ಬೆಳಗಾವಿ(ಜು.06): ಕಾಂಗ್ರೆಸ್‌ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸುವುದೇ ನಮ್ಮ ಮುಖ್ಯ ಅಜೆಂಡಾ ಆಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ. 

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿ ಶನಿವಾರ ಬೆಳಗಾವಿಗೆ ಆಗಮಿಸಿದ ಅವರು ಕಾಂಗ್ರೆಸ್‌ ಕಚೇರಿಗೆ ಭೇಟಿ ನೀಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೆಳ ಮಟ್ಟದಿಂದ ಪಕ್ಷ ಸಂಘಟಿಸಬೇಕಿದೆ. ನಮ್ಮ ಪಕ್ಷದ ತತ್ವ ಸಿದ್ಧಾಂತಗಳನ್ನು ಮತ್ತು ದೇಶದ ಇಂದಿನ ಪರಿಸ್ಥಿತಿಗಳ ಬಗ್ಗೆ ಜನರಿಗೆ ತಿಳಿಯುವಂತಹ ಪ್ರಯತ್ನ ಮಾಡುತ್ತೇವೆ. ಕಾಂಗ್ರೆಸ್‌ ಪಕ್ಷವನ್ನು ಕೇಡರ್‌ ಬೇಸ್ಡ್‌ ಪಕ್ಷವಾಗಿ ಪರಿವರ್ತನೆ ಮಾಡುತ್ತಿದ್ದೇವೆ. ಬಿಜೆಪಿಯನ್ನು ಕಾಪಿ ಮಾಡುತ್ತಿಲ್ಲ. ಪಕ್ಷಕ್ಕೆ ಸದ್ಯಕ್ಕೆ ಅವಶ್ಯಕತೆ ಇರುವುದನ್ನು ಮಾಡುತ್ತಿದ್ದೇವೆ. ಕೇಡರ್‌ ಬೇಸ್‌ ಪಕ್ಷ ಬಿಜೆಪಿ ಒಂದೇ ಅಲ್ಲ ಎಂದರು.

ಬೆಳಗಾವಿ: ಹೋಂ ಕ್ವಾರಂಟೈನ್‌ ಉಲ್ಲಂಘನೆ, 573 ಮಂದಿಯ ವಿರುದ್ಧ ಕೇಸ್‌

ಕಳೆದ ಮೂರು ತಿಂಗಳಿನಿಂದ ಕೆಲಸ ಮಾಡುತ್ತಿದ್ದೇವೆ. ಕೋವಿಡ್‌ ಪರಿಸ್ಥಿತಿ ಸೇರಿ ವಿವಿಧ ಸಂದರ್ಭಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದೇವೆ. ಅಧಿಕೃತವಾಗಿ ಈ ಕಾರ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದೇವೆ. ಪಕ್ಷವನ್ನು ಬೇರು ಮಟ್ಟದಿಂದ ಗಟ್ಟಿಗೊಳಿಸಲು ಪಕ್ಷ ಹಲವಾರು ಯೋಜನೆಗಳನ್ನು ರೂಪಿಸಿದೆ. ಪಕ್ಷದ ಪದಾಧಿಕಾರಿಗಳು ಕ್ರೀಯಾಶೀಲವಾಗಬೇಕು, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರ ಕಾರ್ಯಶೈಲಿ ಬದಲಾಗಬೇಕು. ಕಾಂಗ್ರೆಸ್‌ ಪಕ್ಷವನ್ನು ಕೇಡರ್‌ ಬೇಸ್ಡ್‌ ಪಾರ್ಟಿಯನ್ನಾಗಿ ಮಾಡುವ ಕೆಲಸ ಮುಂದಿನ ತಿಂಗಳಿನಿಂದ ಆರಂಭವಾಗಲಿದೆ. ಜಿಲ್ಲಾ ಮಟ್ಟದಲ್ಲಿ, ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕರ್ತರಿಗೆ ತರಬೇತಿ ನೀಡುತ್ತೇವೆ. ಬಿಜೆಪಿಯವರು ಹಲವಾರು ಬಾರಿ ಸುಳ್ಳು ಹೇಳಿಕೆ ಕೊಡುತ್ತಾರೆ. ಅದಕ್ಕೆ ಕೌಂಟರ್‌ ಮಾಡಲು ಕಾರ್ಯಕರ್ತರಿಗೆ ತರಬೇತಿ ಕೊಡುತ್ತೇವೆ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು ಆಗೊಮ್ಮೆ ಈಗೊಮ್ಮೆ ಬಂದು ಹೋದರೆ ನಡೆಯೋದಿಲ್ಲ. ಅವರು ಫುಲ್‌ ಟೈಮ್‌ ಪಕ್ಷದ ಸಂಘಟನೆಗಾಗಿ ದುಡಿಯಬೇಕು. ಜಿಲ್ಲಾಧ್ಯಕ್ಷರ ಕಾರ್ಯಶೈಲಿ ಬದಲಾಗಬೇಕು ಎಂದು ಹೇಳಿದರು.

ಉತ್ತರ ಕರ್ನಾಟಕ ಸೇರಿ ಇಡೀ ರಾಜ್ಯದ ಜವಾಬ್ದಾರಿ ನಮ್ಮ ಮೇಲಿದೆ. ರಾಜ್ಯಾದ್ಯಂತ ಸಂಚರಿಸಿ ಪಕ್ಷದ ಬಲವರ್ಧನೆಗೆ ಪ್ರಾಮುಖ್ಯತೆ ನೀಡುತ್ತೇವೆ. ಎಲ್ಲ ಪಕ್ಷಗಳಲ್ಲಿ ಗುಂಪುಗಾರಿಕೆ ಇರುವುದು ಸಹಜ. ಆದರೆ ಪಕ್ಷದ ವಿಷಯ ಬಂದಾಗ ಎಲ್ಲರೂ ಒಂದೇ ಎಂದರು.

ಇನ್ನು ಪಕ್ಷ ತೊರೆದವರ ಬಗ್ಗೆ ವರದಿ ನೀಡಲು ಸಮಿತಿಯೊಂದನ್ನು ಈಗಾಗಲೇ ರಚಿಸಲಾಗಿದೆ. ವರದಿ ಬಂದ ಬಳಿಕ ಯಾರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ನಡೆಸುತ್ತೇವೆ. ರಾಜ್ಯದಲ್ಲಿ ಕೋವಿಡ್‌19 ನಿರ್ವಹಣೆಯಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರ ನಡೆದಿದೆ. ಈ ಕುರಿತು ಸಮಗ್ರ ತನಿಖೆಗೆ ನಡೆಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಗ್ರಾಮೀಣ ಸಮೀತಿ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ನಗರ ಜಿಲ್ಲಾಧ್ಯಕ್ಷ ರಾಜು ಸೇಠ್‌, ಪಕ್ಷದ ಚಿಕ್ಕೋಡಿ ಜಿಲ್ಲಾಧ್ಯಕ್ಷ ಲಕ್ಷ್ಮಣ ಚಿಂಗಳೆ ಮೊದಲಾದವರು ಉಪಸ್ಥಿತರಿದ್ದರು.

ಅದ್ಧೂರಿ ಸ್ವಾಗತ

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸಿದ ಸತೀಶ ಜಾರಕಿಹೊಳಿ ಅವರನ್ನು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು, ಅವರ ಅಭಿಮಾನಿಗಳು ಅದ್ಧೂರಿಯಿಂದ ಸ್ವಾಗತಿಸಿದರು. ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಇರುವ ಕಾಂಗ್ರೆಸ್‌ ಕಚೇರಿ ಭವನದ ಎದುರು ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸತೀಶ ಜಾರಕಿಹೊಳಿ ಅವರಿಗೆ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.