ಚಿಕ್ಕೋಡಿ[ಜೂ.25]: ನಮ್ಮ ರಾಜಕೀಯ ನಾಯಕರು ತಾವು ಮಾಡೋ ರಾಜಕಾರಣಕ್ಕೆ 24*7 ಟೈಂ ಕೊಡ್ತಾರೆ. ಆದರೆ ಇಲ್ಲೊಬ್ಬ ಶಾಸಕ ರಾಜಕಾರಣದ ಡೊಂಬರಾಟ ಬಿಟ್ಟು ಮಕ್ಕಳಿಗೆ ಪಾಠ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. 

ಬೆಳಗಾವಿ ಜಿಲ್ಲೆಯ ಕುಡಚಿ ಶಾಸಕ ಪಿ. ರಾಜೀವ್ ಮಕ್ಕಳಿಗೆ ಪಾಠ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಿಡಕಲ್  ಗ್ರಾಮದ ಮನ್ನಿಕೇರಿ ತೋಟದ ಶಾಲೆಯ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ರಾಜೀವ್ ಇತಿಹಾಸ ಹಾಗೂ ವಿಜ್ಞಾನ ಪಾಠ ಮಾಡಿದ್ದಾರೆ. 

9 ನೇ ತರಗತಿಯ ವಿದ್ಯಾರ್ಥಿಗಳಿಗೆ ಜೀವಿಗಳ ಉಗಮ ಹಾಗೂ ನಾಗರೀಕತೆಯ ಬಗ್ಗೆ ಪಾಠ ಹೇಳಿದ್ದಾರೆ. ಈ ಹಿಂದೆಯೂ ಶಾಸಕ ಪಿ ರಾಜೀವ್ ರಸ್ತೆ ಕಾಮಗಾರಿ ಮಾಡುತ್ತಿದ್ದ ಕಾರ್ಮಿಕರ ಜತೆ ಕಲ್ಲು ಒಡೆದು ಸುದ್ದಿಯಾಗಿದ್ದರು. ಶಾಸಕರು ಎಂದರೆ ಗೂಟದ ಕಾರು ಏರಿ ಬರುವ ಸರದಾರರು ಎಂಬ ಭಾವನೆಯನ್ನು ಜನರಿಂದ ತೊಡೆದು ಹಾಕುವಲ್ಲಿ ಶಾಸಕ ಪಿ ರಾಜೀವ್ ಮುಂಚೂಣಿಲ್ಲಿದ್ದಾರೆ.

ನೇರವಾಗಿ ಜನರ ಜೊತೆ ಬೆರೆತು ಇಂತಹ ಕೆಲಸಗಳನ್ನು ಮಾಡುವ ಮೂಲಕ ರಾಜೀವ್  ಜನಸ್ನೇಹಿ ಶಾಕಸ ಎಂದು ಗುರುತಿಸಿಕೊಂಡಿದ್ದಾರೆ. ಸದ್ಯ ಸರ್ಕಾರಿ ಶಾಲೆ ಮೇಷ್ಟ್ರಾದ ಶಾಸಕರ ಪಾಠ ಸೋಶಿಯಲ್ ಮಿಡಿಯಾದಲ್ಲೂ ಸದ್ದು ಮಾಡುತ್ತಿದ್ದು, ಶಿಕ್ಷಣ ಪ್ರೇಮಿಗಳು ಜನ ನಾಯಕನ ಈ ಕೆಲಸಕ್ಕೆ ಭೇಷ್ ಎಂದಿದ್ದಾರೆ.