Uttara Kannada: ಕೆರೆ ಮೀನುಗಾರಿಕೆ: ಹೊರ ಜಿಲ್ಲೆಯವರಿಗೆ ಅವಕಾಶವಿಲ್ಲ: ಸಚಿವ ಹೆಬ್ಬಾರ
* ಮೀನುಗಾರರಿಗೆ 2.5 ಲಕ್ಷ ಬೆಲೆಯ 8 ದೋಣಿ, 12 ಸೆಟ್ ಬಲೆ ವಿತರಣೆ
* ಕೆರೆಗಳಲ್ಲಿ ಮೀನು ಬಿಡುವಿಕೆ ಮತ್ತು ಮೀನು ಸಂಗ್ರಹಣೆಗೆ ಆದ್ಯತೆ ನೀಡಿ
* ಮೀನುಗಾರರು ಸುರಕ್ಷಿತವಾಗಿ ದಡ ಸೇರಬೇಕು. ಶೋಷಣೆಗೆ ಒಳಗಾಗದೇ ಮೀನುಗಾರಿಕೆ ನಡೆಸಬೇಕು
ಶಿರಸಿ(ಫೆ.06): ಜಿಲ್ಲೆಯ ಕೆರೆಗಳಲ್ಲಿ(Lake) ಮೀನು ಸಂಗ್ರಹಣೆಗೆ ಯಾವುದೇ ಕಾರಣಕ್ಕೂ ಹೊರ ಜಿಲ್ಲೆಯ ಮೀನುಗಾರರಿಗೆ ಗುತ್ತಿಗೆ ಪಡೆಯಲು ಅವಕಾಶ ನೀಡುವುದಿಲ್ಲ ಎಂದು ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ(Shivaram Hebbar) ಹೇಳಿದರು. ನಗರದ ಮೀನುಗಾರಿಕಾ ಇಲಾಖೆ(Department of Fisheries) ಕಚೇರಿಯಲ್ಲಿ ಶನಿವಾರ ಮೀನುಗಾರರಿಗೆ(Fishing) 2.5 ಲಕ್ಷ ಬೆಲೆಯ 8 ದೋಣಿ ಮತ್ತು 12 ಸೆಟ್ ಬಲೆ ವಿತರಣೆ ಮಾಡಿ ಬಳಿಕ ಮಾಧ್ಯಮದೊಂದಿಗೆ ಅವರು ಮಾತನಾಡಿದರು.
ಮೀನುಗಾರರು ಸುರಕ್ಷಿತವಾಗಿ ದಡ ಸೇರಬೇಕು. ಶೋಷಣೆಗೆ ಒಳಗಾಗದೇ ಮೀನುಗಾರಿಕೆ ನಡೆಸಬೇಕು ಎಂಬುದು ನಮ್ಮ ಉದ್ದೇಶ.
ಕಟ್ಟಡ ಕಾರ್ಮಿಕರಿಗಾಗಿ Mobile Clinic : 3 ಜಿಲ್ಲೆಗಳಲ್ಲಿ ‘ಶ್ರಮಿಕ ಸಂಜೀವಿನಿ’ ಜಾರಿ
ಜಿಲ್ಲೆಯಲ್ಲಿ ಅತಿ ಚೆಚ್ಚು ಕೆರೆ ಇರುವ ಪ್ರದೇಶ ಮುಂಡಗೋಡ ತಾಲೂಕು ಹಾಗೂ ಶಿರಸಿ ತಾಲೂಕಿನ ಪೂರ್ವ ಭಾಗ. ಜಿಲ್ಲೆಯ ಮೀನುಗಾರಿಕೆ ವ್ಯವಸಾಯ(Fishing Agriculture) ನಮ್ಮ ಜಿಲ್ಲೆಯವರಿಗೆ ಸಿಗಬೇಕು. ಈ ಹಿನ್ನೆಲೆಯಲ್ಲಿ ಕೆರೆಗಳಲ್ಲಿ ಮೀನು ಬಿಡುವಿಕೆ ಮತ್ತು ಮೀನು ಸಂಗ್ರಹಣೆಗೆ ಆದ್ಯತೆ ನೀಡಿ ಈ ಮೂಲಕ ಸ್ಥಳೀಯರಿಗೆ ಉದ್ಯೋಗ ಒದಗಿಸುವ ಯತ್ನ ಮಾಡುತ್ತಿದ್ದೇವೆ. ಗುಣ ಮಟ್ಟದ ಮೀನು ಉತ್ಪಾದನೆಗೆ ನಮ್ಮಲ್ಲಿಯೇ ಸ್ಪರ್ಧೆ ನಡೆಯಲಿ, ಆದರೆ, ಹೊರ ಜಿಲ್ಲೆಯವರು ಇಲ್ಲಿ ಬಂದು ಗುತ್ತಿಗೆ ಹಿಡಿಯಲು ಅವಕಾಶ ಮಾಡಿಕೊಡುವುದಿಲ್ಲ ಎಂದರು.
ಜಿಲ್ಲೆಯಲ್ಲಿ ವಿವಿಧ ಕಾಮಗಾರಿ ನಡೆಯುತ್ತಿದ್ದರೂ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲು ವಿಳಂಬ ಆಗಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಸ್ಥಿತಿ ಈ ರೀತಿ ಮಾಡಿದೆ. ಗುತ್ತಿಗೆದಾರರಿಗೆ ಹಣ ಬಿಡುಗಡೆ ಆಗುವಿಕೆ ಯಾವಾಗಲೂ ವಿಳಂಬ ಆಗುತ್ತದೆಯಾದರೂ ಕಳೆದ ಎರಡು ವರ್ಷಗಳಿಂದ ಈ ಸಮಸ್ಯೆ ಇನ್ನಷ್ಟುಜಾಸ್ತಿ ಆಗಿದೆ. ಈಗ ಪರಿಸ್ಥಿತಿ ಸುಧಾರಿಸುತ್ತಿದೆ. ಮುಂದಿನ ದಿನಗಳಲ್ಲಿ ತ್ವರಿತವಾಗಿ ಹಣ ಬಿಡುಗಡೆಗೊಳಿಸಲಾಗುವುದು ಎಂದರು. ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವೈಭವ್ ಇತರರಿದ್ದರು.
ಕೊರೋನಾ ಚಿಕಿತ್ಸೆಗೆ ಇಎಸ್‌ಐ ಆಸ್ಪತ್ರೆಗಳಲ್ಲಿ ಅಗತ್ಯ ಸಿದ್ಧತೆ: ಹೆಬ್ಬಾರ್
ಬೆಂಗಳೂರು: ರಾಜ್ಯದ ಎಲ್ಲ ಕಾರ್ಮಿಕ ವಿಮಾ ಆಸ್ಪತ್ರೆಗಳಲ್ಲಿ (ESI) ಕೊರೋನಾ ಸೋಂಕಿತರ ಚಿಕಿತ್ಸೆಗೆ (Covid 19) ಅಗತ್ಯ ಸಿದ್ಧತೆ ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದರು.
ಜ.6 ರಂದು ರಾಜಾಜಿನಗರದ ರಾಜ್ಯ ಕಾರ್ಮಿಕ ವಿಮಾ ಆಸ್ಪತ್ರೆಯ (ಇಎಸ್‌ಐ) ಆವರಣದಲ್ಲಿ ‘ಪಿಎಂ ಕೇರ್’ ಅನುದಾನದ ಅಡಿಯಲ್ಲಿ ಡಿಆರ್‌ಡಿಒ ಸಂಸ್ಥೆ ನಿರ್ಮಿಸಿರುವ ನೂತನ ಆಕ್ಸಿಜನ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೊರೋನಾ ಮೊದಲ ಎರಡು ಅಲೆಯನ್ನು ಅತ್ಯಂತ ಸಮರ್ಪಕವಾಗಿ ಎದುರಿಸಿದೆ ಎಂದು ಹೇಳಿದ್ದರು.
Belagavi Chalo: ಅರಣ್ಯ ವಾಸಿಗಳ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧ: ಸಚಿವ ಹೆಬ್ಬಾರ್
ಮೂರನೇ ಅಲೆಯನ್ನು ಕೂಡ ಸಾಧ್ಯವಾದಷ್ಟು ತಡೆಗಟ್ಟಲು ಶ್ರಮವಹಿಸಲಾಗುತ್ತಿದೆ. ಸೋಂಕು ಭಾರಿ ಪ್ರಮಾಣದಲ್ಲಿ ಹೆಚ್ಚಾದರೆ, ಸೋಂಕಿತರ ಚಿಕಿತ್ಸೆಗಾಗಿ ಈಗಾಗಲೇ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾರ್ಮಿಕ ವರ್ಗದ ಆರೈಕೆಗಾಗಿ ರಾಜ್ಯದ ಎಲ್ಲ ಕಾರ್ಮಿಕ ವಿಮಾ ಆಸ್ಪತ್ರೆಗಳಲ್ಲಿಯೂ ಕೊರೋನಾ ಸೋಂಕಿತರ ಚಿಕಿತ್ಸೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದಿದ್ದರು.
ಒಂದು ಸಾವಿರ ಲೀಟರ್ ಆಕ್ಸಿಜನ್ ಉತ್ಪಾದಿಸುವ ಸಾಮರ್ಥ್ಯ
ಪಿಎಂ ಕೇರ್ ಅನುದಾನದ ಅಡಿಯಲ್ಲಿ ಡಿಆರ್‌ಡಿಒ ಸಂಸ್ಥೆಯು ನಿರ್ಮಾಣ ಮಾಡಿರುವ ನೂತನ ಆಕ್ಸಿಜನ್ ಉತ್ಪಾದನಾ ಘಟಕವು (Oxygen Plant) ಪ್ರತಿ ನಿಮಿಷಕ್ಕೆ ಸುಮಾರು ಒಂದು ಸಾವಿರ ಲೀಟರ್ ಆಕ್ಸಿಜನ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಆಸ್ಪತ್ರೆಯಲ್ಲಿ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜನ್ ಕೊರತೆ ನೀಗಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರಾಜಾಜಿನಗರ ಶಾಸಕ ಎಸ್.ಸುರೇಶಕುಮಾರ್, ವಿಮಾ ಆಸ್ಪತ್ರೆಯ ನಿರ್ದೇಶಕಿ ರೇಣುಕಾ ರಾಮಯ್ಯ, ಕಾರ್ಮಿಕ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಜಿ.ಕಲ್ಪನಾ, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.