ಹುಬ್ಬಳ್ಳಿ(ಮಾ.01): ನೆರೆ ಸಂತ್ರಸ್ತರಿಗೆ ಪರಿಹಾರ ಕೊಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಕೇಂದ್ರದಿಂದ ಬರಬೇಕಾದ ಅನುದಾನ ಬಂದಿಲ್ಲ, ಮುಂದೆ ಬರುವ ಸಾಧ್ಯತೆಯೂ ಇಲ್ಲ. ಕೇಂದ್ರದಿಂದ ರಾಜ್ಯದ ಮೇಲೆ ಹೊಡೆತದ ಮೇಲೆ ಹೊಡೆತ ಬೀಳುತ್ತಿದೆ. ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಭಾನುವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು,  ಕೇಂದ್ರ ಸರ್ಕಾರ ತನ್ನ ವೈಫಲ್ಯವನ್ನ ಮುಚ್ಚಿಕೊಳ್ಳಲು ಸಿಎಎ ಕಾಯ್ದೆಯನ್ನ ಜಾರಿಗೆ ತಂದಿದೆ. ದೇಶ ಹೊತ್ತಿ ಉರಿಯುತ್ತಿದೆ, ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.  ನಾಗರಿಕ ಯುದ್ಧ ಸೃಷ್ಟಿಯಾಗಿದೆ, ಪ್ರಜಾಪ್ರಭುತ್ವ ಆತಂಕದಲ್ಲಿದೆ. ಜಾತಿ, ಧರ್ಮಗಳ ನಡುವೆ ಸಂಘರ್ಷ ನಡೆಯುತ್ತಿದೆ. ಇದಕ್ಕೆಲ್ಲಾ ಬಿಜೆಪಿಯೇ ಕಾರಣ ಎಂದು ಆರೋಪಿಸಿದ್ದಾರೆ. 

ಮಹದಾಯಿಗೆ ಅಧಿಸೂಚನೆ ಆಗಿದ್ದು ತಮ್ಮಿಂದಲೇ ಎಂದು ಬಿಜೆಪಿಯವರು ಬಿಂಬಿಸಿಕೊಳ್ಳುತ್ತಿದ್ದಾರೆ. ಮಹದಾಯಿ ಜಾರಿಯಾಗುತ್ತಿರುವುದು ರೈತರ ಹೋರಾಟದಿಂದ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೀಳುಮಟ್ಟದಲ್ಲಿ ಮಾತಾಡಿದ್ದಾರೆ. ಕೂಡಲೇ ಯತ್ನಾಳ್ ಶಾಸಕತ್ವ ರದ್ದು ಮಾಡಬೇಕು. ಬಿಜೆಪಿಯವರಿಗೆ ಸ್ವಾತಂತ್ರ್ಯ  ಹೋರಾಟಗಾರರ ಬಗ್ಗೆ ಕಳಕಳಿ ಇದ್ದರೆ ದೇಶಭಕ್ತಿ ಪ್ರದರ್ಶಿಸಲಿ. ಯತ್ನಾಳ್‌ರನ್ನು ಪಕ್ಷದಿಂದ ಉಚ್ಛಾಟಿಸಲಿ. ಬಿಜೆಪಿಯವರು ಗಾಂಧೀಜಿಯವರನ್ನು ಅವಮಾನಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದ್ದಾರೆ.