ಬೆಂಗಳೂರು(ಫೆ.26): ತಡೆಗೋಡೆ ನಿರ್ಮಿಸಲು ಗುಂಡಿ ಅಗೆಯುತ್ತಿದ್ದ ವೇಳೆ ಮಣ್ಣು ಕುಸಿದು ಬಿದ್ದು ಪಶ್ಚಿಮ ಬಂಗಾಳ ಮೂಲದ ಕೂಲಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಕೆಂಗೇರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಶ್ಚಿಮ ಬಂಗಾಳ ಮೂಲದ ಕೆಂಗೇರಿ ನಿವಾಸಿ ಚಂಚಲ್‌ ಬುರ್ಮನ್‌ (21) ಮೃತಪಟ್ಟ ಕಾರ್ಮಿಕ. ಈ ಸಂಬಂಧ ಗುತ್ತಿಗೆದಾರ ಗಣೇಶ್‌ ಬುರ್ಮನ್‌ (30) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕುಷ್ಟಗಿ: ಅಕ್ರಮ ಮರಳು ಗಣಿಗಾರಿಕೆ ವೇಳೆ ಗುಡ್ಡೆ ಕುಸಿದು ವ್ಯಕ್ತಿ ಸಾವು

ಉತ್ತರಹಳ್ಳಿ ರಸ್ತೆಯ ಸಮೀಪದಲ್ಲಿ ಖಾಸಗಿ ರಿಯಲ್‌ ಎಸ್ಟೇಟ್‌ ಸಂಸ್ಥೆಯು ಕಟ್ಟಡವೊಂದನ್ನು ನಿರ್ಮಿಸುತ್ತಿದೆ. ನಿರ್ಮಾಣ ಹಂತದ ಕಟ್ಟಡದ ಪಕ್ಕದಲ್ಲಿ ವೃಷಭಾವತಿ ಕಾಲುವೆಯಿದ್ದು, ಇದಕ್ಕೆ ತಡೆಗೋಡೆ ಕಟ್ಟಲು ರಿಯಲ್‌ ಎಸ್ಟೇಟ್‌ ಸಂಸ್ಥೆಯು ಗುತ್ತಿಗೆ ನೀಡಿತ್ತು. ಗುತ್ತಿಗೆದಾರ ಗಣೇಶ್‌, ಮೃತ ಚಂಚಲ್‌ ಸೇರಿದಂತೆ 10 ಮಂದಿ ಕಾರ್ಮಿಕರನ್ನು ಪಶ್ಚಿಮ ಬಂಗಾಳದಿಂದ ಕರೆಸಿಕೊಂಡು ತಡೆಗೋಡೆ ಕಾಮಗಾರಿ ನಡೆಸುತ್ತಿದ್ದ. ಬುಧವಾರ ಸಂಜೆ 4.30ರಲ್ಲಿ ವೃಷಭಾವತಿ ಕಾಲುವೆ ಪಕ್ಕದಲ್ಲಿ ಚಂಚಲ್‌ ಮಣ್ಣು ಅಗೆಯುತ್ತಿದ್ದಾಗ ಏಕಾಏಕಿ ಮೇಲಿನ ಮಣ್ಣು ಕುಸಿದು ಈತನ ಮೇಲೆ ಬಿದ್ದಿದೆ. ಕೂಡಲೇ ಸ್ಥಳೀಯ ಕೆಲಸಗಾರರು ಚಂಚಲ್‌ ಮೇಲೆ ಬಿದ್ದಿದ್ದ ಮಣ್ಣನ್ನು ತೆಗೆದು ಆಸ್ಪತ್ರೆಗೆ ಕರೆದೊಯ್ದಿದ್ದರು. ಚಂಚಲ್‌ನನ್ನು ಪರೀಕ್ಷಿಸಿದ ವೈದ್ಯರು ಉಸಿರುಗಟ್ಟಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.