ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದಿಂದ ಮಂಗಳೂರು- ಜಮಖಂಡಿಗೆ ರಾಜ ಹಂಸ ಬಸ್  ಹೊಸ ರಾಜಹಂಸ ಸಾರಿಗೆಯು ಡಿ.24ರಿಂದ ಕಾರ್ಯಾಚರಣೆ ಆರಂಭಿಸಿದೆ.

 ಮಂಗಳೂರು (ಡಿ.28): ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಮಂಗಳೂರು (Mangaluru) ವಿಭಾಗದಿಂದ ಮಂಗಳೂರು- ಜಮಖಂಡಿಗೆ (ಮಂಗಳೂರಿನಿಂದ ವಯಾ ಉಡುಪಿ, ಅಂಕೋಲಾ, ಹುಬ್ಬಳ್ಳಿ, ಧಾರವಾಡ, ಸವದತ್ತಿ, ಮುಧೋಳ) ಮಾರ್ಗವಾಗಿ ಹೊಸ ರಾಜಹಂಸ ಸಾರಿಗೆಯು ಡಿ.24ರಿಂದ ಕಾರ್ಯಾಚರಣೆ ಆರಂಭಿಸಿದೆ. ಮಂಗಳೂರು ಬಸ್‌ ನಿಲ್ದಾಣದಿಂದ ಸಂಜೆ 6 ಗಂಟೆಗೆ ಹೊರಟು, ಉಡುಪಿಗೆ ರಾತ್ರಿ 7.30ಕ್ಕೆ ತಲುಪಲಿದೆ. ಕುಂದಾಪುರದಿಂದ ರಾತ್ರಿ 8.15ಕ್ಕೆ ಹೊರಟು, ಹುಬ್ಬಳ್ಳಿಗೆ ರಾತ್ರಿ 2.30ಕ್ಕೆ ತಲುಪಲಿದೆ. ರಾಮದುರ್ಗದಿಂದ ಬೆಳಗ್ಗೆ 4.30ಕ್ಕೆ ಹೊರಟು ಜಮಖಂಡಿಗೆ (Jamakhandi) ಮರುದಿನ ಬೆಳಿಗ್ಗೆ 7.30 ಕ್ಕೆ ತಲುಪಲಿದೆ.

ಮರು ಪ್ರಯಾಣದಲ್ಲಿ ಜಮಖಂಡಿಯಿಂದ ಸಂಜೆ 6 ಗಂಟೆಗೆ ಹೊರಟು ರಾಮದುರ್ಗಕ್ಕೆ ರಾತ್ರಿ 7.30ಕ್ಕೆ ತಲುಪಲಿದೆ. ಹುಬ್ಬಳ್ಳಿಯಿಂದ ರಾತ್ರಿ 12.30 ಹೊರಟು, ಕುಂದಾಪುರಕ್ಕೆ(Kundapura) ಬೆಳಗ್ಗೆ 5.30ಕ್ಕೆ ತಲುಪಲಿದೆ. ನಂತರ ಉಡುಪಿಯಿಂದ ಬೆಳಗ್ಗೆ 6.15ಕ್ಕೆ ಹೊರಟು ಮಂಗಳೂರಿಗೆ ಮರುದಿನ ಬೆಳಗ್ಗೆ 7.30ಕ್ಕೆ ತಲುಪಲಿದೆ.

ಮಂಗಳೂರಿನಿಂದ ಜಮಖಂಡಿಗೆ ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣ ದರ 690 ರು., ಪ್ರಯಾಣಿಕರಿಗೆ ಅವರ್ತಾ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

ಬೆಂಗಳೂರಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭ : ಸರ್ಕಾರದ ಸಹಾಯಧನ ಅವಲಂಬಿಸಿ ಸಾರಿಗೆ ನಿಗಮಗಳನ್ನು ಮುನ್ನಡೆಸುವುದು ಸವಾಲಿನ ಕೆಲಸವಾಗಿದ್ದು, ಸೋರಿಕೆ ತಡೆದು ಸಂಪನ್ಮೂಲಗಳ ಕ್ರೋಢೀಕರಣ ಮಾಡದಿದ್ದಲ್ಲಿ ಉತ್ತಮ ಭವಿಷ್ಯ ಇರಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಎಚ್ಚರಿಸಿದ್ದಾರೆ. ಬೆಂಗಳೂರು ಸ್ಮಾರ್ಟ್ ಸಿಟಿ (Smart City) ಯೋಜನೆಯಲ್ಲಿ ಬಿಎಂಟಿಸಿಯಿಂದ ನೂತನವಾಗಿ ಖರೀದಿಸಿರುವ ಭಾರತ್ ಸ್ಟೇಜ್-6 (ಬಿಎಸ್-6) ಮತ್ತು ವಿದ್ಯುತ್ ಬಸ್‌ಗಳಿಗೆ ಸೋಮವಾರ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಸಾರಿಗೆ ನಿಗಮಗಳನ್ನು ಮುನ್ನಡೆಸಲು ಸರ್ಕಾರದಿಂದ ಸಹಾಯಧನ ಕೇಳುವುದು ಸುಲಭ. ಆದರೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಲಾಭದಾಯಕವಾಗಲು ಮಾರುಕಟ್ಟೆಯನ್ನು ವೃದ್ಧಿಸಬೇಕು ಎಂದು ಹೇಳಿದರು.

ಈ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸಬೇಕು. ಖಾಸಗಿ ಸಾರಿಗೆ ಸಂಸ್ಥೆಗಳು ಲಾಭ ಮಾಡುತ್ತಿದ್ದರೆ, ಸರ್ಕಾರದ ಸಾರಿಗೆ ಸೇವೆ ನಷ್ಟದಲ್ಲಿ ನಡೆಯುತ್ತಿದೆ. ಹಾಗಾಗಿ ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸುವುದರ ಜೊತೆಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸಬೇಕು ಎಂದು ಸಲಹೆ ನೀಡಿದರು. ಐಟಿ ಕಂಪನಿಗಳು ಮತ್ತು ಎಚ್‌ಎಎಲ್‌ನಂತಹ (HAL) ಸಾರ್ವಜನಿಕ ಉದ್ದಿಮೆಗಳಿಗೆ ಬಿಎಂಟಿಸಿ ಸೇವೆ ಒದಗಿಸಬೇಕು. ಇಲ್ಲವಾದಲ್ಲಿ ಹೆಚ್ಚು ದಿನ ಮುನ್ನಡೆಸುವುದು ಸಾಧ್ಯವಾಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದರು.

ಕಾರ್ಮಿಕರು ಮತ್ತು ಗಾರ್ಮೆಂಟ್ಸ್ ಕಾರ್ಮಿಕರಿಗೆ ಉಚಿತ ಪ್ರಯಾಣ!

ಸಾರಿಗೆ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಸಾರಿಗೆ ಇಲಾಖೆಯಿಂದ ಕಟ್ಟಡ ಕಾರ್ಮಿಕರು ಮತ್ತು ಗಾರ್ಮೆಂಟ್ಸ್ ಕಾರ್ಮಿಕರಿಗೆ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಜನ ಕಾರ್ಮಿಕರು ಈ ಸೇವೆ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಬಿಎಂಟಿಸಿ ಅಧ್ಯಕ್ಷ ಎನ್.ಎಸ್.ನಂದೀಶ್ ರೆಡ್ಡಿ, ಉಪಾಧ್ಯಕ್ಷ ಎಂ.ಆರ್. ವೆಂಕಟೇಶ್, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಮತ್ತಿತರರಿದ್ದರು.

ಬಿಎಸ್-6 ಬಸ್‌ಗಳ ವೈಶಿಷ್ಟ್ಯ

ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಬಿಎಸ್-6 ಮಾದರಿಯ ಡೀಸೆಲ್ ವಾಹನಗಳನ್ನು‌ (Diesel Vehicle) ಪರಿಚಯಿಸಲಾಗಿದ್ದು, ಪರಿಸರ ಸ್ನೇಹಿ ವಾಹನಗಳಾಗಿವೆ. ಸರ್ಕಾರದ ಅನುದಾನದಲ್ಲಿ ₹191 ಕೋಟಿ ವೆಚ್ಚದಲ್ಲಿ 565 ಬಸ್ಸುಗಳನ್ನು ಖರೀದಿಸುತ್ತಿದೆ. ಇವು 41+1 ಆಸನಗಳು, ತುರ್ತು ಪ್ಯಾನಿಕ್ ಬಟನ್, ಹಿಂಬದಿ ಏರ್ ಸಸ್ಪೆನ್ಷನ್ ಮತ್ತು ಎಲ್‌ಇಡಿ ಮಾರ್ಗ ಫಲಕಗಳನ್ನು ಹೊಂದಿವೆ.