Asianet Suvarna News Asianet Suvarna News

ಬಾಗಲಕೋಟೆ: ಬಾರದ ಮುಂಗಾರು ಕೃಷ್ಣಾ, ಮಲಪ್ರಭಾ & ಘಟಪ್ರಭಾ ನದಿಗಳ ಒಡಲು ಖಾಲಿ ಖಾಲಿ!

ವಾರದಲ್ಲಿ ಮಳೆ ಬಾರದೇ ಹೋದರೆ ನದಿ ಪಾತ್ರದಲ್ಲಿ ಜನ ಜಾನುವಾರುಗಳಿಗೆ ನಿಲ್ಲದ ಸಂಕಷ್ಟ. ಬಾಗಲಕೋಟೆ ಜಿಲ್ಲೆಯ ನದಿಗಳಿಗೆ ತಕ್ಷಣ ನೀರು ಬಿಡಿಸುವಂತೆ ರಾಜ್ಯ ಸರ್ಕಾರಕ್ಕೆ ಜಿಲ್ಲೆಯ ಜನರ ಒತ್ತಾಯಿಸಿದ್ದಾರೆ.

 

Lack of rain Krishna, Malaprabha & Ghataprabha rivers are empty at bagalkote rav
Author
First Published Jun 9, 2023, 10:52 AM IST

ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ.

ಬಾಗಲಕೋಟೆ (ಜೂ.9) : ರಾಜ್ಯದಲ್ಲಿ ಇನ್ನೂ ಸಹ ನಿರೀಕ್ಷೆಯಂತೆ ವಾಡಿಕೆ ಮಳೆಯಾಗದೇ ಇರುವ ಹಿನ್ನೆಲೆಯಲ್ಲಿ ಕೆಲವೆಡೆ ನೀರಿನ ಭವಣೆ ಕಂಡು ಬಂದಿದ್ದು, ಇದರ  ಬೆನ್ನಲ್ಲೆ ಇತ್ತ ಉತ್ತರ ಕರ್ನಾಟಕ(North karnataka)ದ ಬಾಗಲಕೋಟೆ ಜಿಲ್ಲೆಯಲ್ಲಿಯೂ ಮಳೆ ಇಲ್ಲದೆ ನದಿಗಳ ಒಡಲು ಬತ್ತಿ ಹೋಗಿದ್ದು, ಜನಜಾನುವಾರುಗಳಿಗೆ ನೀರಿನ ಭವಣೆ ಎದುರಾಗುವ ಆತಂಕ ಶುರುವಾಗಿದೆ. ಈ ಮಧ್ಯೆ ನದಿಗಳಿಗೆ ತಕ್ಷಣವೇ ಜಲಾಶಯಗಳಿಂದ ನೀರು ಬಿಡಿಸುವಂತೆ ಕೂಗು ಕೇಳಿ ಬಂದಿದೆ. ಈ ಕುರಿತ ವರದಿ ಇಲ್ಲಿದೆ...
 
ಹೌದು, ಎಲ್ಲಿ ನೋಡಿದ್ರೂ ಖಾಲಿ ಖಾಲಿಯಾಗಿರೋ ಆಲಮಟ್ಟಿ ಹಿನ್ನೀರಿ(alamatti backwater)ನ ಪ್ರದೇಶ, ಅಲ್ಲ್ಲಲ್ಲಿ ತಗ್ಗು ಪ್ರದೇಶದಲ್ಲಿ ನಿಂತಿರೋ ನೀರಿನ ಆಶ್ರಯಸಿರುವ ಜಾನುವಾರುಗಳು, ನದಿಗಳ ಒಡಲು ಬತ್ತಿ ಹೋಗಿದ್ದರಿಂದ ಆತಂಕದಲ್ಲಿರುವ ಜಿಲ್ಲೆಯ ರೈತಾಪಿ ಜನರು.

 

ಇನ್ನೂ ಬಾರದ ಮುಂಗಾರು ಮಳೆ; ದೇವರ ಮೊರೆ ಹೋದ ಗ್ರಾಮಸ್ಥರು!

ಜಿಲ್ಲೆಯಲ್ಲಿ ಕೃಷ್ಣಾ, ಮಲಪ್ರಭಾ ಮತ್ತು ಘಟಪ್ರಭಾ ನದಿಗಳಿದ್ದು, ಇದೀಗ  ನಿರೀಕ್ಷೆಯಂತೆ ವಾಡಿಕೆ ಮಳೆಯಾಗದೇ ಇರುವ ಹಿನ್ನೆಲೆಯಲ್ಲಿ ನದಿಗಳ ಒಡಲು ಬತ್ತಿ ಹೋಗಿದ್ದು, ಜನ ಜಾನುವಾರುಗಳಿಗೆ ನೀರಿನ ಭವಣೆಯ ಆತಂಕ ಶುರುವಾಗಿದೆ. ಇನ್ನು ಬಾಗಲಕೋಟೆ ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಆಲಮಟ್ಟಿ ಹಿನ್ನೀರಿನ ಪ್ರದೇಶದಲ್ಲಿ ಅಲ್ಲಲ್ಲಿ ತಗ್ಗು ಪ್ರದೇಶದಲ್ಲಿ ಇರುವ ಕೊಂಚ ನೀರನ್ನ ಬಿಟ್ಟರೆ ಎಲ್ಲೆಡೆ ಬತ್ತಿದ ಒಡಲೇ ಕಾಣಸಿಗುತ್ತಿದೆ. 

ಇದ್ದ ನೀರನ್ನೇ ಆಶ್ರಯಿಸಿ ಇದೀಗ ಸುತ್ತಮುತ್ತಲಿನ ಗ್ರಾಮಗಳ ಜಾನುವಾರಗಳು ಬರುತ್ತಿರೋ ದೃಶ್ಯಗಳು ಈಗ ಸರ್ವೆ ಸಾಮಾನ್ಯವಾಗಿವೆ. ಇನ್ನು ಇದೇ ಪರಿಸ್ಥಿತಿ ಒಂದು ವಾರದಲ್ಲಿ ಮುಂದುವರಿದರೆ ನೀರಿನ ಭವಣೆ ಎದುರಾಗುವ ಆತಂಕ ಶುರುವಾಗಿದ್ದು, ಜಿಲ್ಲೆಯಲ್ಲಿ ಇರುವ ಮಲಪ್ರಭಾ ಮತ್ತು ಘಟಪ್ರಭಾ ನದಿಗಳಿಗೆ ಜಲಾಶಯಗಳಿಂದ ನೀರು ಬಿಡಿಸುವ ವ್ಯವಸ್ಥೆಯನ್ನ ಸಿಎಂ ಸಿದ್ದರಾಮಯ್ಯ(CM Siddaramaiah)ನವರು ಮಾಡಬೇಕೆಂದು ಜಿಲ್ಲೆಯ ಜನರು ಆಗ್ರಹಿಸಿದ್ದಾರೆ. 
                                
ಜಿಲ್ಲೆಯ ಮೂರು ನದಿಗಳಿಗೆ ನೀರು ಬಿಡಿಸುವಂತೆ ಸಿಎಂ ಸಿದ್ದರಾಮಯ್ಯಗೆ ಒತ್ತಾಯ...
 ಇನ್ನು ಜಿಲ್ಲೆಯಲ್ಲಿ ನದಿಗಳು ಬತ್ತಿ ಹೋಗಿರುವ ದೃಶ್ಯಗಳು ಜಿಲ್ಲೆಯ ಜನರ ಆತಂಕವನ್ನು ಹೆಚ್ಚು ಮಾಡಿದ್ದು, ಕಳೆದು ತಿಂಗಳು ಮಲಪ್ರಭಾ ಮತ್ತು ಘಟಪ್ರಭಾ ನದಿಗಳಿಗೆ ನೀರನ್ನ ಬಿಡಿಸಲು ಸರ್ಕಾರ ಮುಂದಾಗಿದ್ದರೂ ಸಹ ಅದು ಪರಿಪೂರ್ಣವಾಗಿ ನೀರು ದೊರೆಯುವಂತಾಗಿಲ್ಲ, ಹೀಗಾಗಿ ಈಗ ಮತ್ತೇ ನೀರು ಬಿಡಿಸಲು ಮುಂದಾಗಬೇಕಿದೆ. ಇಲ್ಲವಾದರೆ ನೀರಿನ ಭವಣೆ ಮತ್ತಷ್ಟು ಹೆಚ್ಚಾಗಲಿದೆ. 

ಪ್ರತಿವರ್ಷ ಈ ಸಮಯಕ್ಕೆ ಮಳೆ ಬಂದು ಜಿಲ್ಲೆಯ ಮೂರು ನದಿಗಳಲ್ಲಿ ನೀರು ಇರುತ್ತಿತ್ತು. ಇದ್ರಿಂದ ಸಕಾಲಕ್ಕೆ ಜನ ಜಾನುವಾರುಗಳಿಗೆ ನೀರು ಸಿಗುತ್ತಿತ್ತು. ಆದ್ರೆ ಈ ಬಾರಿ ಆ ಪರಿಸ್ಥಿತಿ ಉಳಿದಿಲ್ಲ, ಯಾಕಂದ್ರೆ ಜಿಲ್ಲೆಯಲ್ಲಿ ಜೂನ್ ಎರಡನೇ ವಾರ ಬಂದ್ರೂ ಇನ್ನೂ ಮಳೆ ಬಾರದೇ ಬಿಸಿಲಿನ ಪ್ರಮಾಣವೇ ಹೆಚ್ಚಿರೋದು ಮತ್ತಷ್ಟು ಜಿಲ್ಲೆಯ ಜನರನ್ನ ಆತಂಕಕ್ಕೆ ದೂಡುವಂತೆ ಮಾಡಿದೆ. ಹೀಗಾಗಿ ಜಿಲ್ಲೆಯ ಸಚಿವರು, ಶಾಸಕರು ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ತಕ್ಷಣ ನದಿಗಳಿಗೆ ಜಲಾಶಯದಿಂದ ನೀರು ಬಿಡಿಸುವ ಕೆಲ್ಸ ಮಾಡಬೇಕಿದೆ ಅಂತಾರೆ ಸ್ಥಳೀಯರು. 

ಮುಂಗಾರುಪೂರ್ವ ಮಳೆ ಕೊರತೆ; 79 ಅಡಿಗೆ ಕುಸಿದ ಕೆಆರ್‌ಎಸ್‌ ನೀರಿನ ಮಟ್ಟ!
                                   
ಒಟ್ಟಿನಲ್ಲಿ ನಿರೀಕ್ಷೆಯಂತೆ ವಾಡಿಕೆ ಮಳೆಯಾಗದೇ ಇರುವ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಮೂರು ನದಿಗಳ ಒಡಲು ಖಾಲಿ ಖಾಲಿಯಾಗಿದ್ದು, ಆದಷ್ಟು ಶೀಘ್ರ ಮಳೆಯಾಗಲಿ ಇಲ್ಲವೆ ಸರ್ಕಾರ ನದಿಗಳಿಗೆ ಜಲಾಶಯಗಳಿಂದ ನೀರು ಬಿಡಿಸುವಂತಾಗಲಿ ಅನ್ನೋದೆ ಎಲ್ಲರ ಆಶಯ.

Follow Us:
Download App:
  • android
  • ios