ಬೆಂಗಳೂರು[ಮಾ.21]:  ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಪ್ರಯಾಣಿಕರು ಇಲ್ಲದ ಪರಿಣಾಮ ಶುಕ್ರವಾರ 1,385 ಬಸ್‌ಗಳ ಸಂಚಾರ ರದ್ದುಗೊಳಿಸಲಾಗಿದೆ.

ಕಳೆದ ಹತ್ತೊಂಬತ್ತು ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿತವಾಗಿದ್ದು, ಒಟ್ಟು 49,216 ಮುಂಗಡ ಟಿಕೆಟ್‌ ಬುಕಿಂಗ್‌ ರದ್ದುಗೊಳಿಸಲಾಗಿದೆ. ಪ್ರತಿದಿನ ಪ್ರಯಾಣಿಕರ ಸಂಖ್ಯೆ ಕುಸಿತ ಹಾಗೂ ಹಲವು ಮಾರ್ಗಗಳಲ್ಲಿ ಬಸ್‌ ಸಂಚಾರ ರದ್ದು ಮಾಡಿದ ಪರಿಣಾಮ ಮಾ.1ರಿಂದ 19ರ ವರೆಗೆ ನಿಗಮಕ್ಕೆ 10.86 ಕೋಟಿ ರು. ಆದಾಯ ನಷ್ಟವಾಗಿದೆ.

ಸಿಬ್ಬಂದಿಗಳಿಂದಲೇ ಮಾಸ್ಕ್‌ ತಯಾರಿಕೆ:

ಮಾರುಕಟ್ಟೆಗಳಲ್ಲಿ ಮಾಸ್ಕ್‌ಗಳ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ನಿಗಮದ ಚಾಮರಾಜನಗರ ವಿಭಾಗದಲ್ಲಿ ಮಹಿಳಾ ತಾಂತ್ರಿಕ ಸಿಬ್ಬಂದಿ ತಾವೇ ಮಾಸ್ಕ್‌ ತಯಾರಿಸಲು ಮುಂದಾಗಿದ್ದಾರೆ. ಕಳೆದ ಎರಡು ದಿನಗಳಲ್ಲಿ ಸುಮಾರು 500 ಮಾಸ್ಕ್‌ ತಯಾರಿಸಿದ್ದು, ಉಚಿತವಾಗಿ ಸಿಬ್ಬಂದಿಗೆ ವಿತರಿಸಲಾಗಿದೆ. ಒಂದು ಮಾಸ್ಕ್‌ಗೆ ಮೂರು ರು. ವೆಚ್ಚವಾಗಲಿದ್ದು, ಸ್ವಚ್ಛಗೊಳಿಸಿ ಮರು ಬಳಕೆ ಮಾಡಬಹುದು. ಈ ಕಾರ್ಯದಿಂದ ಸ್ಫೂರ್ತಿ ಪಡೆದು ಮಂಗಳೂರು, ದಾವಣಗೆರೆ ವಿಭಾಗದಲ್ಲೂ ತಾಂತ್ರಿಕ ಸಿಬ್ಬಂದಿ ಮಾಸ್ಕ್‌ ತಯಾರಿಕೆಗೆ ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರಿಗೂ ಕಡಿಮೆ ದರದಲ್ಲಿ ಮಾಸ್ಕ್‌ ವಿತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

ದಿನಕ್ಕೆ 1000ಕ್ಕೂ ಹೆಚ್ಚು ಮಾಸ್ಕ್ ತಯಾರಿಸ್ತಿದ್ದಾರೆ KSRTC ನೌಕರರು..!

ಇನ್ನು ಶುಕ್ರವಾರ ಮೈಸೂರಿನ ಇಸ್ಫೋಸಿಸ್‌ ಕಂಪನಿಯ 344 ನೌಕರರನ್ನು 16 ಬಸ್‌ಗಳಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಚೆನ್ನೈ, ಸಿಕಂದರಾಬಾದ್‌, ತ್ರಿವೇಂದ್ರಮ್‌, ಕೊಟ್ಟಾಯಂಗೆ ಕರೆದೊಯ್ಯಲಾಗಿದೆ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.