ಮೈಸೂರಿನ ಕೃಷ್ಣರಾಜ ಕ್ಷೇತ್ರದಿಂದ ಹಾಲಿ ಶಾಸಕ ಎಸ್‌.ಎ. ರಾಮದಾಸ್‌ ಅವರಿಗೆ ಟಿಕೆಟ್‌ ನಿರಾಕರಿಸಿದ್ದು, ನಗರಾಧ್ಯಕ್ಷ ಟಿ.ಎಸ್‌. ಶ್ರೀವತ್ಸ ಅವರಿಗೆ ಅವಕಾಶ ನೀಡಲಾಗಿದೆ.

 ಅಂಶಿ ಪ್ರಸನ್ನಕುಮಾರ್‌

 ಮೈಸೂರು : ಮೈಸೂರಿನ ಕೃಷ್ಣರಾಜ ಕ್ಷೇತ್ರದಿಂದ ಹಾಲಿ ಶಾಸಕ ಎಸ್‌.ಎ. ರಾಮದಾಸ್‌ ಅವರಿಗೆ ಟಿಕೆಟ್‌ ನಿರಾಕರಿಸಿದ್ದು, ನಗರಾಧ್ಯಕ್ಷ ಟಿ.ಎಸ್‌. ಶ್ರೀವತ್ಸ ಅವರಿಗೆ ಅವಕಾಶ ನೀಡಲಾಗಿದೆ.

ಹಾಲಿ ಶಾಸಕ ಎಸ್‌.ಎ. ರಾಮದಾಸ್‌, ಎಂಡಿಎ ಮಾಜಿ ಅಧ್ಯಕ್ಷ ಎಚ್‌.ವಿ. ರಾಜೀವ್‌, ಬಿಜೆಪಿ ನಗರಾಧ್ಯಕ್ಷ ಟಿ.ಎಸ್‌. ಶ್ರೀವತ್ಸ, ಕೆ.ಆರ್‌. ಕ್ಷೇತ್ರ ಮಾಜಿ ಅಧ್ಯಕ್ಷ ಡಾ.ಎ.ಎಸ್‌. ಚಂದ್ರಶೇಖರ್‌ ಹೆಸರುಗಳು ಪ್ರಸ್ತಾಪವಾಗಿದ್ದವು. ಅಂತಿಮವಾಗಿ ವರಿಷ್ಠರು ರಾಮದಾಸ್‌ ಅವರಿಗೆ ಮತ್ತೊಂದು ಅವಕಾಶ ನೀಡಿಲ್ಲ.

ರಾಮದಾಸ್‌ 1994, 1999, 2008 ಹಾಗೂ 2018- ನಾಲ್ಕು ಬಾರಿ ಗೆದ್ದಿದ್ದರು. 2004 ಹಾಗೂ 2013 ರಲ್ಲಿ ಸೋತಿದ್ದರು. ವಿಧಾನಸಭೆಯ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ಅಧ್ಯಕ್ಷರು, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದರು.

ಈ ಬಾರಿ ಅವರಿಗೆ ಟಿಕೆಟ್‌ ನೀಡುವುದಕ್ಕೆ ಕೆಲ ಬ್ರಾಹ್ಮಣ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಎಂಡಿಎ ಮಾಜಿ ಅಧ್ಯಕ್ಷ ಎಚ್‌.ವಿ. ರಾಜೀವ್‌ ಟಿಕೆಟ್‌ಗೆ ಪ್ರಬಲ ಪೈಪೋಟಿ ನಡೆಸಿದ್ದರು. ನಗರಾಧ್ಯಕ್ಷ ಶ್ರೀವತ್ಸ ಅವರ ಹೆಸರು ಕೂಡ ಇತ್ತು. ಹೀಗಾಗಿ ಮೊದಲ ಪಟ್ಟಿಯಲ್ಲಿ ರಾಮದಾಸ್‌ ಅವರಿಗೆ ಟಿಕೆಟ್‌ ಘೋಷಣೆಯಾಗಲಿಲ್ಲ. ಎರಡನೇ ಪಟ್ಟಿಯಲ್ಲೂ ಆಗಲಿಲ್ಲ.

ಇದರಿಂದ ತೀವ್ರ ನಿರಾಶರಾದ ರಾಮದಾಸ್‌ ಬೆಂಬಲಿಗರು ವಿದ್ಯಾರಣ್ಯಪುರಂನ ಗೃಹ ಕಚೇರಿ ಎದುರು ಪ್ರತಿಭಟಿಸಿ, ಕಾಂಗ್ರೆಸ್‌ ಸೇರಿ, ಪಕ್ಷೇತರರಾಗಿ ಸ್ಪರ್ಧಿಸಿ ಎಂದು ಒತ್ತಡ ಹಾಕಿದ್ದರು. ರಾಮದಾಸ್‌ ಕಣ್ಣೀರು ಹಾಕಿ, ಎಲ್ಲವನ್ನು ಕೇಂದ್ರದ ವರಿಷ್ಠರಿಗೆ ವಿವರಿಸಿರುವೆ. ಅವರ ತೀರ್ಮಾನ ಕಾಯೋಣ ಎಂದು ಸಮಾಧಾನಪಡಿಸಿದ್ದರು. ಆದರೆ ಅವರ ಯಾವುದೇ ಪ್ರಯತ್ನ ಫಲಿಸಿಲ್ಲ.

ರಾಮದಾಸ್‌ ಅವರು ಪ್ರಧಾನಿ ನರೇಂದ್ರ ಮೋದಿಯವರ ಆಪ್ತರು. ಮೋದಿ ಅವರು ಮೈಸೂರಿಗೆ ಬಂದಾಗಲೆಲ್ಲಾ ಅವರನ್ನು ಪ್ರೀತಿಯಿಂದ ಬೆನ್ನಿಗೆ ಗುದ್ದುವುದು, ಕಿವಿ ಹಿಂಡುವುದು ಮಾಡುತ್ತಿದ್ದರು. ಅಲ್ಲದೇ ರಾಮದಾಸ್‌ ಅವರ ಸಹೋದರ ಶ್ರೀಕಾಂತ್‌ ದಾಸ್‌ ಮನೆಯಿಂದ ಹೋಟೆಲ್‌ಗೆ ಊಟ ಸಹ ಪಾರ್ಸೆಲ್‌ ತೆಗೆದುಕೊಂಡು ಹೋಗಿ ನೀಡುತ್ತಿದ್ದರು. ಇಷ್ಟೆಲ್ಲಾ ಇದ್ದರೂ ಟಿಕೆಟ್‌ ತಪ್ಪಿದೆ.

ಟಿಕೆಟ್‌ ತಪ್ಪಲು ಕಾರಣ?

ರಾಮದಾಸ್‌ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ನಾಯಕರ ಮೆಚ್ಚುಗೆ ಪಾತ್ರರಾಗಿದ್ದರು. ಸಂಘಟನಾ ಶಕ್ತಿಯೂ ಇತ್ತು. ಆದರೆ ಇತ್ತೀಚೆಗೆ ಯಾರ ಕೈಗೂ ಸಿಗುತ್ತಿಲ್ಲ ಎಂಬ ದೂರು ವರಿಷ್ಠರ ಅಂಗಳಕ್ಕೆ ತಲುಪಿದ್ದವು. ರಾಮದಾಸ್‌ಗೆ ಮತ್ತೆ ಟಿಕೆಟ್‌ ನೀಡಿದರೆ ರಾಜೀವ್‌, ರಾಜೀವ್‌ಗೆ ನೀಡಿದರೆ ರಾಮದಾಸ್‌ ಬಂಡೇಳುವ ಸಾಧ್ಯತೆ ಇತ್ತು. ಹೀಗಾಗಿ ವರಿಷ್ಠರು ಇಬ್ಬರೂ ಬೇಡ ಎಂದು ನಗರ ಘಟಕದ ಅಧ್ಯಕ್ಷ ಟಿ.ಎಸ್‌. ಶ್ರೀವತ್ಸ ಅವರಿಗೆ ಟಿಕೆಟ್‌ ನೀಡಿದ್ದಾರೆ.

ಕಾಂಗ್ರೆಸ್‌ ಬಾಗಿಲು ಬಂದ್‌

ಬಿಜೆಪಿಯಲ್ಲಿ ಟಿಕೆಟ್‌ ನಿರಾಕರಿಸುವ ಒಬ್ಬರು ಕಾಂಗ್ರೆಸ್‌ ಸೇರಿ ಅಭ್ಯರ್ಥಿ ಆಗುತ್ತಾರೆ ಎಂದು ಹೇಳಲಾಗುತ್ತಿತ್ತು. ಕಾಂಗ್ರೆಸ್‌ ಕೂಡ ಅಳೆದು- ಸುರಿದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ ಅವರಿಗೆ ಟಿಕೆಟ್‌ ಘೋಷಿಸಿತು. ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.

ಹೀಗಾಗಿ ಕಾಂಗ್ರೆಸ್‌ ಬಾಗಿಲು ಬಂದ್‌ ಎಂದೇ ಹೇಳಬಹುದು. ಸೋಮಶೇಖರ್‌ 1999 ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತು, 2004 ರಲ್ಲಿ ಜೆಡಿಎಸ್‌ ಅಲೆ ಇದ್ದಿದ್ದರಿಂದ ಮೊದಲ ಬಾರಿ ಗೆದ್ದಿದ್ದರು. 2008 ರಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದರು. 2013 ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಮೇಲೆ ಆಯ್ಕೆಯಾಗಿದ್ದರು. ಬಿಜೆಪಿ- ಕೆಜೆಪಿ ನಡುವಿನ ಮತ ವಿಭಜನೆ ಇದಕ್ಕೆ ಕಾರಣವಾಗಿತ್ತು. ಇದೀಗ ಅವರಿಗೆ ಐದನೇ ಚುನಾವಣೆ.

ಜೆಡಿಎಸ್‌ನಿಂದ ಕೆ.ವಿ. ಮಲ್ಲೇಶ್‌

ಜೆಡಿಎಸ್‌ನಲ್ಲಿ ನಾಲ್ಕು ತಿಂಗಳು ಮುಂಚಿತವಾಗಿ ನಗರಪಾಲಿಕೆ ಸದಸ್ಯ ಕೆ.ವಿ. ಮಲ್ಲೇಶ್‌ ಅವರಿಗೆ ಟಿಕೆಟ್‌ ಘೋಷಿಸಲಾಗಿತ್ತು. ಹೀಗಾಗಿ ಯಾವುದೇ ಗೊಂದಲ ಇಲ್ಲದೇ ಪಾದಯಾತ್ರೆಯ ಮೂಲಕ ಮನೆ ಮನೆಗೆ ತೆರಳಿ, ಮತ ಕೋರುತ್ತಿದ್ದಾರೆ. ಕಳೆದ ಬಾರಿ ಕೂಡ ಅವರೇ ಅಭ್ಯರ್ಥಿಯಾಗಿದ್ದಾರೆ.