ಬೆಂಗಳೂರು (ಆ.22) : ಕರ್ನಾಟಕ ಲೋಕಸೇವಾ ಆಯೋಗ ಆ.24ರಂದು ಗೆಜೆಟ್‌ ಪ್ರೊಬೇಷನರಿ ಹುದ್ದೆಗಳಿಗೆ ನಡೆಸಲಿರುವ ಪೂರ್ವಭಾವಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಆ.23 ಮತ್ತು ಪರೀಕ್ಷೆಯ ದಿನ ಆ.24ರಂದು ಪ್ರಮುಖ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಿಂದ ಪರೀಕ್ಷೆ ನಡೆಯುವ ಕೇಂದ್ರ ಸ್ಥಾನಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಬಸ್‌ ಕಾರ್ಯಾಚರಿಸುವುದಾಗಿ ಕೆಎಸ್‌ಆರ್‌ಟಿಸಿ ತಿಳಿಸಿದೆ.
 
ರಾಜ್ಯದಲ್ಲಿ ಬೆಂಗಳೂರು, ದಾವಣಗೆರೆ, ಮಂಗಳೂರು, ಮೈಸೂರು, ಶಿವಮೊಗ್ಗ ಈ ಐದು ಜಿಲ್ಲೆಗಳಲ್ಲಿ ಮುಖ್ಯ ಪರೀಕ್ಷಾ ಕೇಂದ್ರಗಳಿದ್ದು, ಬೆಂಗಳೂರು ಕೇಂದ್ರಕ್ಕೆ ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು ಜಿಲ್ಲೆಗಳಿಂದ ಹೆಚ್ಚುವರಿ ಬಸ್‌ ಕಾರ್ಯಾಚರಿಸಲಾಗುವುದು. 

ಓಣಂ ಹಬ್ಬಕ್ಕೆ ಕೆಎಸ್‌ಆರ್‌ಟಿಸಿಯಿಂದ ವಿಶೇಷ ಬಸ್...

ದಾವಣಗೆರೆ ಕೇಂದ್ರಕ್ಕೆ ದಾವಣಗೆರೆ, ಚಿತ್ರದುರ್ಗ, ಮಂಗಳೂರು ಕೇಂದ್ರಕ್ಕೆ ಮಂಗಳೂರು, ಉಡುಪಿ, ಮೈಸೂರು ಕೇಂದ್ರಕ್ಕೆ ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ ಮತ್ತು ಮೈಸೂರು, ಶಿವಮೊಗ್ಗ ಕೇಂದ್ರಕ್ಕೆ ಚಿಕ್ಕಮಗಳೂರು ಮತ್ತು ಶಿವಮೊಗ್ಗದಿಂದ ಹೆಚ್ಚುವರಿ ಬಸ್‌ ಕಾರ್ಯಾಚರಣೆ ಮಾಡಲಿದೆ ಎಂದು ನಿಗಮ ತಿಳಿಸಿದೆ.