ಬೆಂಗಳೂರು(ನ.07):ನಗರದಲ್ಲಿ ಗುರುವಾರ ರಾತ್ರಿ ಸುರಿದ ಮಳೆಯಿಂದ ತಾತ್ಕಾಲಿಕ್‌ ಶೆಡ್‌ ಕುಸಿದು ಬಿದ್ದು ಕಾರ್ಮಿಕನೊಬ್ಬ ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾಲಕ್ಷ್ಮಿ ಲೇಔಟ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಿಹಾರ ಮೂಲದ ಪುರಾನ್‌ ಪೂಜಾರಿ (19) ಮೃತ ದುರ್ದೈವಿ. ಘಟನೆಯಲ್ಲಿ ಗಾಯಗೊಂಡಿರುವ ಭಾವನಿ ಸಿಂಗ್‌ ಹಾಗೂ ಮಿಥುನ್‌ ಎಂಬುವರು ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಅವರು ಪ್ರಾಣಾಪಾಯದಿಂದ ಸುರಕ್ಷಿತವಾಗಿದ್ದಾರೆ. ಹಳೇ ಗೋಡೆಗೆ ತಾಕಿಕೊಂಡಂತೆ ತಾತ್ಕಾಲಿಕ ಶೆಡ್‌ ನಿರ್ಮಿಸಲಾಗಿತ್ತು. ರಾತ್ರಿ ಸುರಿದ ಮಳೆಯಿಂದ ಗೋಡೆ ನೆನೆದು ಮುಂಜಾನೆ 5ರ ಸುಮಾರಿಗೆ ಕುಸಿದು ಬಿದ್ದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸದಾಶಿವನಗರ ಸಮೀಪ ಸಿಕೊನ್‌ ಕಂಪನಿಯು ಖಾಸಗಿ ಶಾಲೆಯೊಂದರ ಕಟ್ಟಡ ನಿರ್ಮಿಸುತ್ತಿದೆ. ಕೆಲವು ತಿಂಗಳಿಂದ ಆ ಕಾಮಗಾರಿಯಲ್ಲಿ ಬಿಹಾರ ಮೂಲದ 60 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇಸ್ಕಾನ್‌ ದೇವಾಲಯ ಸಮೀಪ ಆ ಕಾರ್ಮಿಕರಿಗೆ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಿತು. ಅಂತೆಯೇ ಪೂರಾನ್‌ ಪೂಜಾರಿ, ಭಾವನಿ ಸಿಂಗ್‌ ಹಾಗೂ ಮಿಥುನ್‌ ನೆಲೆಸಿದ್ದರು. ಹಳೇ ಗೋಡೆಗೆ ಕಬ್ಬಿಣದ ಸರಳುಗಳನ್ನು ಹಾಕಿ ಶೆಡ್‌ಗಳು ನಿರ್ಮಾಣವಾಗಿದ್ದವು. ಗುರುವಾರ ರಾತ್ರಿ ಸುರಿದ ಮಳೆಯಿಂದ ಗೋಡೆ ಕುಸಿದಿದೆ. ಆಗ ಕಬ್ಬಿಣದ ಸರಳುಗಳು ನಿದ್ರೆಯಲ್ಲಿದ್ದ ಕಾರ್ಮಿಕರ ಮೇಲೆ ಬಿದ್ದಿವೆ. ಇದರಿಂದ ತಲೆಗೆ ಗಂಭೀರವಾಗಿ ಪೆಟ್ಟಾಗಿ ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೂಡಲೇ ಗಾಯಾಳುಗಳನ್ನು ಸಹ ಕಾರ್ಮಿಕರು ಆಸ್ಪತ್ರೆಗೆ ಸಾಗಿಸಿದ್ದಾರೆ. ಚಿಕಿತ್ಸೆಗೆ ಗಾಯಾಳು ಸ್ಪಂದಿಸುತ್ತಿದ್ದಾರೆ. ಈ ಘಟನೆ ಸಂಬಂಧ ಸಿಕೊನ್‌ ಕಂಪನಿ ವಿರುದ್ಧ ನಿರ್ಲಕ್ಷ್ಯತನ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉದ್ಯಾನ ನಗರಿ ಬೆಂಗಳೂರಲ್ಲಿ ಶೇ.17 ಅಧಿಕ ಮಳೆ ದಾಖಲೆ..!

ಯಲಹಂಕ ವ್ಯಾಪ್ತಿಯಲ್ಲಿ ಭಾರೀ ಮಳೆ

ನಗರದಲ್ಲಿ ಗುರುವಾರ ಸಂಜೆಯಿಂದ ಶುಕ್ರವಾರ ಬೆಳಗ್ಗೆವರೆಗೂ ಗುಡುಗು ಸಹಿತ ಸುರಿದ ಧಾರಾಕಾರ ಮಳೆ ಪರಿಣಾಮ ನಗರದ ಎಂಟು ಕಡೆಗಳಲ್ಲಿ ಮರ ಬಿದ್ದಿವೆ. ಯಲಹಂಕ ವಲಯದಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ. ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗ್ಗೆ 8.30ರ ವೇಳೆಗೆ ನಗರದ ಎಚ್‌ಎಸ್‌ಆರ್‌ ಬಡಾವಣೆಯ ಆರ್‌ಟಿಓ ಕಚೇರಿ ಬಳಿ, ಕೆ.ಜಿ ಹಳ್ಳಿ 13ನೇ ಮುಖ್ಯರಸ್ತೆ, ಬಿಇಎಲ್‌ ಬಡಾವಣೆ 3 ಬ್ಲಾಕ್‌, ಎಂ.ಎಸ್‌.ಪಾಳ್ಯ ಮುಖ್ಯರಸ್ತೆ ಹತ್ತಿರ ಭರತನಗರ ಹಾಗೂ ಜಯನಗರ ಅಶೋಕ್‌ ಪಿಲ್ಲರ್‌ ಬಳಿ ತಲಾ ಒಂದು ಮರ ಸೇರಿದಂತೆ ಒಟ್ಟು ಎಂಟು ಮರ ಧರೆಗುರುಳಿವೆ. ದೂರಿನ ಮೇರೆಗೆ ಬಿಬಿಎಂಪಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮರಗಳನ್ನು ತೆರವುಗೊಳಿಸಿದರು. ಆರ್‌.ಆರ್‌.ನಗರದ ಹಲಗೇವಡೆರಹಳ್ಳಿಯಲ್ಲಿ ಮನೆಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು.

ಯಲಹಂಕದ ಕೊಡಿಗೇಹಳ್ಳಿಯಲ್ಲಿ ಅತೀ ಹೆಚ್ಚು 77 ಮಿ.ಮೀ ಮಳೆ ಬಿದ್ದಿದ್ದು, ಉಳಿದಂತೆ ಹೆಗ್ಗನಹಳ್ಳಿ 73.5, ಚೊಕ್ಕಸಂದ್ರ 70.5, ನಂದಿನಿ ಬಡಾವಣೆ ಹಾಗೂ ನಾಗಾಪುರದಲ್ಲಿ ತಲಾ 70, ಆರ್‌.ಆರ್‌.ನಗರ ಎಚ್‌ಎಂಟಿ ವಾರ್ಡ್‌ 68, ಹೆರೋಹಳ್ಳಿ 67.5, ಪೀಣ್ಯ ಕೈಗಾರಿಕಾ ಪ್ರದೇಶ 60, ಮನೋರಾಯನಪಾಳ್ಯ 59, ಮಾರಪ್ಪನಪಾಳ್ಯ 57, ವಿಶ್ವನಾಥ ನಾಗೇನಹಳ್ಳಿಯಲ್ಲಿ 52.5 ಮಿ.ಮೀ. ಮಳೆ ದಾಖಲಾಯಿತು.

ತುಂತುರು ಮಳೆ

ಶುಕ್ರವಾರ ಬೆಳಗ್ಗೆಯಿಂದ ಬಿಸಿಲಿನ ವಾತಾವರಣ ಕಂಡು ಬಂತು. ಸಂಜೆ ಹೊತ್ತಿಗೆ ಅಲ್ಲಲ್ಲಿ ತುಂತುರು ಮಳೆ ಸುರಿದಿದ್ದು, ಬಿಟ್ಟರೆ ಅಷ್ಟಾಗಿ ಮಳೆ ದಾಖಲಾಗಿಲ್ಲ. ನಗರದ ಗರುಡಾಚಾರ್‌ಪಾಳ್ಯದಲ್ಲಿ 4 ಮಿ.ಮೀ, ಹೂಡಿ 3.5, ನಾಗಾಪುರ 3 ಮಿ.ಮೀ ಮಳೆ ಬಂದಿದೆ. ಉಳಿದಂತೆ ಹೊಯ್ಸಳ ನಗರ, ಸಂಪಿಗೆನಗರ, ಬೆನ್ನಿಗಾನಹಳ್ಳಿ ಸೇರಿದಂತೆ ಅಲ್ಲಲ್ಲಿ ತುಂತುರು ಮಳೆ ಬಂದಿದೆ. ನ. 7 ಹಾಗೂ 8 ರಂದು ಬೆಂಗಳೂರಿನಲ್ಲಿ ಬಿಸಿಲು ಸಹಿತ ಕೆಲವು ಕಡೆಗಳಲ್ಲಿ ತುಂತುರು ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ (ಕೆಎಸ್‌ಎನ್‌ಡಿಎಂಸಿ) ಮುನ್ಸೂಚನೆ ನೀಡಿದೆ.