ಕೊಪ್ಪಳ(ಡಿ.05):  ರೈತ ಸಮುದಾಯವನ್ನು ರಕ್ಷಣೆ ಮಾಡಬೇಕಾದ ಹೊಣೆಗಾರಿಕೆಯಲ್ಲಿ ಇರುವ ಕೃಷಿ ಸಚಿವರು, ‘ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು’ ಎನ್ನುವ ಮೂಲಕ ಆ ಇಲಾಖೆಯಲ್ಲಿ ಇರುವುದಕ್ಕೆ ನಾಲಾಯಕ್‌ ಎಂದು ಕೆಆರ್‌ಎಸ್‌ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಕಿಡಿಕಾರಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೂಡಲೇ ಅವರು ತಮ್ಮ ಮಾತನ್ನು ವಾಪಸ್ಸು ಪಡೆಯಬೇಕು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೊದಲು ಇವರಿಂದ ಕೃಷಿ ಖಾತೆ ಬದಲಾಯಿಸಬೇಕು. ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಾ ಬಂದಿರುವ ಇವರಿಗೆ ರೈತರ ಸ್ವಾಭಿಮಾನದ ಬಗ್ಗೆ ಏನು ಗೊತ್ತಿದೆ? ರೈತರು ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ? ಎನ್ನುವುದನ್ನು ಮೊದಲು ತಿಳಿ​ದುಕೊಳ್ಳಲಿ ಎಂದು ಕಿಡಿಕಾರಿದ್ದಾರೆ. 

ಆಕ್ರೋಶಕ್ಕೆ ತುತ್ತಾದ ಕೃಷಿ ಸಚಿವರ ಪೋಸ್ಟ್‌

ಶ್ರೀಮಂತ ಹಿನ್ನೆಲೆಯಿಂದ ಬಂದಿರುವ ಇವರಿಗೆ ಮೊದಲು ರೈತರ ಬಗ್ಗೆ ಮಾತನಾಡುವ ನೈತಿಕ ಹಕ್ಕೇ ಇಲ್ಲ. ಆದ್ದರಿಂದ ರೈತರನ್ನು ಹೇಡಿಗಳು ಎನ್ನುವ ಮೂಲಕ ಅವಮಾನ ಮಾಡಿದ ಕೃಷಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.