Asianet Suvarna News Asianet Suvarna News

ಅಚ್ಚೇ ದಿನ್‌ ಯಾರಿಗೆ, ಎಲ್ಲಿ ಬಂದಿದೆ ಅಂತ ಬಿಜೆಪಿಗರೇ ಹೇಳಬೇಕು: ಡಿಕೆಶಿ

*  ಬಿಜೆಪಿ ಜನಾಶೀರ್ವಾದ ಯಾತ್ರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಲೇವಡಿ
*  ಬಿಜೆಪಿ ಸರ್ಕಾರ ಬಂದ ಮೇಲೆ ಸಾರ್ವಜನಿಕರ ಬದುಕು ದುಸ್ತರ
*  ಜನರಿಗೆ ಏನು ಕೊಟ್ಟು ಆಶೀರ್ವಾದ ಪಡೆಯುತ್ತಿದ್ದಾರೆ
 

KPCC President DK Shivakumar Slams BJP Government grg
Author
Bengaluru, First Published Aug 18, 2021, 2:36 PM IST

ರಾಯಚೂರು(ಆ.18): ಕೇಂದ್ರ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಜನಾಶೀರ್ವಾದ ಸಮಾರಂಭವನ್ನು ನಡೆಸುತ್ತಿದ್ದು, ಇದಕ್ಕೂ ಪೂರ್ವದಲ್ಲಿ ಸಾರ್ವಜನಿಕರಿಗೆ ಏನನ್ನು ನೀಡಿ ಆಶೀರ್ವಾದ ಪಡೆಯಲು ಮುಂದಾಗಿರುವುದರ ಬಗ್ಗೆ ಬಿಜೆಪಿಗರು ತಿಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಲೇವಡಿ ಮಾಡಿದ್ದಾರೆ. 

ಸ್ಥಳೀಯ ಖಾಸಗಿ ಹೋಟೆಲ್‌ನಲ್ಲಿ ವಿಭಾಗೀಯ ಮಟ್ಟದ ಪ್ರತಿನಿಧಿಗಳ ಸಭೆಯಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿ, ಬಿಜೆಪಿ ಸರ್ಕಾರ ಬಂದ ಮೇಲೆ ಸಾರ್ವಜನಿಕರ ಬದುಕು ದುಸ್ತರಗೊಂಡಿದೆ. ಕೊರೋನಾ ಸಮಯದಲ್ಲಿ ಜನರಿಗೆ ಔಷಧಿ, ಆಸ್ಪತ್ರೆಗಳಿಗೆ ಬೆಡ್‌, ಆ್ಯಂಬುಲೆನ್ಸ್‌ ನೀಡಿದ್ದಕ್ಕೆ ಆಶೀರ್ವಾದ ಕೇಳುತ್ತಾರೆಯೇ? ಬಿಎಸ್‌ವೈರನ್ನು ಯಾಕೆ ತೆಗೆದರು, ಕೇಂದ್ರ ಆರೋಗ್ಯ ಸಚಿವರನ್ನು ಯಾಕೆ ಬದಲಾವಣೆ ಮಾಡಿದರು, ಅಚ್ಚೇದಿನ್‌ ಯಾರಿಗೆ ಎಲ್ಲಿ ಬಂದಿದೆ ಇದನ್ನು ಬಿಜೆಪಿಗರು ಹೇಳಬೇಕು. ಅಸಂಘಟಿತರಿಗೆ ಘೋಷಿಸಿದ ಪ್ಯಾಕೇಜ್‌ ಏನಾಯಿತು ಎಂಬುದನ್ನು ತಿಳಿಸಬೇಕು, ಕೋವಿಡ್‌ನಿಂದ ಮೃತಪಟ್ಟವರ ಮನೆಗಳಿಗೆ ಭೇಟಿ ನೀಡಿರುವುದರ ಬಗ್ಗೆ ಬಿಜೆಪಿಗರೇ ಬಿಡಿಸಿ ಹೇಳಬೇಕು. ಕೇಂದ್ರ ಸಚಿವರಾಗಿದ್ದೇವೆ ಎಂದು ಆಶೀರ್ವಾದ ಯಾತ್ರೆ ನಡೆಸುತ್ತಿದ್ದು ಅದಕ್ಕೆಲ್ಲಾ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.

ಸಿಟಿ ರವಿ ಹುಕ್ಕಾ ಬಾರ್ ಹೇಳಿಕೆ ಹಿಂದಿನ ರಹಸ್ಯ ಬಿಚ್ಚಿಟ್ಟ ಶಿವಕುಮಾರ್!

ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಇಡೀ ವರ್ಷ ಸಂಘಟನೆ ಹಾಗೂ ಹೋರಾಟದ ವರ್ಷವೆಂದು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಡಿಯಲ್ಲಿಯೇ ವಿಭಾಗೀಯ ಮಟ್ಟದ ಸಮಾವೇಶಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ಮೈಸೂರು, ಹುಬ್ಬಳ್ಳಿ, ಧಾರವಾಡ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಮುಗಿಸಿದ್ದು, ಮಂಗಳೂರಿನಲ್ಲಿ ಶೀಘ್ರದಲ್ಲಿಯೇ ನಡೆಸಲಾಗುವುದು. ಸಭೆಗೆ ಪಕ್ಷದ ಪ್ರಮುಖ ಪ್ರತಿನಿಧಿಗಳನ್ನು ಕರೆದು ಪಕ್ಷ ಸಂಘಟನೆ, ಯಾವುದೇ ತೊಂದರೆಗಳಿದ್ದರೆ ಅದನ್ನು ಸರಿಪಡಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಆಚರಿಸುತ್ತಿದ್ದು, ಕೇವಲ ಪಕ್ಷವಷ್ಟೇ ಅಲ್ಲದೇ ಜನರನ್ನು ಒಳಗೂಡಿಸಿಕೊಂಡು ಒಂದೊಂದು ತಿಂಗಳು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಸ್ವಾತಂತ್ರೋತ್ಸವದ ಆಗಸ್ಟ್‌ನಲ್ಲಿ ಹೋರಾಟಗಾರರ ಕುಟುಂಬಗಳಿಗೆ ಭೇಟಿ ನೀಡುವುದು, ಅ.2 ಮಹಾತ್ಮ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಗ್ರಾಪಂ ಹಾಗೂ ಸಹಕಾರ ಕ್ಷೇತ್ರವನ್ನು ಆಯ್ದುಕೊಂಡು ಎಲ್ಲ ಗ್ರಾಪಂಗಳಲ್ಲಿ ಪಕ್ಷದ ಸಮಿತಿಗಳನ್ನು ರಚಿಸಿ ಸಭೆಗಳನ್ನು ನಡೆಸುವುದು, ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಬರುತ್ತಿರುವ ನೆಹರು, ಇಂದಿರಾ ಗಾಂಧಿ ಜನ್ಮದಿನ, ಪಕ್ಷದ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಪ್ರಜಾಪ್ರಭುತ್ವ ವ್ಯವಸ್ಥೆ, ಕೇಂದ್ರ ಸರ್ಕಾರದಿಂದ ಸಂವಿಧಾನಕ್ಕೆ ಬಂದಿರುವ ಬಿಕ್ಕಟ್ಟಿನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಸೇರಿ ವಿದ್ಯಾರ್ಥಿ, ಯುವಜನರು ಹಾಗೂ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ವಿವರಿಸಿದರು.
 

Follow Us:
Download App:
  • android
  • ios