ಹುಬ್ಬಳ್ಳಿ(ಜೂ.03):  ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎಂಬ ಘೋಷಣೆಯಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ಪ್ರಸ್ತುತ ಮಿತ್ರೋಂಕೆ ಸಾಥ್‌ ಭಾಜಪಾ ಕಾ ವಿಕಾಸ್‌ ಎಂದು ಪಠಿಸುತ್ತಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್‌. ನೀರಲಕೇರಿ ವ್ಯಂಗ್ಯವಾಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯದಿಂದ ದೇಶದ ಜನತೆ ಅಸಹಾಯಕ ಸ್ಥಿತಿ ತಲುಪಿದ್ದಾರೆ. ಭಾರಿ ಭರವಸೆ ನೀಡಿದ ಸರ್ಕಾರ ಈಗ ಜನತೆಯ ಸಾಮಾನ್ಯ ಬೇಡಿಕೆಯನ್ನೂ ಈಡೇರಿಸಲಾಗದಂತ ಸ್ಥಿತಿಗೆ ತಲುಪಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವ ಭರವಸೆಯನ್ನು ಬಿಜೆಪಿ ನೀಡಿತ್ತು. ಈಗ 45 ವರ್ಷಗಳಲ್ಲಿಯೆ ಅತಿ ಹೆಚ್ಚು ನಿರುದ್ಯೋಗ ಪ್ರಮಾಣ ದೇಶದಲ್ಲಿದೆ. ಕೊರೋನಾ ಲಾಕ್‌ಡೌನ್‌ ಬಳಿಕವಂತೂ ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ. 27.11ಕ್ಕೇರಿದೆ. ಇನ್ನು ಸ್ವಾತಂತ್ರ್ಯದ ಬಳಿಕ ದಾಖಲೆ ಪ್ರಮಾಣದಲ್ಲಿ ಜಿಡಿಪಿ ತೀವ್ರವಾಗಿ ಕುಸಿದಿದ್ದೂ ಇದೇ ಮೊದಲು ಎನ್ನಬಹುದು ಎಂದರು.

ಹುಬ್ಬಳ್ಳಿ-ಧಾರವಾಡ: ಕೊರೋನಾತಂಕದ ಮಧ್ಯೆಯೇ ಬೇಂದ್ರೆ ಬಸ್‌ ಪ್ರಾರಂಭ

2014 ರಿಂದ 2020  ಮಾರ್ಚ್‌ವರೆಗೆ ಅನುತ್ಪಾದಕ ಆಸ್ತಿ ಪ್ರಮಾಣ 9.50 ಲಕ್ಷ ಕೋಟಿಗೇರಿದೆ. ನೀರವ ಮೋದಿ, ಮೆಹುಲ್‌ ಜೋಕ್ಸಿ, ಜತಿನ್‌ ಮೆಹ್ತಾ, ವಿಜಯ ಮಲ್ಯಾ ಸಾಲಗಳನ್ನು ರೈಟ್‌ಅಪ್‌ ಸಾಲಗಳು ಎಂದು ಘೋಷಣೆ ಮಾಡಲಾಗಿದೆ. ಅಧಿಕಾರಕ್ಕೆ ಬರುವ ಮೊದಲು ಡಾಲರ್‌ ಎದುರು ರು. ದರವನ್ನು 40ಕ್ಕೆ ತರುವುದಾಗಿ ಮೋದಿ ಹೇಳಿದ್ದರು. ಆದರೆ ಈಗ ಡಾಲರ್‌ ಎದುರು ರುಪಾಯಿ 75ಗೆ ಕುಸಿತ ಕಂಡಿದೆ. ಅಪಮೌಲ್ಯೀಕರಣದ ಬಳಿಕ ದೇಶದ ಆರ್ಥಿಕತೆ ನೆಲಕಚ್ಚಿದೆ ಎಂದು ದೂರಿದರು.

ಕೇಂದ್ರ ಸರ್ಕಾರ ಕೇವಲ 370ನೇ ಕಲಂ ರದ್ದತಿ, ತ್ರಿವಳಿ ತಲಾಕ್‌ ನಿಷೇಧ, ರಾಮ ಮಂದಿರ ತೀರ್ಪುಗಳನ್ನೆ ತನ್ನ ಸಾಧನೆ ಎಂದು ಕೊಚ್ಚಿಕೊಳ್ಳುತ್ತ ಜನರನ್ನು ಭಾವನಾತ್ಮಕವಾಗಿ ಒಡೆಯುವ ಕೆಲಸ ಮಾಡುತ್ತಿದೆ. ಪ್ರಚೋದನಕಾರಿಯಾಗಿ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ಅದರ ಬೆನ್ನಲ್ಲಿ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದು ದೂರಿದರು. ಇವೆಲ್ಲದರ ವಿರುದ್ಧ ಕಾಂಗ್ರೆಸ್‌ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಿದ್ದು, ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.