುರ ಗ್ರಾಮ ಚಿಕ್ಕ ಗ್ರಾಮ. ಮೇಲಾಗಿ ಈ ಗ್ರಾಮದಲ್ಲಿ 203 ಕುಟುಂಬಗಳು ಕೃಷಿ ಮತ್ತು ಹೈನುಗಾರಿಕೆ ಮಾಡಿಕೊಂಡು ಜೀವನ ಮಾಡುತ್ತಿರುವ ಜನತೆಗೆ ಪದೇ ಪದೇ ನದಿ ಪ್ರವಾಹ ಬಂದು ತೊಂದರೆ ನೀಡುತ್ತಿದೆ. 

ಈ ಬಾರಿ ಸಂತ್ರಸ್ತರು ಅಧಿಕಾರಿಗಳಿಗೆ ನಮಗೆ ಹೇಗಾದರೂ ಮಾಡಿ ಸುರಕ್ಷಿತ ಪ್ರದೇಶದಲ್ಲಿ ನಮ್ಮ ಗ್ರಾಮ ಸ್ಥಳಾಂತರ ಮಾಡಬೇಕೆಂದು ದುಂಬಾಲು ಬಿದ್ದಿದ್ದಾರೆ. ಆದರೆ ಅಧಿಕಾರಿಗಳಿಗೆ ರಾಮದುರ್ಗ ತಾಲೂಕಿನಲ್ಲಿ ಜಮೀನು ಹೊಂದಿರುವ ಹಲವಾರು ರೈತರನ್ನು ಭೇಟಿ ಮಾಡಿ ಭೂಮಿ ಖರೀದಿ ಮಾಡಲು ಪ್ರಯತ್ನ ಮಾಡಿದರೂ ಭೂಮಿ ಸಿಗದಿದ್ದರಿಂದ ಈ ಸಂತ್ರಸ್ತರಿಗೆ ಅಧಿಕಾರಿಗಳಿಗೆ ಏನು ಉತ್ತರ ನೀಡಬೇಕೆಂದು ತಿಳಿಯದಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಈ ಬಗ್ಗೆ ಮಾತಾನಾಡಿದ ಲಖಮಾಪುರ ಗ್ರಾಮದ ಸಂತ್ರಸ್ತ ವೆಂಕಪ್ಪ ಶಲ್ಲಿಕೇರಿ ಅವರು, ನಾವು ಸದ್ಯ ನಮ್ಮ ಜಮೀನಿನಲ್ಲಿ ಸ್ವಂತ ಹಣ ಖರ್ಚು ಮಾಡಿ ಶೆಡ್ ನಿರ್ಮಾಣ ಮಾಡಿಕೊಂಡು ಜೀವನ ಮಾಡುತ್ತಿದ್ದೇವೆ. ಸರ್ಕಾರ ಬೇಗ ಸುರಕ್ಷಿತ ಪ್ರದೇಶದಲ್ಲಿ ಜಮೀನು ಖರೀದಿ ಮಾಡಿ ತಾತ್ಕಾಲಿಕ ಶೆಡ್‌ಗಳ ನಿರ್ಮಿಸಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.  

ಇನ್ನು ಈ ಬಗ್ಗೆ ಮಾಹಿತಿ ನೀಡಿದ ತಹಸೀಲ್ದಾರ್ ನರಗುಂದ ಕೆ.ಬಿ. ಕೋರಿಶೆಟ್ಟರ ಅವರು, ಈ ಗ್ರಾಮ ಸ್ಥಳಾಂತರ ಮಾಡಬೇಕೆಂದು ನಾವು ರಾಮದುರ್ಗು ತಾಲೂಕಿನ ರೈತರ ಜಮೀನು ಖರೀದಿ ಮಾಡಿ ಸ್ಥಳಾಂತರ ಮಾಡಬೇಕಾಗಿದೆ. ಈಗಾಗಲೇ ನಾವು ಹಲವಾರು ರೈತರ ಹತ್ತಿರ ಹೋಗಿ ಜಮೀನು ಬಾಡಗಿ ಅಥವಾ ಖರೀದಿ ಕೊಡಬೇಕೆಂದು ಮನವಿ ಮಾಡಿಕೊಂಡರೂ ಯಾವ ರೈತರೂ ಜಮೀನು ನೀಡದ್ದರಿಂದ ನಮಗೆ ಆ ಗ್ರಾಮ ಸ್ಥಳಾಂತರ ಮಾಡಲು ತೊಂದರೆಯಾಗಿದೆ ಎಂದು ತಿಳಿಸಿದ್ದಾರೆ.