ಜಲ ಮಂಡಳಿಯಿಂದ ಕೆಂಗೇರಿ ಟೌನ್‌ನ ಭಜನ ಮಂದಿರ ರಸ್ತೆಯಲ್ಲಿ ನಡೆಯುತ್ತಿದ್ದ ಒಳಚರಂಡಿ ಕಾಮಗಾರಿ, ಆಕಸ್ಮಿಕವಾಗಿ ಕಾಂಕ್ರಿಟ್‌ ರಸ್ತೆಯ ಸಿಮೆಂಟ್‌ ಸ್ಲಾಬ್‌ ಕುಸಿತ, ಓರ್ವ ಸಾವು, ಮತ್ತೊಬ್ಬ ಕಾರ್ಮಿಕನಿಗೆ ಗಾಯ

ಬೆಂಗಳೂರು(ನ.27): ಒಳಚರಂಡಿ ಕಾಮಗಾರಿ ವೇಳೆ ಕಾಂಕ್ರಿಟ್‌ ರಸ್ತೆಯ ಸಿಮೆಂಟ್‌ ಸ್ಲಾಬ್‌ ಕುಸಿದು ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟು ಮತ್ತೊಬ್ಬ ಕಾರ್ಮಿಕ ಗಾಯಗೊಂಡಿರುವ ದುರ್ಘಟನೆ ಕೆಂಗೇರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೋಲಾರದ ವೆಂಕಟಾಪುರ ಗ್ರಾಮದ ಚಲಪತಿ (25) ಮೃತ ಕಾರ್ಮಿಕ. ಇದೇ ಗ್ರಾಮದ ಮುನಿಯಪ್ಪ(45) ಎಂಬುವರ ಕೈ-ಕಾಲುಗಳಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಜಲಮಂಡಳಿಯಿಂದ ಕೆಂಗೇರಿ ಟೌನ್‌ನ ಭಜನ ಮಂದಿರ ರಸ್ತೆಯಲ್ಲಿ ಒಳಚರಂಡಿ ಸಂಪರ್ಕ ಕಲ್ಪಿಸಲು ರಸ್ತೆಯನ್ನು ಅಗೆಯುವ ಕಾಮಗಾರಿ ಕೈಗೊಳ್ಳಲಾಗಿತ್ತು. ಶನಿವಾರ ಮಧ್ಯಾಹ್ನ 3ರ ಸುಮಾರಿಗೆ ಕಾರ್ಮಿಕರು ರಸ್ತೆ ಅಗೆಯುವ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಂಕ್ರಿಟ್‌ ರಸ್ತೆಯ ಸಿಮೆಂಟ್‌ ಸ್ಲಾ್ಯಬ್‌ ಕುಸಿದು ಕಾರ್ಮಿಕ ಚಲಪತಿ ಮೇಲೆ ಬಿದ್ದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈತನ ಸಮೀಪವೇ ಇದ್ದ ಮತ್ತೊಬ್ಬ ಕಾರ್ಮಿಕ ಮುನಿಯಪ್ಪಗೂ ಸ್ಲಾ್ಯಬ್‌ ತಾಕಿದ್ದು, ಗಾಯಗೊಂಡಿದ್ದಾರೆ. ಕೂಡಲೇ ಸಹ ಕಾರ್ಮಿಕರು ಹಾಗೂ ಸ್ಥಳೀಯರು ಗಾಯಾಳು ಮುನಿಯಪ್ಪನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ನಗರದ ಇತಿಹಾಸಕ್ಕೆ ಮೆರಗು ನೀಡಿದ ವಿ.ವಿ.ಪುರಂ ಹಬ್ಬ

ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ದೇವರಾಜ್‌ ಎಂಬುವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಂಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.