ಬೆಳಗಾವಿ(ಅ.28): ಬೆಳಗಾವಿ ಕ್ಷೇತ್ರದ ಲೋಕಸಭಾ ಉಪಚುನಾವಣೆಯಲ್ಲಿ ಸುರೇಶ್‌ ಅಂಗಡಿ ಕುಟುಂಬಕ್ಕೆ ಟಿಕೆಟ್‌ ನೀಡಿದರೆ ತಾನು ಪ್ರಚಾರ ಮಾಡುವುದಾಗಿ ಹೇಳಿಕೆ ನೀಡಿದ್ದ ಮಾಜಿ ಸಂಸದ, ಕಾಂಗ್ರೆಸ್‌ ಮುಖಂಡ ಪ್ರಕಾಶ್‌ ಹುಕ್ಕೇರಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕಾಶ್‌ ಹುಕ್ಕೇರಿ ಸಿರಿಯಸ್‌ ರಾಜಕಾರಣಿ ಅಲ್ಲ. ಅವರು ಇದ್ದರೂ ಒಳ್ಳೆಯದೆ, ಹೋದರೂ ಒಳ್ಳೆಯದೆ. ಅವರು ಈ ರೀತಿ ಪಕ್ಷ ವಿರೋಧಿ ಹೇಳಿಕೆ ನೀಡುವುದು ಹೊಸತೇನಲ್ಲ. ಅವರಿಗೆ ಈಗ ಏಕಾಏಕಿ ಬಿಜೆಪಿ ಮೇಲೆ ಪ್ರೀತಿ ಬಂದಿದೆ ಎಂದರೆ ಏನ್‌ ಹೇಳಬೇಕು. ಅವರು ಬೆಳಗಾವಿಗೆ ಬರುವ ಅವಶ್ಯಕತೆ ಇಲ್ಲ. ಅವರು ಚಿಕ್ಕೋಡಿಗೆ ಮಾತ್ರ ಸೀಮಿತ ಎಂದರು.

ಕಾಂಗ್ರೆಸ್​​ ಬಿಟ್ಟು ಬಿಜೆಪಿ ಸೇರುತ್ತಾ ಹುಕ್ಕೇರಿ ಕುಟುಂಬ? ಇದಕ್ಕೆ ಜಾರಕಿಹೊಳಿ ರಿಯಾಕ್ಷನ್..!

ಕಾಂಗ್ರೆಸ್‌ನಲ್ಲಿದ್ದು ಬೇರೆ ಪಕ್ಷಕ್ಕೆ ಬೆಂಬಲ ಕೊಡುತ್ತೇನೆ ಎನ್ನುವುದು ಅವರ ವ್ಯಕ್ತಿಗತ, ನಿಷ್ಠೆ ಎಷ್ಟಿದೆ ಎಂದು ತೋರಿಸುತ್ತದೆ. ಅವರು ಬಿಜೆಪಿಗೆ ಹೋಗಲು ಮುಕ್ತ ಅವಕಾಶ ಇದೆ. ಪಕ್ಷ ವಿರೋಧಿ ಚಟುವಟಿಕೆ ಮಾಡುವವರ ಮೇಲೆ ಪಕ್ಷದ ವರಿಷ್ಠರು ಗಮನಿಸುತ್ತಿರುತ್ತಾರೆ. ಪಕ್ಷ ನೋಟಿಸ್‌ ನೀಡುತ್ತದೆ ಎಂದು ತಿಳಿಸಿದರು.