ಬೆಳಗಾವಿ [ನ.27]:  ರಾಜ್ಯದಲ್ಲಿ ಬಿಜೆಪಿ ನೀತಿ ನಿಯಮ ಇಲ್ಲದೆ ಸರ್ಕಾರ ರಚನೆ ಮಾಡಿದೆ. 15 ಕ್ಷೇತ್ರಗಳಲ್ಲಿ ಒಂದೂ ಕ್ಷೇತ್ರದಲ್ಲೀಯೂ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು. 

ಕೋಕಾಕ್ ನಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಜ್ಯದಲ್ಲಿ ಅನರ್ಹ ಶಾಸಕರ ವಿರುದ್ಧ ಸ್ಪಷ್ಟವಾದ ವಾತಾವರಣ ಕಾಣುತ್ತಿದೆ. ಎರಡು ತಿಂಗಳಿನಿಂದ ವಿಧಾನಸೌಧದಲ್ಲಿ ಸೂತಕದ ಛಾಯೆ ಕಂಡು ಬರುತ್ತಿದೆ. ಯಾವ ಮಂತ್ರಿಯೂ ಕೂಡ ಕೆಲಸ ಮಾಡುತ್ತಿಲ್ಲ ಎಂದರು. 

ಚುನಾವಣೆ ಗೆಲ್ಲಲು ಹಣ ಬೇಕಾಗಿದ್ದು, ಇದಕ್ಕಾಗಿ ವರ್ಗಾವಣೆ ದಂಧೆ, ಕಮಿಷನ್ ಪಡೆಯೋದು ಇದೆ ನಡೆದಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪ ಮಾಡಿದರು. 

ಇನ್ನು ಇದೇ ವೇಳೆ ರಮೇಶ್ ಜಾರಕಿಹೊಳಿ ವಿರುದ್ಧವೂ ವಾಗ್ದಾಳಿ ನಡೆಸಿದ ದಿನೇಶ್ ಗುಂಡೂರಾವ್, ಉಪ ಚುನಾವಣೆ ಫಲಿತಾಂಶದ ಬಳಿಕ ರಮೇಶ್ ಬಿಜೆಪಿಯಲ್ಲಿ ಇರ್ತಾರಾ ನೋಡೋಣ,  'ಒಂದ್ ವಾರ ಬಿಜೆಪಿಯಲ್ಲಿ ಇರ್ತಾರಾ ನೋಡೋಣ' ರಮೇಶ್ ಜಾರಕಿಹೊಳಿಯವರೇ ಹೊರಗೆ ಬರ್ತಾರೆ ನೋಡಿ ಎಂದು ಹೇಳಿದರು. 

ರಮೇಶ್ ಜಾರಕಿಹೊಳಿಗೆ ಕಾಂಗ್ರೆಸ್ ಬಾಗಿಲು ಬಂದ್ ಆಗಿದೆ. ಆದರೆ ಅವರಿಗೆ ಬಿಜೆಪಿಯಲ್ಲಿ ಇರಲು ಆಗಲ್ಲ. ಒಂದು ವಾರಕ್ಕೆ ಬಿಜೆಪಿ ಬಿಟ್ಟು ಹೊರಗೆ ಬರುತ್ತಾರೆ.  ಜೆಡಿಎಸ್ ಪಕ್ಷಕ್ಕೆ ಹೋಗಲೂ ಆಗಲ್ಲ. ತಮ್ಮದೇ ಒಂದು‌ ಪಕ್ಷ ಕಟ್ಟಿಕೊಳ್ಳಬೇಕು ಅಷ್ಟೇ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಚಮಚಾಗಿರಿ ಮಾಡಿದವರಿಗೆ ಮಾತ್ರ ಕಾಂಗ್ರೆಸ್ ನಲ್ಲಿ ಸ್ಥಾನಮಾನ ಎಂಬ ರಮೇಶ್ ಹೇಳಿಕೆಗೂ ಪ್ರತಿಕ್ರಿಯಿಸಿ ಇಷ್ಟು ವರ್ಷ ಅವರು ಯಾಕೆ ಇದೇ ಪಕ್ಷದಲ್ಲಿ ಇದ್ದರು. ಹಾಗಾದರೆ ಇವರು ಐದು ವರ್ಷ ಎಂಎಲ್‌ಎ ಆಗಿದ್ದಾಗ ಚಮಚಾಗಿರಿ ಮಾಡಿಕೊಂಡಿದ್ದರಾ ಎಂದು ಪ್ರಶ್ನೆ ಮಾಡಿದರು.  ರಮೇಶ್ ಪಕ್ಷದಲ್ಲಿರುವುದು ಬಿಜೆಪಿಯವರಿಗೆ ಇರಿಸು ಮುರಿಸು ಇದೆ ಎಂದು ಗೋಕಾಕ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು. 

ಡಿಸೆಂಬರ್ 5 ರಂದು ರಾಜ್ಯದಲ್ಲು ಉಪ ಚುನಾವಣೆ ನಡೆಯಲಿದ್ದು, ಡಿಸೆಂಬರ್ 9ಕ್ಕೆ ಫಲಿತಾಂಶ ಪ್ರಕಟವಾಗಲಿದೆ.