Asianet Suvarna News Asianet Suvarna News

ದಲಿತರ ಜಮೀನು ಕಬಳಿಕೆ ಹುನ್ನಾರ: ರಂಗರಾಜು ಆರೋಪ

ದಲಿತ ಸಮುದಾಯಕ್ಕೆ ಸೇರಿದ ಜಮೀನನ್ನು ನಗರಸಭೆಗೆ ಹಸ್ತಾಂತರಿಸಿಕೊಳ್ಳಲು ಶಾಸಕರು ಹಾಗೂ ನಗರಸಭೆಯವರು ಹುನ್ನಾರ ನಡೆಸುತ್ತಿದ್ದಾರೆ. ಈ ಕ್ರಮವನ್ನು ಕೈಬಿಡಬೇಕೆಂದು ನಗರಸಭಾ ಸದಸ್ಯರಾದ ರಂಗರಾಜು ಒತ್ತಾಯಿಸಿದರು.

Land grabbing of Dalits  : Rangaraju accused snr
Author
First Published Nov 24, 2023, 7:49 AM IST

  ಶಿರಾ :  ದಲಿತ ಸಮುದಾಯಕ್ಕೆ ಸೇರಿದ ಜಮೀನನ್ನು ನಗರಸಭೆಗೆ ಹಸ್ತಾಂತರಿಸಿಕೊಳ್ಳಲು ಶಾಸಕರು ಹಾಗೂ ನಗರಸಭೆಯವರು ಹುನ್ನಾರ ನಡೆಸುತ್ತಿದ್ದಾರೆ. ಈ ಕ್ರಮವನ್ನು ಕೈಬಿಡಬೇಕೆಂದು ನಗರಸಭಾ ಸದಸ್ಯರಾದ ರಂಗರಾಜು ಒತ್ತಾಯಿಸಿದರು.

ಶಾಸಕ ಟಿ.ಬಿ.ಜಯಚಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಗರಸಭೆ ಅಧ್ಯಕ್ಷೆ ಪೂಜಾ ಪ್ರಸ್ತಾಪಿಸಿದಾಗ ಕೆಲ ಕಾಲ ಸಭೆಯಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ರಂಗರಾಜು ಇದು ದಲಿತರ ಕುಟುಂಬಕ್ಕೆ ಸೇರಿದ ಜಾಗ ಅವರ ಕುಟುಂಬಸ್ಥರಿಗೆ ಒಂದು ಸೈಟು ಕೂಡ ಇಲ್ಲ. ಆ ಜಾಗವನ್ನು ನಗರಸಭೆಗೆ ಹಸ್ತಾಂತರಿಸುವುದು ಸರಿ ಇಲ್ಲ, ಉರ್ದು ಶಾಲೆಯಲ್ಲಿ 18 ವಿದ್ಯಾರ್ಥಿಗಳು ಮಾತ್ರ ದಾಖಲಾಗಿದ್ದರು. ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆ ಶಾಲೆಯನ್ನು ಬೇರೆಡೆ ವರ್ಗಾಯಿಸಿ ಆ ಜಾಗದಲ್ಲಿ ಸಂತೆ ನಡೆಸಿ ಎಂದು ಹೇಳಿದಾಗ, ಮಧ್ಯಪ್ರದೇಶಿಸಿದ ಸದಸ್ಯ ಜಿಷನ್, ಸಚಿವ ಜಮೀರ್ ಅಹಮದ್ ಅವರು ಕಾಲೇಜು ನಿರ್ಮಿಸಲು ಅನುಮತಿ ಪಡೆಯುತ್ತಿದ್ದಾರೆ. ನಾವು, ಅವಕಾಶ ನೀಡುವುದಿಲ್ಲ ಎಂದು ಉತ್ತರಿಸಿದರು.

ಕೆಲ ಕಾಲ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಮಧ್ಯ ಪ್ರವೇಶಿಸಿದ ಸದಸ್ಯ ಅಂಜಿನಪ್ಪ ಹಾಗೂ ಆರ್. ರಾಮು ಅವರು ಶಾಲೆಯ ಜಾಗವು ಬೇಡ, ದಲಿತರ ಜಮೀನು ಬೇಡ ಬೇರೆಡೆ ಜಾಗ ಹುಡುಕೋಣ, ಈ ಬಗ್ಗೆ ಚರ್ಚೆ ನಿಲ್ಲಿಸೋಣ ಎಂದು ಹೇಳಿ ಸಭೆಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು.

ನಂತರ ಮಾತನಾಡಿದ ಮಾಜಿ ನಗರಸಭಾ ಅಧ್ಯಕ್ಷ ಬಿ.ಅಂಜನಪ್ಪ ಉರ್ದು ಶಾಲೆಯ ಬಳಿಯಲ್ಲಿ ಸರ್ಕಾರದ ಒಂದೂವರೆ ಎಕರೆ ಜಾಗ ಇದೆ. ಅದನ್ನು ಗುರುತಿಸಿ ಅಲ್ಲಿ ಸಂತೆ ಅಥವಾ ಹೂವಿನ ಮಂಡಿ ನಡೆಸಲಿ ಎಂದು ಸಲಹೆ ನೀಡಿದರು.

ಶಿರಾನಗರದ ಪ್ರಮುಖ ರಸ್ತೆಗಳ ಬದಿಯಲ್ಲಿ ಹೂ ಮತ್ತು ತರಕಾರಿ ಮಾರಾಟ ನಡೆಯುತ್ತಿರುವುದರಿಂದ ಸಂಚಾರದಟ್ಟಣೆ ಉಂಟಾಗಿ ವಾಹನ ಸವಾರಿರಿಗೆ, ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಕೂಡಲೇ ತರಕಾರಿ ಹಾಗೂ ಹೂ ಮಾರಾಟಕ್ಕೆ ಸೂಕ್ತ ಸ್ಥಳ ನಿಗದಿಪಡಿಸಿ ಎಂದು ನಗರಸಭೆ ಆಯುಕ್ತ ಹಾಗೂ ಅಧ್ಯಕ್ಷರಿಗೆ ಶಾಸಕ ಟಿ ಬಿ ಜಯಚಂದ್ರ ಆದೇಶಿಸಿದರು.

ವಿಧಾನಪರಿಷತ್ ಸದಸ್ಯ ಚಿದಾನಂದ ಎಂ ಗೌಡ ಮಾತನಾಡಿ, ಗಾಂಜಾ ಹಾಗೂ ಮಾದಕ ವಸ್ತುಗಳ ಮಾರಾಟ ಅತಿಯಾಗುತ್ತಿದೆ. ವಿದ್ಯಾರ್ಥಿಗಳು ಈ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ, ಹೊರ ರಾಜ್ಯಗಳಿಂದ ಮಾದಕ ವಸ್ತುಗಳು ನಗರಕ್ಕೆ ಸರಬರಾಜು ಆಗುತ್ತಿದೆ ಎಂದು ಕೇಳಿ ಬರುತ್ತಿದೆ. ಅಂತವರ ವಿರುದ್ಧ ಕ್ರಮ ಜರುಗಿಸುವುದರ ಮೂಲಕ ಕಡಿವಾಣ ಹಾಕಲು ಪೊಲೀಸ್ ಇಲಾಖೆಗೆ ಸೂಚಿಸಿದರು.

ಇದಕ್ಕೆ ಉತ್ತರಿಸಿದ ಶಾಸಕರು ಅಲ್ಲಿಯೇ ಇದ್ದ ಪೊಲೀಸ್ ಅಧಿಕಾರಿ ಮಂಜೇಗೌಡ ಅವರಿಗೆ ಶೀಘ್ರದಲ್ಲಿ ಕ್ರಮ ಜರುಗಿಸಿ ಕಡಿವಾಣ ಹಾಕಿ ಎಂದು ಸೂಚಿಸಿದರು.

ನಗರಸಭೆ ಸದಸ್ಯ ಉಮಾ ವಿಜಯರಾಜ್ ಮಾತನಾಡಿ, ಖಾಸಗಿ ಬಸ್ ನಿಲ್ದಾಣದಲ್ಲಿ ಎಲ್ಲಂದರೆ ಅಲ್ಲೇ ತಳ್ಳುವ ಗಾಡಿಯಲ್ಲಿ ಹಣ್ಣನ್ನು ಮಾರಾಟ ಮಾಡುವುದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ನಗರ ಸಭೆಯವರು ಅವರಿಗೆಂದೇ ಪ್ರತ್ಯೇಕ ಜಾಗ ಕಲ್ಪಿಸಿ ಅವಕಾಶ ನೀಡಿದರೆ ಇದನ್ನು ತಪ್ಪಿಸಬಹುದೆಂದು ಸಲಹೆ ನೀಡಿದರು.

ನಗರದ ರಸ್ತೆಯ ಬದಿಯಲ್ಲಿ ಅಂಗಡಿ ಪೆಟ್ಟಿಗೆ ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳಿಂದ ನಗರಸಭೆ ಸದಸ್ಯರು ಹಣ ಪಡೆಯುತ್ತಿದ್ದಾರೆಂದು ಸದಸ್ಯ ಅಂಜನಪ್ಪ ಆರೋಪಿಸಿದಾಗ, ಕೂಡಲೇ ಕಾರ್ಯಾಚರಣೆ ನಡೆಸಿ ಎಲ್ಲಾ ಪೆಟ್ಟಿಗೆಗಳನ್ನು ತೆರವು ಗೊಳಿಸಲಾಗುವುದು ಎಂದು ಅಧ್ಯಕ್ಷೆ ಪೂಜಾ ತಿಳಿಸಿದರು.

ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಶಂಕರಪ್ಪ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನಗರಸಭೆ ಅಧ್ಯಕ್ಷೆ ಪೂಜಾ.ಪಿ, ಉಪಾಧ್ಯಕ್ಷೆ ಸಮ್ರಿನ್ ಖಾನಂ, ಆಯುಕ್ತ ರುದ್ರೇಶ್, ಪರಿಸರ ಇಂಜಿನಿಯರ್ ಪಲ್ಲವಿ, ನಗರಸಭಾ ಸದಸ್ಯರುಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

Follow Us:
Download App:
  • android
  • ios