ವಿದ್ಯಾರ್ಥಿಗಳ ಫೈಟಿಂಗ್: ಸ್ಥಳೀಯರ ಸಮಯಪ್ರಜ್ಞೆ, ಇಬ್ಬರು ಪ್ರಾಣಾಪಾಯದಿಂದ ಪಾರು

ಕಾಲೇಜು ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದ್ದು, ಅದೃಷ್ಟವಶಾತ್ ಸ್ಥಳೀಯರ ಸಮಯಪ್ರಜ್ಞೆಯಿಂದ ಇಬ್ಬರು ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Kundapur: College students fight with rods, two seriously injured

ಕುಂದಾಪುರ,(ಜ 28):  ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜು ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

 ಭಂಡಾರ್‌ಕಾರ್ಸ್‌ ಕಾಲೇಜಿನಲ್ಲಿ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ ಗಣೇಶ್ ಹಾಗೂ ಬೇರೆ ಕಾಲೇಜಿನ ವಿದ್ಯಾರ್ಥಿಗಳ ತಂಡವೊಂದು, ಭಂಡಾರ್‌ಕಾರ್ಸ್‌ ಕಾಲೇಜಿನಲ್ಲಿ ಅಭ್ಯಾಸಿಸುತ್ತಿದ್ದ ವಿದ್ಯಾರ್ಥಿಗಳನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಗಂಭೀರ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. 

ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡು ಸರ್ಕಾರೀ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಂತಿಮ ಬಿಕಾಂ ವಿದ್ಯಾರ್ಥಿ ಮಿಥುನ್ ಹಾಗೂ ದ್ವಿತೀಯ ಬಿಬಿಎಂ ವಿದ್ಯಾರ್ಥಿ ಅಕ್ಷಯ ಗಂಭೀರ ಗಾಯಗೊಂಡವರು. 

ಅದೃಷ್ಟವಶಾತ್ ಸ್ಥಳೀಯರ ಸಮಯಪ್ರಜ್ಞೆಯಿಂದ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಜಗಳವನ್ನು ಬಿಡಿಸಲು ಹೋದ ಇತರ ಕೆಲವು ವಿದ್ಯಾರ್ಥಿಗಳೂ ಸಹ ಗಾಯಗೊಂಡಿದ್ದಾರೆ.

ಘಟನೆಯ ವಿವರ: 
ಗಣೇಶ್ ಹಾಗೂ ಮಿಥುನ್ ಮತ್ತು ಅಕ್ಷಯ ನಡುವೆ ಮೊದಲಿನಿಂದಲೂ ವೈಷಮ್ಯವಿತ್ತು. ಗಣೇಶ್‌ಗೆ ಈ ಹಿಂದೆ ಅಕ್ಷಯ್ ಮತ್ತು ಮಿಥುನ್ ತಂಡದಿಂದ ಹಲ್ಲೆ ನಡೆದಿತ್ತು ಎನ್ನಲಾಗಿದೆ. 

ಇದೇ ಕಾರಣಕ್ಕೆ ದ್ವೇಷ ಸಾಧಿಸುತ್ತಿದ್ದ ಗಣೇಶ್ ತನ್ನ ಸ್ನೇಹಿತರಾದ ನಾಡಾ ಗುಡ್ಡೆಯಂಗಡಿ ಪ್ರದೇಶದ ಕಾಲೇಜೊಂದರ ವಿದ್ಯಾರ್ಥಿಗಳ ಸಹಾಯ ಕೇಳಿದ್ದ.  ಸೋಮವಾರ ಮಧ್ಯಾಹ್ನ ಊಟದ ಸಮಯಕ್ಕೆ ಮಿಥುನ್ ಮತ್ತು ಅಕ್ಷಯ್ ಹಾಗೂ ಅವರ ಸ್ನೇಹಿತರು ಕಾಲೇಜು ಕ್ಯಾಂಪಸ್ಸಿನಿಂದ ಹೊರ ಬಂದಿದ್ದರು. 

ಇದೇ ಸಂದರ್ಭ ಬೈಕಿನಲ್ಲಿ ಬಂದು ಕಾದು ಕುಳಿತಿದ್ದ ಗಣೇಶ್ ಹಾಗೂ ಆತನ ಹತ್ತು ಜನ ಸ್ನೇಹಿತರು ಗಾಂಧಿ ಮೈದಾನದ ಎದುರುಗಡೆ ರಸ್ತೆಯಲ್ಲಿ ಮಿಥುನ್ ಹಾಗೂ ಅಕ್ಷಯ ಮೇಲೆ ಕಬ್ಬಿಣದ ರಾಡಿನಿಂದ ಏಕಾಏಕಿ ಹಲ್ಲೆ ನಡೆಸಿದ್ದಾರೆ.

ಘಟನೆಯಿಂದ ವಿಚಲಿತರಾದ ಮಿಥುನ್ ಮತ್ತು ಅಕ್ಷಯ್ ಜೊತೆಗಿದ್ದ ಉಳಿದ ವಿದ್ಯಾರ್ಥಿಗಳು ನೋಡನೋಡುತ್ತಿದ್ದಂತೆಯೇ ಸಿನಿಮೀಯ ಮಾದರಿಯಲ್ಲಿ ಗಂಭೀರ ಹಲ್ಲೆ ನಡೆಸಿದ್ದು, ಸಿಕ್ಕಸಿಕ್ಕ ಕಡೆ ಹೊಡೆದಿದ್ದಾರೆ. 

ಇದೇ ವೇಳೆ ಸ್ಥಳಕ್ಕೆ ಬಂದ ಕುಂದಾಪುರ ಪುರಸಭೆಯ ಸದಸ್ಯ ಗಿರೀಶ್ ಜಿ.ಕೆ ಹಾಗೂ ಕಿರುಚಿತ್ರ ನಟ ರಕ್ಷಿತ್ ಶೆಟ್ಟಿ ಅವರು ಹೊಡೆದಾಟ ಬಿಡಿಸಲು ಹೋದಾಗ ಅವರಿಗೂ ಹಲ್ಲೆಗೆ ಮುಂದಾಗಿದ್ದಾರೆ.

ಇನ್ನೇನು ಅಲ್ಲಿದ್ದ ಸ್ಥಳೀಯರು ಒಟ್ಟಾಗುತ್ತಿದ್ದಂತೆ ವಿದ್ಯಾರ್ಥಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಮುಖ ಆರೋಪಿ ಗಣೇಶ್ ದ್ವಿತೀಯ ಬಿಎಸ್ಸಿಯಲ್ಲಿ ಕಳೆದ ವರ್ಷ ಹಾಜರಾತಿ ಕೊರತೆಯಿಂದಾಗಿ ಅಂತಿಮ ವರ್ಷಕ್ಕೆ ಹೋಗಲಾಗದೇ ದ್ವಿತೀಯ ವರ್ಷದ ತರಗತಿಯಲ್ಲಿಯೇ ಇದ್ದ ಎನ್ನಲಾಗಿದೆ.

ಮಿಥುನ್ ಅವರ ತಲೆ, ಕಾಲು ಹಾಗೂ ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಅಕ್ಷಯ್ ಅವರ ಕಾಲಿಗೆ ಗಾಯಗಳಾಗಿವೆ. ಹಲ್ಲೆಗೆ ಕಾಲೇಜಿನ ಪೂರ್ವ ದ್ವೇಷವೇ ಕಾರಣವೆನ್ನಲಾಗಿದ್ದು, ದ್ವೇಷಕ್ಕೆ ಕಾರಣ ತಿಳಿದು ಬಂದಿಲ್ಲ.

ಗಂಭೀರ ಗಾಯಗೊಂಡಿರುವ ಇಬ್ಬರು ವಿದ್ಯಾರ್ಥಿಗಳು ಕುಂದಾಪುರ ಸರ್ಕಾರೀ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕುಂದಾಪುರ ಠಾಣೆಯಲ್ಲಿ ಕಾರಿನ ಕೀ ಕಳವು ಮತ್ತು ವಿದ್ಯಾರ್ಥಿಗಳಿಗೆ ಮಾರಣಾಂತಿಕ ಹಲ್ಲೆ ಮತ್ತು ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲಿಸರು ಬಲೆ ಬೀಸಿದ್ದಾರೆ.

Latest Videos
Follow Us:
Download App:
  • android
  • ios