ಬೆಳಗಾವಿ,[ಜೂ.26]: ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರನ್ನು ಧಾರವಾಡದ ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಬೆಳಗಾವಿ ರಾಯಭಾಗ ಶಾಸಕ ದುರ್ಯೋಧನ ಐಹೊಳೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಇಂದು[ಬುಧವಾರ] ಸುದ್ದಿಗಾರರೊಂದಿಗೆ  ಮಾತನಾಡಿದ ಶಾಸಕ ದುರ್ಯೋಧನ ಐಹೊಳೆ, ಸಿಎಂ ಕುಮಾರಸ್ವಾಮಿಯವರ ಮಾನಸಿಕ ಸ್ಥಿತಿ ಸರಿಯಿಲ್ಲ. ಅವರನ್ನು ಧಾರವಾಡ ಮಾನಸಿಕ ಆಸ್ಪತ್ರೆಗೆ ಕಳುಹಿಸಬೇಕು. ಸಿಎಂ ಅವರು ಗ್ರಾಮವಾಸ್ತವ್ಯ ಅಲ್ಲಿ ಮಾಡುವ ಬದಲು ಧಾರವಾಡ ಆಸ್ಪತ್ರೆಯಲ್ಲಿ ವಾಸ್ತವ್ಯ ಮಾಡಿದ್ರೆ ಎಲ್ಲವು‌ ಸರಿಹೋಗುತ್ತದೆ ಎಂದರು. 

ವೋಟು ಮೋದಿಗೆ, ಸಮಸ್ಯೆ ನಾನು ಬಗೆಹರಿಸಬೇಕಾ? ಸಿಡಿಮಿಡಿ ಸಿಎಂನಿಂದ ವಿವಾದದ ಕಿಡಿ

ಈಗ ರಾಜ್ಯದಲ್ಲಿ ಮಳೆ ಆಗುತ್ತಿದೆ. ಸಿಎಂ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಈ ಹಿಂದೆ ಎರಡು ಮೂರು ತಿಂಗಳು ಬರಗಾಲವಿತ್ತು. ಆಗ ಗ್ರಾಮ ವಾಸ್ತವ್ಯ ಮಾಡಲಿಲ್ಲ. ಹಣ ಬಿಡುಗಡೆ ಮಾಡಲಿಲ್ಲ. ಪಕ್ಷಕ್ಕೆ ಮುಖ್ಯಮಂತ್ರಿಯಲ್ಲ, ರಾಜ್ಯಕ್ಕೆ ಮುಖ್ಯಮಂತ್ರಿ ಎಂಬುದನ್ನ ತಿಳಿದುಕೊಳ್ಳಬೇಕು  ಎಂದು ವಾಗ್ದಾಳಿ ನಡೆಸಿದರು.

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬುಧವಾರ ರಾಯಚೂರಿನ ಯರಮರಸ್ ಸರ್ಕೀಟ್ ಹೌಸ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ ವೈಟಿಪಿಎಸ್‍ನ ನೂರಾರು ಜನ ಕಾರ್ಮಿಕರು ಸಿಎಂ ಬಸ್‍ಗೆ ಮುತ್ತಿಗೆ ಹಾಕಿದರು. 

ಈ ವೇಳೆ ಸಿಟ್ಟಿಗೆದ್ದ ಮುಖ್ಯಮಂತ್ರಿಗಳು, ನರೇಂದ್ರ ಮೋದಿಗೆ ವೋಟ್ ಹಾಕಿ ನಮ್ಮತ್ರ ಸಮಸ್ಯೆ ಬಗೆಹರಿಸಿ ಅಂತೀರಾ? ನಿಮಗೆಲ್ಲಾ ಮರ್ಯಾದೆ ಕೊಡಬೇಕೇ? ಲಾಠಿಚಾರ್ಜ್ ಮಾಡ್ಬೇಕು ನಿಮಗೆ ಎಂದು ಹೇಳಿ ಪ್ರತಿಭಟನಾಕಾರರ ಮೇಲೆ ರೇಗಾಡಿದರು.  ಇದರಿಂದ ಬಿಜೆಪಿ ನಾಯಕರು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.