ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ನೇತೃತ್ವದಲ್ಲಿ ಕಾಂಗ್ರೆಸ್‌ ಮುಖಂಡರು ಬುಗುಡನಹಳ್ಳಿ ಕೆರೆಗೆ ಭಾನುವಾರ ಭೇಟಿ ನೀಡಿ ಗಂಗಾಪೂಜೆ ನೆರವೇರಿಸಿ, ಪರಿಶೀಲಿಸಿದರು.

ತುಮಕೂರು : ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ನೇತೃತ್ವದಲ್ಲಿ ಕಾಂಗ್ರೆಸ್‌ ಮುಖಂಡರು ಬುಗುಡನಹಳ್ಳಿ ಕೆರೆಗೆ ಭಾನುವಾರ ಭೇಟಿ ನೀಡಿ ಗಂಗಾಪೂಜೆ ನೆರವೇರಿಸಿ, ಪರಿಶೀಲಿಸಿದರು.

ನಂತರ ಮಾತನಾಡಿದ ಮುರಳೀಧರ ಹಾಲಪ್ಪ ಅವರು, ತುಮಕೂರಿನ ಅಮಾನಿಕೆರೆ, ಗಂಗಸಂದ್ರ ಕೆರೆ, ಮರಳೂರು ಕೆರೆಗಳಲ್ಲಿ ಈಗಾಗಲೇ ಸಾಕಷ್ಟುನೀರು ಸಂಗ್ರಹವಾಗಿದ್ದು, ವೀಕ್ಷಣೆ ಮಾಡಿಕೊಂಡು ಈಗ ಬುಗುಡನಹಳ್ಳಿ ಕೆರೆ ವೀಕ್ಷಿಸಿದ್ದು, ಇದು ತುಮಕೂರು ನಗರದ ಜನತೆಯ ಜೀವಾಳ. ಬುಗುಡನಹಳ್ಳಿ ಕೆರೆ ಸಾಮರ್ಥ್ಯ 250 ಎಂಸಿಎಫ್‌ಟಿ ಆಗಿದ್ದು, ತುಮಕೂರಿನ ಜನತೆಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂದು ಜಿಲ್ಲೆಯ ಇಬ್ಬರು ಸಚಿವರಾದ ಡಾ.ಜಿ.ಪರಮೇಶ್ವರ್‌ ಮತ್ತು ಕೆ.ಎನ್‌. ರಾಜಣ್ಣ ಅವರು ಹೇಮಾವತಿ ನೀರು ಹರಿಸಲು ಶ್ರಮಿಸಿದ್ದಾರೆ. ಇಬ್ಬರೂ ಸಚಿವರಿಗೆ ತುಮಕೂರು ನಗರದ ಜನತೆಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದ ಅವರು, ಸಾರ್ವಜನಿಕರು ಕೂಡ ಎಚ್ಚರಿಕೆಯಿಂದ ನೀರನ್ನು ಮಿತವಾಗಿ ಬಳಸಬೇಕು ಎಂದರು.

ಗೊರೂರು ಜಲಾಶಯದಿಂದ ನೀರನ್ನು ಬಿಂದಿಗೆ, ಬಕೇಟ್‌ಗಳಲ್ಲಿ ಎತ್ತಿಕೊಂಡು ಬರುವುದಕ್ಕಾಗುತ್ತದೆಯೇ ಎಂದು ಹೇಳುತ್ತಿದ್ದ ಬಿಜೆಪಿ ಮುಖಂಡರು ತುಂಬಾ ಕುಹಕವಾಗಿ ಮಾತನಾಡಿದ್ದರು. ಅಂತಹವರೇ ನಿನ್ನೆ ಇಲ್ಲಿ ಬಂದು ಶೋ ಕೊಟ್ಟು ಹೋಗಿದ್ದಾರೆ. ಇದಕ್ಕೆ ಉತ್ತರ ಇಂದು ಇಲ್ಲಿ ಸಿಕ್ಕಿದೆ. ತುಮಕೂರು ನಗರಕ್ಕೆ ಮತ್ತು ಗ್ರಾಮಾಂತರಕ್ಕೆ ಇದು ಜೀವಾಳ. ಹೇಮಾವತಿ ನೀರಿಗಾಗಿ ಈ ಹಿಂದೆ ಯಾರು ತ್ಯಾಗ ಬಲಿದಾನಗಳ ಮೂಲಕ ಹೋರಾಟ ಮಾಡಿದ್ದರೋ ಅವರನ್ನೆಲ್ಲಾ ಸ್ಮರಿಸಿಸುತ್ತಿದ್ದೇವೆ ಎಂದರು.

ನೀರು ಹರಿಯುವ ವಿಚಾರದಲ್ಲಿ ಯಾವುದೇ ಒಳ ಮಸಲತ್ತು ನಡೆಯಬಾರದು ಎಂಬ ಹಿನ್ನಲೆಯಲ್ಲಿ ನಾವೇ ಖುದ್ದಾಗಿ ಬಂದು ಪರಿಶೀಲಿಸಿದ್ದೇವೆ. ಈಗಲಾದರೂ ನಾವೆಲ್ಲರೂ ಒಂದು ಎಂಬ ಭಾವನೆಯಿಂದ ನೀರಿನಲ್ಲಿ ರಾಜಕೀಯ ಮಾಡದೆ ಸಹಕಾರ ನೀಡಬೇಕು. ತುಮಕೂರಿಗೆ ಹೇಮಾವತಿ ನೀರು ಹರಿಸಲು ಶಾಶ್ವತವಾದ ಸೂತ್ರವನ್ನು ಕಂಡುಕೊಳ್ಳಲು ಎಲ್ಲರ ಒತ್ತಾಸೆಯಾಗಿದ್ದು, ಜಿಲ್ಲೆಯ ಸಚಿವರು ಮತ್ತು ಸರ್ಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಕೆಪಿಸಿಸಿ ಒಬಿಸಿ ಘಟಕದ ಉಪಾಧ್ಯಕ್ಷ ರೇವಣ ಸಿದ್ಧಯ್ಯ ಮಾತನಾಡಿ, ತುಮಕೂರು ಜಿಲ್ಲೆಗೆ ಹೇಮಾವತಿ ಹರಿಸುವುದು ಕನಸು ಎಂದು ಈ ಹಿಂದೆ ದೊಡ್ಡ ದೊಡ್ಡ ರಾಷ್ಟ್ರೀಯ ಪಕ್ಷಗಳು ವ್ಯಂಗ್ಯವಾಡುತ್ತಿದ್ದವು. ಆ ಕನಸನ್ನು ನನಸು ಮಾಡಲು ಸವಾಲಾಗಿ ಸ್ವೀಕರಿಸಿ ಇಂದು ತುಮಕೂರು ನಗರಕ್ಕೆ ಹೇಮಾವತಿ ನೀರು ಹರಿಸಿರುವುದೇ ಸಾಕ್ಷಿ. ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಸಲು ಕಾಂಗ್ರೆಸ್‌ ಬುರುಡೆ ಬಿಡುತ್ತಿದೆ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದರು, ಕಾಂಗ್ರೆಸ್‌ ಎಂದಿಗೂ ದೂರದೃಷ್ಠಿಯನ್ನು ಹೊಂದಿ ಕೆಲಸ ಮಾಡುತ್ತದೆ ಎಂಬುದನ್ನು ಅರಿಯಬೇಕು ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದರು.

ಈ ಸಂದರ್ಭದಲ್ಲಿ ತುಮಕೂರು ಗ್ರಾಮಾಂತರ ಕಾಂಗ್ರೆಸ್‌ ಮುಖಂಡ ಷಣ್ಮುಖಪ್ಪ, ಇಕ್ಬಾಲ್‌ ಅಹಮದ್‌, ರೇವಣ್ಣಸಿದ್ದಯ್ಯ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್‌ ಅಹಮದ್‌, ಎಸ್‌ಟಿ ಘಟಕದ ಅಧ್ಯಕ್ಷ ನರಸಿಂಹಯ್ಯ, ಎಸ್‌ಸಿ ಘಟಕದ ಲಿಂಗರಾಜು, ಕಾರ್ಮಿಕ ಘಟಕದ ರಹೀಂ, ಗ್ರಾಮಾಂತರ ಬ್ಲಾಕ್‌ ಅಧ್ಯಕ್ಷ ಕೆಂಪಣ್ಣ, ನರಸಿಂಹಮೂರ್ತಿ, ಕೈದಾಳ ರಮೇಶ್‌, ಟೂಡ ಮಾಜಿ ಅಧ್ಯಕ್ಷ ಸಿದ್ದಲಿಂಗೇಗೌಡ, ಮಹಿಳಾ ಬ್ಲಾಕ್‌ ಅಧ್ಯಕ್ಷೆ ಕವಿತಾ, ಮಂಗಳಮ್ಮ, ಮರಿಚೆನ್ನಮ್ಮ, ಮಂಜುನಾಥ್‌, ಗೋವಿಂದೇಗೌಡ, ರಾಜಪ್ಪ, ವಸುಂಧರ, ಯಶೋದಮ್ಮ, ವಿಜಯಲಕ್ಷ್ಮಿ, ಶಿವಾಜಿ, ನರಸಿಂಹಮೂರ್ತಿ, ಅಶ್ವತ್ಥಪ್ಪ, ಅಕಾಶ್‌, ಪಂಚಣ್ಣ, ಸುದರ್ಶನ್‌, ಕುಚ್ಚಂಗಿ ಶಿವರಾಜು, ಚಿಕ್ಕರಾಜು, ದೊಡ್ಡಹುಲಿಯಪ್ಪ ಮುಂತಾದವರು ಭಾಗವಹಿಸಿದ್ದರು.

ಈಗಾಗಲೇ ಮುಂಗಾರು ವಿಳಂಬವಾಗಿದ್ದು, ಇನ್ನೂ ಸ್ವಲ್ಪದಿನ ಕಾಯಬೇಕಾಗುತ್ತದೆ. ಮಳೆ ಬರುವ ಒಳ್ಳೆಯ ಮುನ್ಸೂಚನೆ ಇದ್ದು, ಹಾಗೇನಾದರೂ ಮಳೆ ಕೈಕೊಟ್ಟರೆ ಬಜೆಟ್‌ ಅಧಿವೇಶನಕ್ಕೂ ಮುನ್ನ ನೀರಿನ ಅಭಾವ ಕಂಡು ಬಂದರೆ ನಾವೆಲ್ಲಾ ತುಮಕೂರು ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಲು ಸರ್ಕಾರವನ್ನು ಒತ್ತಾಯ ಮಾಡುತ್ತೇವೆ.

ಮುರಳೀಧರ ಹಾಲಪ್ಪ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ ಪರಮೇಶ್ವರ್‌ ಮತ್ತು ಸಹಕಾರ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌ ರಾಜಣ್ಣ ಅವರ ಸಹಕಾರ ಮತ್ತು ಶ್ರಮದಿಂದ ತುಮಕೂರು ನಗರದ ಬುಗುಡನಹಳ್ಳಿ ಕೆರೆಗೆ ಬಹುಬೇಗನೆ ಹೇಮಾವತಿ ನೀರು ಹರಿಯುವಂತಾಗಿದೆ. ನೀರು ಹರಿಯಲು ಸಹಕರಿಸಿದ ಹಿರಿಯ ಮುಖಂಡರಿಗೆ ಅಭಿನಂದನೆ ಸಲ್ಲಿಸಲಾಗುವುದು.

ಇಕ್ಬಾಲ್‌ ಅಹಮದ್‌ ಕಾಂಗ್ರೆಸ್‌ ಮುಖಂಡ