ಕೃಷಿ ಸಮ್ಮಾನ್ ಯೋಜನೆ ಅತಿ ಮಹತ್ವದ್ದು: ಸಂಸದ
ದೇಶದ ರೈತರ ಆದಾಯವನ್ನು ದ್ವಿಗುಣ ಮಾಡುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು 2018ರಲ್ಲಿ ಜಾರಿಗೆ ತಂದ ಕೃಷಿಸಮ್ಮಾನ ಯೋಜನೆಯೂ ಅತ್ಯಂತ ಮಹತ್ವದ ಪಾತ್ರ ವಹಿಸಿದೆ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದ್ದಾರೆ.
ತುಮಕೂರು : ದೇಶದ ರೈತರ ಆದಾಯವನ್ನು ದ್ವಿಗುಣ ಮಾಡುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು 2018ರಲ್ಲಿ ಜಾರಿಗೆ ತಂದ ಕೃಷಿಸಮ್ಮಾನ ಯೋಜನೆಯೂ ಅತ್ಯಂತ ಮಹತ್ವದ ಪಾತ್ರ ವಹಿಸಿದೆ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದ್ದಾರೆ.
ತಾಲೂಕಿನ ಹಿರೇಹಳ್ಳಿ ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಿದ್ದ ಕೃಷಿ ಸಮ್ಮಾನ್ ಯೋಜನೆಯ ಕೃಷಿ ಸನ್ಮಾನ ನಿಧಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ, ಯುವಜನರಿಗೆ ತೆಂಗಿನ ಮರ ಹತ್ತುವ ಯಂತ್ರಗಳನ್ನು ವಿತರಿಸಿ ಮಾತನಾಡುತ್ತಿದ್ದ ಅವರು, ವರ್ಷಕ್ಕೆ ಆರು ಸಾವಿರ ರು.ಗಳನ್ನು ಮೂರು ಕಂತುಗಳಲ್ಲಿ ವಿತರಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಇದಕ್ಕೆ ಪೂರಕವಾಗಿ ಅಂದಿನ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವೂ ವಾರ್ಷಿಕ 4 ಸಾವಿರ ರು.ಗಳ ಸಹಾಯಧನ ನೀಡುವ ಮೂಲಕ ವರ್ಷಕ್ಕೆ 10 ಸಾವಿರ ರು.ಗಳನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡುವ ಮೂಲಕ ಬೀಜ, ರಸಗೊಬ್ಬರ ಹಾಗೂ ಕೃಷಿ ಕಾರ್ಯಗಳಿಗೆ ನೆರವಾಗುವಂತೆ ಮಾಡಿದ್ದಾರೆ. ಈ ವರ್ಷದ ಮೂರನೇ ಕಂತನ್ನು ಇಂದು ಪ್ರಧಾನಿಯವರೇ ಬಿಡುಗಡೆ ಮಾಡುತ್ತಿರುವುದು ಸಂತೋಷದ ವಿಚಾರ ಎಂದರು.
ಪ್ರಧಾನಮಂತ್ರಿಗಳ ಕೃಷಿ ಸನ್ಮಾನ ಯೋಜನೆ ಬಡವರು ಮತ್ತು ಮಧ್ಯಮ ವರ್ಗದ ರೈತರಿಗಾಗಿಯೇ ಮಾಡಿದ ಯೋಜನೆ. ಇದನ್ನು ದೊಡ್ಡ ಹಿಡುವಳಿದಾರರು ಪಡೆಯುವುದು ಅಪರಾಧ. ಸಾವಿರಾರು ಕೋಟಿ ಹಣ ಖರ್ಚು ಮಾಡಿ ಡ್ಯಾಂ ಕಟ್ಟಿ, ನೂರಾರು ಕಿ.ಮೀ.ದೂರದಿಂದ ನಾಲೆ ತಂದು ಕೆರೆಗಳಿಗೆ ನೀರು ತುಂಬಿಸಿದರೆ ರೈತರು ಸರ್ಕಾರ ನೀಡುವ ಪುಕ್ಕಟೆ ಅಕ್ಕಿ ಸೇರಿದಂತೆ ಹಲವಾರು ಸವಲತ್ತುಗಳನ್ನು ಪಡೆದು, ಹೊಲ ಗದ್ದೆಗಳಲ್ಲಿ ಕೆಲಸ ಮಾಡುವುದನ್ನೇ ಮರೆತ್ತಿದ್ದಾರೆ. ಸರ್ಕಾರವೇ ರೈತರನ್ನು ಸೋಮಾರಿಗಳನ್ನಾಗಿ ಮಾಡುತ್ತಿದೆ. ದುಡಿದು ತಿನ್ನುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದು ಸಂಸದ ಜಿ.ಎಸ.ಬಸವರಾಜು ನುಡಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್.ರವಿ ಮಾತನಾಡಿ, ಪಿ.ಎಂ ಕಿಸಾನ್‌ನಲ್ಲಿ ವಾರ್ಷಿಕ ಕೇಂದ್ರದಿಂದ ಆರು ಸಾವಿರ ಮತ್ತು ರಾಜ್ಯದಿಂದ 4 ಸಾವಿರ ಸೇರಿ ಒಟ್ಟು 10 ಸಾವಿರ ರೈತರಿಗೆ ದೊರೆಯಲಿದೆ. ರೈತರು ಕೃಷಿ ಕಾಲದಲ್ಲಿ ಕೃಷಿಗೆ ಪೂರಕವಾದ ಬೀಜ, ರಸಗೊಬ್ಬರ,ಇನ್ನಿತರ ಪರಿಕರಗಳನ್ನು ಕೊಳ್ಳಲು ಅನುಕೂಲ ಮಾಡುತ್ತಿದೆ. ಎಲ್ಲಾ ವರ್ಗದ ರೈತರು ಆರ್ಹರು,ಇಂತಿಷ್ಟೇ ಪ್ರಮಾಣದ ಭೂಮಿ ಇರಬೇಕು ಎಂಬ ನಿಯಮವಿಲ್ಲ. ಆದಾಯ ತೆರಿಗೆ ಪಾವತಿಸುವ ರೈತರು, ಸರ್ಕಾರಿ ನೌಕರರು, ನಿವೃತ್ತ ಸರ್ಕಾರಿ ನೌಕರರು ಹಾಗೂ ಸಂವಿಧಾನಿಕ ಹುದ್ದೆಗಳಲ್ಲಿ ಇರುವವರು ಈ ಯೋಜನೆಯ ಲಾಭ ಪಡೆಯುವಂತಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರೇಹಳ್ಳಿ ಕೃಷಿ ವಿಜ್ಞಾನಕೇಂದ್ರದ ಮುಖ್ಯಸ್ಥ ಡಾ.ಲೋಗಾನಂದನ್ ವಹಿಸಿದ್ದರು.ಹಿರೇಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಭಾಗ್ಯಮ್ಮ, ಉಪಕೃಷಿ ನಿರ್ದೇಶಕ ಟಿ.ಎನ್.ಅಶೋಕ್, ಜಿ.ದೀಪಶ್ರೀ, ಕೃಷಿ ಉಪನಿರ್ದೇಶಕರು ಮಧುಗಿರಿ, ಕೃಷಿ ವಿಜ್ಞಾನಿಗಳಾದ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.