Lalbagh Flower Show 2024: ಲಾಲ್‌ಬಾಗ್‌ ಫಲಪುಷ್ಪಗಳಲ್ಲಿ ಅರಳಲಿದ್ದಾರೆ ವಿಶ್ವಗುರು ಬಸವಣ್ಣ!

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಬರುವ ಜನವರಿಯಲ್ಲಿ ನಡೆಯಲಿರುವ 215ನೇ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಮಹಾ ಮಾನವತಾವಾದಿ ‘ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯ’ ವಿಷಯಾಧಾರಿತ ಪ್ರದರ್ಶನ ಆಯೋಜಿಸಲು ತೋಟಗಾರಿಕೆ ಇಲಾಖೆ ಸಿದ್ಧತೆಯಲ್ಲಿ ತೊಡಗಿದೆ. 

Lalbagh Flower Show For Republic Day 2024 Including Them Here Important Information gvd

ಬೆಂಗಳೂರು (ಡಿ.22): ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಬರುವ ಜನವರಿಯಲ್ಲಿ ನಡೆಯಲಿರುವ 215ನೇ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಮಹಾ ಮಾನವತಾವಾದಿ ‘ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯ’ ವಿಷಯಾಧಾರಿತ ಪ್ರದರ್ಶನ ಆಯೋಜಿಸಲು ತೋಟಗಾರಿಕೆ ಇಲಾಖೆ ಸಿದ್ಧತೆಯಲ್ಲಿ ತೊಡಗಿದೆ. ಈಗಾಗಲೇ ವಚನ ಸಾಹಿತ್ಯ ತಜ್ಞರು, ಬಸವ ಸಮಿತಿ, ಕೂಡಲಸಂಗಮ ಪೀಠ ಸೇರಿದಂತೆ ವಿವಿಧ ಮಠಗಳ ಮಠಾಧೀಶರನ್ನು ಸಂಪರ್ಕಿಸಿ 12 ಸುತ್ತಿನ ಸಭೆಗಳನ್ನು ನಡೆಸಲಾಗಿದೆ. ಬಸವ ತತ್ವ ಮತ್ತು ವಚನ ಆಧಾರಿತ ಪೂರಕವಾದ ಎಲ್ಲ ಪರಿಕಲ್ಪನೆಯೂ ಈ ಪ್ರದರ್ಶನದಲ್ಲಿ ಇರಲಿದೆ.  ಕೆಲವು ಪ್ರತಿಕೃತಿಗಳನ್ನು ಪುಷ್ಪಗಳಿಂದ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಯಾವ್ಯಾವುದನ್ನು ಹೇಗೆ ಮಾಡಬೇಕೆಂಬುದರ ಅಂತಿಮ ನಿರ್ಧಾರವನ್ನು ತಜ್ಞರ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ। ಎಂ.ಜಗದೀಶ್‌ ಅವರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಅನುಭವ ಮಂಟಪದ ಆಕರ್ಷಣೆ: ಈ ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆ ವಿಶ್ವದ ಮೊಟ್ಟ ಮೊದಲ ಸಂಸತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅನುಭವ ಮಂಟಪವನ್ನು ಗಾಜಿನ ಮನೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಅನುಭವ ಮಂಟಪ ಸುಮಾರು 7 ಲಕ್ಷಕ್ಕೂ ಹೆಚ್ಚು ಹೂವುಗಳಿಂದ ರೂಪುಗೊಳ್ಳಲಿದೆ. ಜತೆಗೆ ಬಸವಣ್ಣ ಅವರ ವಚನದೊಂದಿಗೆ ಅಲ್ಲಮಪ್ರಭು, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ ಸೇರಿದಂತೆ ಅನೇಕ ಶರಣರ ವಚನಗಳ ಬಗ್ಗೆಯೂ ಮಾಹಿತಿಯು ಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸಬೇಕೆಂದು ತಜ್ಞರು ಶಿಫಾರಸು ಮಾಡಿದ್ದಾರೆ. ಅನುಭವ ಮಂಟಪ, ಕೂಡಲಸಂಗಮದ ಐಕ್ಯಮಂಟಪ ನಿರ್ಮಾಣಕ್ಕೂ ಚಿಂತನೆ ನಡೆಸಲಾಗಿದೆ. ಈ ಕುರಿತು ಡಿ.26ರಂದು ನಡೆಯಲಿರುವ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ.

ಸದನದಿಂದ ಸಂಸದರು ಹೊರಕ್ಕೆ, ಪ್ರಜಾಪ್ರಭುತ್ವದ ಕಗ್ಗೊಲೆ: ಸಚಿವ ಎಂ.ಬಿ.ಪಾಟೀಲ್‌

ತಾಳೆಗರಿ ವಚನಗಳ ಪ್ರದರ್ಶನ: ಶರಣರ ಪ್ರತಿಮೆಗಳು, ಕಲಾಕೃತಿಗಳು, ಬಸವಣ್ಣ ಅವರು ಜನಿಸಿದ ಇಂಗಳೇಶ್ವರ, ಕಲ್ಯಾಣ, ಸೇರಿದಂತೆ ಬಸವಣ್ಣ ಅವರ ಜೀವನ ದರ್ಶನವನ್ನು ತೋರಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಕೂಡಲಸಂಗಮ, ಬಸವ ಸಮಿತಿ, ಮುರುಘರಾಜೇಂದ್ರ ಮಠ ಇತ್ಯಾದಿ ಕಡೆಗಳಲ್ಲಿ ಬಸವಣ್ಣ ಅವರಿಗೆ ಸಂಬಂಧಿಸಿದ ಕಲಾಕೃತಿ, ಪ್ರತಿಮೆಗಳನ್ನು ರಚಿಸಿದ ಕಲಾವಿದರನ್ನು ಸಂಪರ್ಕಿಸುವ ಪ್ರಯತ್ನಗಳು ಕೂಡ ನಡೆಯುತ್ತಿವೆ. ಬಸವಣ್ಣ ಅವರು ತಾಳೆಗರಿಯಲ್ಲಿ ಬರೆದಿರುವ ವಚನಗಳನ್ನು ಸಂಗ್ರಹಿಸುತ್ತಿದ್ದು, ಅವುಗಳನ್ನು ಪ್ರದರ್ಶಿಸಲಾಗುವುದು.

ಇಡೀ ಲಾಲ್‌ಭಾಗ್‌ನಲ್ಲಿ ಬಸವಣ್ಣ ಸೇರಿದಂತೆ ಅನೇಕ ಶರಣರ 500ರಿಂದ 600 ವಚನಗಳನ್ನು ವಿದ್ಯುತ್‌ ಕಂಬಗಳು, ಮರಗಳು ಒಳಗೊಂಡಂತೆ ವಿವಿಧ ಕಡೆಗಳಲ್ಲಿ ಪ್ರದರ್ಶಿಸಲು ತೀರ್ಮಾನಿಸಲಾಗಿದೆ. ಸಾಣೇಹಳ್ಳಿ ಸ್ವಾಮೀಜಿ ಅವರು ಬಸವ ತತ್ವ ಮತ್ತು ವಚನ ಸಾಹಿತ್ಯವನ್ನು ಒಳಗೊಂಡ 27 ರೂಪಕಗಳನ್ನು ಮಾಡಿದ್ದು, ಅವುಗಳನ್ನು ಲಾಲ್‌ಬಾಗಿನ ನಾಲ್ಕು ಪ್ರಮುಖ ಗೇಟ್‌ಗಳು ಹಾಗೂ ಒಳಭಾಗದಲ್ಲಿ ನಾಲ್ಕು ಸೇರಿದಂತೆ ಒಟ್ಟು ಎಂಟು ಸ್ಕ್ರೀನ್‌ಗಳಲ್ಲಿ ಪ್ರದರ್ಶಿಸಲಾಗುವುದು. ಬಸವ ಸಮಿತಿಯಲ್ಲಿ ಮಾಡಿರುವ ಸಾಕ್ಷ್ಯಾಚಿತ್ರಗಳು, ಅನುಭವ ಮಂಟಪದ ವಿಡಿಯೋ, ತಾಳೆ ಗರಿಯಲ್ಲಿ ವಚನಗಳು ಹೇಗಿದ್ದು, ಅದರ ಸಂರಕ್ಷಣೆ ಹೇಗೆ ಎಂಬಿತ್ಯಾದಿ ವಿವರಗಳನ್ನು ಒಳಗೊಂಡ ಸಾಕ್ಷ್ಯಾಚಿತ್ರ ಪ್ರದರ್ಶಿಸುವುದಾಗಿ ಡಾ। ಎಂ.ಜಗದೀಶ್‌ ಅವರು ತಿಳಿಸಿದರು.

ಹಿಂದಿನ ಕೋವಿಡ್‌ ತಪ್ಪು ಮತ್ತೆ ಆಗಕೂಡದು: ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಮಾಜ ಸುಧಾರಕ ಬಸವಣ್ಣ ಅವರ ಜೀವನಾಧಾರಿತ ವಿಷಯ ತೆಗೆದುಕೊಂಡು 215 ಫಲಪುಷ್ಪ ಪ್ರದರ್ಶನ ಏರ್ಪಡಿಸಲು ಯೋಜಿಸಲಾಗುತ್ತಿದೆ. ಜ.18ರಿಂದ 28ರವರೆಗೆ ಪ್ರದರ್ಶನ ನಡೆಯಲಿದ್ದು ಲಾಲ್‌ಬಾಗ್‌ ಸಂಪೂರ್ಣವಾಗಿ ವಚನಾಮೃತದಿಂದ ಕಂಗೊಳಿಸಲಿದೆ. ಬಸವಾದಿ ಶರಣರ ವಚನಗಳು, ಸಾಕ್ಷ್ಯ ಚಿತ್ರಗಳನ್ನು ಪ್ರದರ್ಶಿಸಲು ಉದ್ದೇಶಿಸಲಾಗಿದೆ. ಪುಷ್ಪ ಪ್ರದರ್ಶನಕ್ಕೆ 10 ಲಕ್ಷಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆ ಮಾಡಲಾಗಿದೆ.
-ಶಮ್ಲಾ ಇಕ್ಬಾಲ್‌, ಕಾರ್ಯದರ್ಶಿ, ತೋಟಗಾರಿಕೆ ಇಲಾಖೆ

Latest Videos
Follow Us:
Download App:
  • android
  • ios