ಚಿಕ್ಕಮಗಳೂರು: ಜೀವನದಿಗಳು ಜನಿ​ಸು​ವ ಜಿಲ್ಲೆ​ಯಲ್ಲೇ ಮಳೆ ಕ್ಷಾಮ !

ಮುಂಗಾರು ಮಳೆ ಆರಂಭದಲ್ಲೇ ಕೈ ಕೊಟ್ಟಿದ್ದರಿಂದ ಮಳೆಗಾಲದ ವಾತಾವರಣ ಮರೆಯಾಗಿ ಬೇಸಿಗೆ ಇನ್ನೂ ಮುಂದುವರಿದಿದೆಯಾ ಎಂಬಂತೆ ಮಲೆನಾಡಿನ ಚಿತ್ರಣ ಬದಲಾಗಿದೆ.

lack of rain in place where rivers originate at chikkamagaluru rav

ಆರ್‌. ತಾರಾನಾಥ್‌

ಚಿಕ್ಕಮಗಳೂರು (ಜೂ.15) ಮುಂಗಾರು ಮಳೆ ಆರಂಭದಲ್ಲೇ ಕೈ ಕೊಟ್ಟಿದ್ದರಿಂದ ಮಳೆಗಾಲದ ವಾತಾವರಣ ಮರೆಯಾಗಿ ಬೇಸಿಗೆ ಇನ್ನೂ ಮುಂದುವರಿದಿದೆಯಾ ಎಂಬಂತೆ ಮಲೆನಾಡಿನ ಚಿತ್ರಣ ಬದಲಾಗಿದೆ.

ತುಂಗಾ, ಭದ್ರಾ, ಹೇಮಾವತಿ, ನೇತ್ರಾವತಿ, ವೇದಾವತಿ, ಯಗಚಿ ನದಿಗಳ ತವರೂರು ಚಿಕ್ಕಮಗಳೂರು ಜಿಲ್ಲೆ. ಹಿಂದಿನ ವರ್ಷಗಳಲ್ಲಿ 9 ತಿಂಗಳು ಬಿಡದೆ ಇಲ್ಲಿ ಸದಾ ಮಳೆ ಸುರಿಯುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಚಿತ್ರಣ ಬದಲಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಜೂನ್‌ ಮೊದಲ ಹಾಗೂ ಎರಡನೇ ವಾರದಲ್ಲಿ ಮಳೆ ಪೂರ್ಣ ಪ್ರಮಾಣದಲ್ಲಿ ಕೈಕೊಟ್ಟಿದೆ. ಇದರಿಂದ ರೈತರು ಆತಂಕ ಪಡುವಂತಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ, ಭದ್ರಾ ಹಾಗೂ ತುಂಗಾ ಜಲಾಶಯಗಳನ್ನು ಕುಡಿಯುವ ನೀರಿಗಾಗಿ ಅವಲಂಬಿಸಿರು​ವ ಪಟ್ಟಣ ಪ್ರದೇಶಗಳು ಗಂಭೀರ ಸಮಸ್ಯೆ ಎದುರಿಸಲಿವೆ.

 

ಮುಂಗಾರು ಮಳೆ ಬೆನ್ನಲ್ಲೇ ಕರಾವಳಿಯಲ್ಲಿ ಕಡಲ್ಕೊರೆತ: ಮನೆ, ಅಂಗಡಿಗಳು ಸಮುದ್ರಪಾಲು

ಜಿಲ್ಲೆಯ ವಾರ್ಷಿಕ ಸರಾಸರಿ ಮಳೆಯ ವಾಡಿಕೆ 1833 ಮಿ.ಮೀ. ಕಳೆದ 10 ವರ್ಷಗಳ ಅಂಕಿ ಅಂಶ ನೋಡಿದರೆ 2016 ಮತ್ತು 2017ರಲ್ಲಿ ಮಳೆ ಪ್ರಮಾಣ ಇಳಿಮುಖವಾಗಿದ್ದು, ಇನ್ನುಳಿದ 8 ವರ್ಷಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಂದಿದೆ. ಈ ಬಾರಿ ಡಿಸೆಂಬರ್‌ನಿಂದ ಈವರೆಗೆ ಸರಾಸರಿ 266.6 ಮಿ.ಮೀ. ಮಳೆ ಬರಬೇಕಾಗಿತ್ತು. ಆದರೆ, ಈವರೆಗೆ 153.4 ಮಿ.ಮೀ. ಮಳೆ ಬಂದಿದೆ.

ಜಲಾನಯನ ಪ್ರದೇಶ:

ಜೀವ ನದಿಗಳು ಹುಟ್ಟಿಹರಿಯುವ ಜಲಾನಯನ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿತ ಕಂಡಿದೆ. ಹೇಮಾವತಿ, ತುಂಗಾ, ಭದ್ರಾ ಹಾಗೂ ನೇತ್ರಾವತಿ ನದಿಗಳು ಹುಟ್ಟಿಹರಿಯುವ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್‌.ಆರ್‌.ಪುರ ತಾಲೂಕುಗಳಲ್ಲಿ ಮಳೆ ನಿರೀಕ್ಷೆಯಂತೆ ಈವರೆಗೆ ಬಂದಿಲ್ಲ, ಅದ್ದರಿಂದ ತುಂಗಾ, ಭದ್ರಾ, ಹೇಮಾವತಿ ಜಲಾಶಯಗಳಲ್ಲಿ ನೀರಿನ ಒಳ ಹರಿವು ಶೂನ್ಯವಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ ಹುಟ್ಟಿಹರಿಯುವ ಯಗಚಿ ಹಳ್ಳ ಅವಲಂಬಿತ ಯಗಚಿ ಜಲಾಶಯದಲ್ಲೂ ನೀರಿನ ಒಳ ಹರಿವು ಇಲ್ಲದಂತಾಗಿದೆ. ಹಾಗಾಗಿ ಹೊರಗೆ ನೀರು ಬಿಡುವುದನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ. ಮಲೆನಾಡಿನಲ್ಲಿ ಮಳೆಗಾಲದಲ್ಲಿ ತುಂಬಿ ಹರಿಯುವ ನದಿಗಳು, ಹಳ್ಳಗಳು ನೀರಿಲ್ಲದೆ ಬತ್ತಿವೆ. ಕಣ್ಮನ ಸೆಳೆಯುವ ಝರಿಗಳು ಮರೆಯಾಗಿವೆ. ಮುಂದಿನ ದಿನಗಳಲ್ಲಿ ನೀರು ಅವಲಂಬಿತ ಹಲವು ಸಮಸ್ಯೆಗಳು ಎದುರಾಗಲಿವೆ. ಕಳೆದ ನಾಲ್ಕೈದು ದಿನಗಳ ಹಿಂದೆ ಮುಂಗಾರು ಆರಂಭದ ಮುನ್ಸೂಚನೆ ಇತ್ತು. ಆದರೆ, ಈ ದಿನದ ಬಿಸಿಲಿನ ಧಗೆ ನೋಡಿದರೆ ಮಳೆ ಕೈ ಕೊಡುವ ಸಾಧ್ಯತೆ ಇದೆ. ಅದ್ದರಿಂದಾಗಿ ರೈತರು ಹೊಲಗಳಲ್ಲಿ ಬಿತ್ತನೆ ಕಾರ್ಯವನ್ನು ತಾತ್ಕಾಲಿಕವಾಗಿ ಕೈ ಬಿಟ್ಟಿದ್ದಾರೆ. ಈಗಿನ ಪರಿಸ್ಥಿತಿ ಕಣ್ಣಾರೆ ಕಂಡು ಬಿತ್ತನೆ ಮಾಡಿದ್ದೆಯಾದಲ್ಲಿ ಮುಂದಿನ ದಿನಗಳಲ್ಲಿ ಬೆಳೆ ನಷ್ಟವನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ರೈತರು ಮಳೆಯನ್ನು ಎದುರು ನೋಡುತ್ತಿದ್ದಾರೆ.

ಜಲಾಶಯಗಳ ಸ್ಥಿತಿ- ಗತಿ

ಭದ್ರಾ ಜಲಾಶಯ: ಮೂಡಿಗೆರೆ ತಾಲೂಕಿನಲ್ಲಿ ಹುಟ್ಟಿಹರಿಯುವ ಭದ್ರಾ ನದಿ ಎನ್‌.ಆರ್‌.ಪುರ ತಾಲೂಕಿನಲ್ಲಿ ಭದ್ರಾ ಜಲಾಶಯ ಸೇರಿಕೊಳ್ಳಲಿದೆ. ಇವೆರಡು ತಾಲೂಕುಗಳಲ್ಲಿ ಮಳೆಯ ಪ್ರಮಾಣ ಭಾರೀ ಇಳಿಮುಖವಾಗಿದೆ. ಭದ್ರಾ ಜಲಾಶಯದ ನೀರಿನ ಗರಿಷ್ಠಮಟ್ಟ186 ಅಡಿ, ಬುಧವಾರ 137.3 ಅಡಿಯಷ್ಟಿತ್ತು. ಕಳೆದ ವರ್ಷ ಇದೇ ದಿನದಂದು 150.6 ಅಡಿಯಷ್ಟಿತ್ತು.

ಮಲೆನಾಡಿನಲ್ಲಿ ಮಳೆ ಇಲ್ಲದಿರುವುದರಿಂದ ಜಲಾಶಯಕ್ಕೆ ನೀರು ಬರುತ್ತಿಲ್ಲ, ಇದೇ ಜಲಾಶಯದ ನೀರನ್ನು ನಂಬಿರುವ ಪ್ರದೇಶಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಬಾರದೆಂದು ಸದ್ಯ 150 ಕ್ಯೂಸೆಕ್‌ ನೀರನ್ನು ಹೊರಗೆ ಬಿಡಲಾಗುತ್ತಿದೆ. ಭದ್ರಾ ಎಡ ಹಾಗೂ ಬಲದಂಡೆ ನಾಲೆಗಳಲ್ಲಿ ನೀರನ್ನು ನಿಲ್ಲಿಸಲಾಗಿದೆ.

ಯಗಚಿ ಜಲಾಶಯಕ್ಕೆ ಹೊರಗಿನಿಂದ ನೀರು ಬರುತ್ತಿಲ್ಲ. ಸದ್ಯ ಜಲಾಶಯದ ಗರಿಷ್ಠ ನೀರಿನ ಮಟ್ಟ964.63 ಮೀಟರ್‌, ಬುಧವಾರ 963.06 ಮೀಟರ್‌ ನೀರು ಜಲಾಶಯದಲ್ಲಿತ್ತು. ಸದ್ಯ ಜಲಾಶಯದಿಂದ ಕುಡಿಯವ ನೀರಿಗಾಗಿ ಮಾತ್ರ ನೀರನ್ನು ಬಿಡಲಾಗುತ್ತಿದೆ. ಅಚ್ಚುಕಟ್ಟು ಪ್ರದೇಶಕ್ಕೆ ಆಗಸ್ಟ್‌ ಮಾಹೆಯಲ್ಲಿ ನೀರಿನ ಅವಶ್ಯಕತೆ ಇದೆ ಎಂದು ಯಗಚಿ ಜಲಾಶಯದ ಸಹಾಯಕ ಎಂಜಿನಿಯರ್‌ ಶಿವಕುಮಾರ್‌ ತಿಳಿಸಿದ್ದಾರೆ.

ಕುಡಿವ ನೀರು ಪೂರೈಕೆಗೆ ಸಿದ್ದು ಖಡಕ್‌ ಸಂದೇಶ

 

ತಾಲೂಕು ವಾಡಿಕೆ ಈವರೆಗೆ ಬಂದ ಮಳೆ (ಮೀ.ಮೀ.ಗಳಲ್ಲಿ)

  • ಚಿಕ್ಕಮಗಳೂರ 236 188.7
  • ಕಡೂರು 176 152
  • ಕೊಪ್ಪ 320.5 125.8
  • ಮೂಡಿಗೆರೆ 352.9 188
  • ಎನ್‌.ಆರ್‌.ಪುರ 203.1 97.5
  • ಶೃಂಗೇರಿ 378 88
  • ತರೀಕೆರೆ 157 114
  • ಅಜ್ಜಂಪುರ 146 137
Latest Videos
Follow Us:
Download App:
  • android
  • ios