ಬೆಂಗಳೂರು (ಅ.06):  ಕೊರೋನಾ ಲಾಕ್‌ಡೌನ್‌ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಮಾದರಿ ನಿರ್ಮಿಸಿ ಗಮನ ಸೆಳೆದಿದ್ದ ಕುಂದಾಪುರ ಮೂಲದ ಕಲಾವಿದ ಪ್ರಶಾಂತ್‌ ಆಚಾರ್‌ ಅವರಿಗೆ ಐರಾವತ ಕ್ಲಬ್‌ ಕ್ಲಾಸ್‌ ಬಸ್‌ನ 10 ಆಟಿಕೆ ಮಾದರಿ ತಯಾರಿಸಿಕೊಡಲು ಕೆಎಸ್‌ಆರ್‌ಟಿಸಿ ಕೋರಿದೆ.

ಕಲಾವಿದ ಪ್ರಶಾಂತ್‌ ಆಚಾರ್‌ ಸೋಮವಾರ ಶಾಂತಿನಗರ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಅವರನ್ನು ಭೇಟಿಯಾಗಿ ಲಾಕ್‌ಡೌನ್‌ ಅವಧಿಯಲ್ಲಿ ತಾವು ತಯಾರಿಸಿದ್ದ ಬಸ್‌ಗಳ ಆಟಿಕೆ ಮಾದರಿಗಳನ್ನು ತೋರಿಸಿದರು. ಬಸ್‌ ಮಾದರಿ ನೋಡಿ ಉತ್ತೇಜಿತರಾದ ಕಳಸದ, ಕೆಎಸ್‌ಆರ್‌ಟಿಸಿ ಐರಾವತ ಕ್ಲಬ್‌ ಕ್ಲಾಸ್‌ ಬಸ್‌ನ 10 ಆಟಿಕೆ ಮಾದರಿ ಬಸ್‌ ಮಾಡಿಕೊಂಡುವಂತೆ ಕೋರಿದರು. ಪ್ರತಿ ಬಸ್‌ ಮಾದರಿಗೆ 8 ಸಾವಿರ ರು. ನೀಡುವುದಾಗಿ ಹೇಳಿದರು. ಬಸ್‌ ಮಾದರಿ ತಯಾರಿಸಿಕೊಡಲು ಪ್ರಶಾಂತ್‌ ಸಂತೋಷದಿಂದ ಒಪ್ಪಿಕೊಂಡರು.

ಕೊರೋನಾ ಕಾಟ: ಬಸ್‌ನಲ್ಲಿ ಕೋವಿಡ್‌ ನಿಯಮ ಉಲ್ಲಂಘಿಸಿದ್ರೆ ಸಸ್ಪೆಂಡ್‌..! .

ವಿವಿಐಪಿಗಳಿಗೆ ಬಸ್‌ ಮಾದರಿ:

ನಿಗಮದ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ದೇಶ-ವಿದೇಶಗಳ ಗಣ್ಯ ವ್ಯಕ್ತಿಗಳಿಗೆ ಫಲಕದ ಬದಲಾಗಿ ಈ ಬಸ್‌ ಆಟಿಕೆ ಮಾದರಿ ನೀಡಿ ಗೌರವಿಸಲು ಕೆಎಸ್‌ಆರ್‌ಟಿಸಿ ತೀರ್ಮಾನಿಸಿದೆ. ಕಲಾವಿದ ಪ್ರಶಾಂತ್‌ ಆಚಾರ್‌ ಅವರ ಪ್ರತಿಭೆ ಗುರುತಿಸಿದ್ದ ‘ಕನ್ನಡಪ್ರಭ’ ಪತ್ರಿಕೆ ಸೆ.15ರ ಸಂಚಿಕೆಯಲ್ಲಿ ಕೆಎಸ್‌ಆರ್‌ಟಿಸಿಯ ಆಟಿಕೆ ಬಸ್‌ ತಯಾರಿಕೆ ಕುರಿತು ವಿಶೇಷ ವರದಿ ಪ್ರಕಟಿಸಿತ್ತು.