ಬಾಗಲಕೋಟೆ(ಅ.3): ಕಾಣದ ಶಕ್ತಿಗಳು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಕಟ್ಟಿಹಾಕುತ್ತಿದ್ದು, ಇಂತಹ ಸಂದರ್ಭದಲ್ಲಿ ಅವರಿಗೆ ಉತ್ತರ ಕರ್ನಾಟಕದ ಜನತೆಯ ಬೆಂಬಲ ಬಹಳ ಅಗತ್ಯವಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. 

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬಿ.ಎಸ್‌.ಯಡಿಯೂರಪ್ಪ ಮೇಲೆ ಉತ್ತರ ಕರ್ನಾಟಕದ ಜನತೆ ಅಸಮಾಧಾನಗೊಳ್ಳಲಿ ಎಂಬ ಉದ್ದೇಶದಿಂದಲೇ ಪರಿಹಾರ ಧನವನ್ನು ನೀಡುವಲ್ಲಿ ವಿಳಂಬ ಮಾಡುವ ಪಿತೂರಿ ಮಾಡುತ್ತಿದೆ ಎಂದು ಆಪಾದಿ​ಸಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಪ್ರಭಾವಿಯಾಗಿರುವ ಬಿಎಸ್‌ವೈ ಅವರ ಶಕ್ತಿ ಕುಂದಿಸುವ ಕೆಲಸ ಸದ್ಯ ನಡೆಯುತ್ತಿದೆ. 2009ರ ಪ್ರವಾಹದಲ್ಲಿ ಬಿಎಸ್‌ವೈ ಮಾಡಿದ ಕೆಲಸ ಕಾರ್ಯಗಳು ನಿಜಕ್ಕೂ ಅದ್ಭುತವಾಗಿದ್ದವು. ಸದ್ಯ ಅವರು ಕೈಗೊಳ್ಳುತ್ತಿರುವ ನೆರೆ ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ಕೇಂದ್ರದಿಂದ ಬೆಂಬಲ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ತಕ್ಷಣವೇ ಬಿಹಾರ ಹಾಗೂ ಮಹಾರಾಷ್ಟ್ರಕ್ಕಿಂತಲೂ ಹೆಚ್ಚಿನ ಪರಿಹಾರ ಧನ ನೀಡಬೇಕು ಎಂದು ಆಗ್ರಹಿಸಿದ ಶ್ರೀಗಳು, ರಾಜ್ಯದಿಂದ ಕೇಂದ್ರಕ್ಕೆ ನಾವು ತೆರಿಗೆ ಕಟ್ಟುತ್ತೇವೆ. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಮಾನವೀಯತೆ ದೃಷ್ಟಿಯಿಂದ ಕೇಂದ್ರ ಸರ್ಕಾರ ಸ್ಪಂದಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. 

ರಾಜೀನಾಮೆ ನೀಡಿ ಬನ್ನಿ:

ಉತ್ತರ ಕರ್ನಾಟಕ ಸಂತ್ರಸ್ತರ ಬಗ್ಗೆ ಧ್ವನಿ ಎತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ ಶ್ರೀಗಳು, ನರೇಂದ್ರ ಮೋದಿ ಭಾರತವನ್ನು ವಿಶ್ವಗುರು ಮಾಡಲು ಹೋರಾಡಲಿ. ಅದರ ಬದಲಾಗಿ ಕೇವಲ ಉತ್ತರ ಭಾರತ ವಿಶ್ವಗುರು ಮಾಡಿದರೆ ಸಾಲದು, ಕರ್ನಾಟಕದಲ್ಲಿನ ಜನ ಸಮಸ್ಯೆ ಬಗೆಹರಿದಾಗ ಮಾತ್ರ ಭಾರತ ವಿಶ್ವಗುರು ಆಗಲು ಸಾಧ್ಯ ಎಂದು ತಿಳಿಸಿದ್ದಾರೆ. 

ಪ್ರಧಾನಿ ಮೋದಿ ಅವರು ಕರ್ನಾಟಕವನ್ನು ಕಡೆಗಣಿಸಿದ್ದಾರೆ. ರಾಜ್ಯದ 25 ಸಂಸದರು ದನಿ ಎತ್ತುತ್ತಿಲ್ಲ. ಮತ ನೀಡಿದ ರಾಜ್ಯದ ಜನತೆಗೆ ನಿಮ್ಮ ಕೊಡುಗೆ ಏನು ಎಂದು ಆಕ್ಷೇಪಿಸಿದ ಶ್ರೀಗಳು, ರಾಜ್ಯದ 25 ಬಿಜೆಪಿ ಸಂಸದರು ತಕ್ಷಣವೇ ಮೋದಿ ಬಳಿಗೆ ಹೋಗಿ ಪರಿಹಾರಕ್ಕೆ ಆಗ್ರಹಿಸಿ. ಇಲ್ಲವಾದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋರಾಟಕ್ಕೆ ಬನ್ನಿ ಎಂದು ಕರೆ ನೀಡಿದರು.

ಕೇಂದ್ರದ ಪರಿಹಾರ ಅಗತ್ಯವಿಲ್ಲ ಎಂದ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಉತ್ತರಿಸಿದ ಶ್ರೀಗಳು, ತೇಜಸ್ವಿ ಸೂರ್ಯ ಈಗ ಬೆಳೆಯುವ ರಾಜಕಾರಣಿ. ಉತ್ತರ ಕರ್ನಾಟಕದ ಜನರ ಕಷ್ಟಅವರಿಗೆ ಗೊತ್ತಿಲ್ಲ. ತಕ್ಷಣವೇ ನೀಡಿರುವ ಬೇಜವಾಬ್ದಾರಿ ಹೇಳಿಕೆಗೆ ಕ್ಷಮೆ ಕೇಳಲಿ. ಅಪ್ರಬುದ್ಧ ಮಾತುಗಳನ್ನಾಡುವುದನ್ನು ಬಿಟ್ಟರೆ ಭವಿಷ್ಯವಿದೆ. ಕೇವಲ ಜೈಕಾರ ಹಾಕುವುದರಿಂದ ದೇಶ ಭಕ್ತರಾಗಲು ಸಾಧ್ಯವಿಲ್ಲ ಎಂದು ನುಡಿದರು.

ಜಾತಿಗಣತಿಯನ್ನು ಸರ್ಕಾರ ತಿರಸ್ಕರಿಸುವ ವಿಷಯದಲ್ಲಿ ಮತ್ತೊಮ್ಮೆ ಯೋಚಿಸಲಿ. ಇದು ಬಿಎಸ್‌ವೈ ಮತ್ತು ರಾಜ್ಯಾಧ್ಯಕ್ಷ ಕಟೀಲ್‌ ಅವರ ಪಕ್ಷದ ಆಂತರಿಕ ವಿಚಾರ. ಆದರೆ ಬೆಂಗಳೂರು ಮಹಾನಗರ ಮೇಯರ್‌ ವಿಷಯದಲ್ಲಿ ಬಿಎಸ್‌ವೈ ಮಾತಿಗೆ ಮನ್ನಣೆ ಸಿಗದಿರುವುದರಿಂದ ಕನ್ನಡಿಗರು ಬೇಸರಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.