ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಲೆಕ್ಕಾಚಾರ : ಕುತೂಹಲ ಮೂಡಿಸಿದ ನಡೆ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪ್ರಸಿದ್ಧ ದೇಗುಲಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಇಲ್ಲಿನ ರಾಜಕೀಯ ಲೆಕ್ಕಾಚಾರವೂ ಕೂಡ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಕೋಲಾರ (ಮಾ.01): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮುಳಬಾಗಿಲು ತಾಲೂಕು ಕುರುಡಮಲೆ ದೇವಸ್ಥಾನಕ್ಕೆ ಇಂದು ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.
ಮುಂಬರುವ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಸಿದ್ಧತೆಗಳನ್ನು ನಡೆಸಿರುವುದರಿಂದ ದೇವ ಮೂಲೆ ಎನಿಸಿಕೊಂಡಿರುವ ಕುರುಡಮಲೆ ಗಣೇಶ ದೇವಸ್ಥಾನದಲ್ಲಿ ಪೂಜೆ ನಡೆಸಲಾಗಿದೆ.
ಕೊತ್ತೂರ್ ಮುಂದಾಳತ್ವ: ಕಳೆದ ವಿಧಾನ ಸಭಾ ಮತ್ತು ಲೋಕ ಸಭಾ ಚುನಾವಣೆಯ ನಂತರ ಜಿಲ್ಲೆಯಲ್ಲಿ ಆದ ರಾಜಕೀಯ ಬದಲಾವಣೆಗಳಿಂದ ಕೊತ್ತೂರು ಮಂಜುನಾಥ್ ಮತ್ತು ಕಾಂಗ್ರೆಸ್ ನಡುವಿನ ಸಂಬಂಧ ಹಳಸಿತ್ತು. ವಿಧಾನ ಸಭಾ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಅವರನ್ನು ಧಿಕ್ಕರಿಸಿ ಬೆಂಗಳೂರಿನಿಂದ ಎಚ್.ನಾಗೇಶ್ ಅವರನ್ನು ಕರೆತಂದು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿಸಿ ಗೆಲ್ಲಿಸಿದ್ದರು. ತದ ನಂತರ ನಡೆದ ಲೋಕ ಸಭಾ ಚುನಾವಣೆಯ ವೇಳೆಯೂ ಬಿಜೆಪಿಯ ಎಸ್.ಮುನಿಸ್ವಾಮಿ ಅವರನ್ನು ಬೆಂಬಲಿಸಿ ಕೆ.ಎಚ್.ಮುನಿಯಪ್ಪ ಹೀನಾಯವಾಗಿ ಸೋಲುವಂತೆ ಮಾಡಿದರು.
ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ದಿಲ್ಲಿ ತಲುಪಿದ ಕೈ ರಣಾಂಗಣ ..
ಕೋಲಾರದಲ್ಲಿ ವರ್ತೂರ್ ಪ್ರಕಾಶ್ ರಾಜಕೀಯವಾಗಿ ಸವಕಲು ನಾಣ್ಯ ಎಂಬುದನ್ನು ಅರ್ಥ ಮಾಡಿಕೊಂಡಿರುವ ಕೆ.ಎಚ್.ಮುನಿಯಪ್ಪ ತಾವು ಪುನಃ ರಾಜಕೀಯವಾಗಿ ಮೇಲೇಳಲು ಊರು ಗೋಲು ಬೇಕು ಎಂದು ಲೆಕ್ಕಾಚಾರ ಹಾಕಿರುವ ಮುನಿಯಪ್ಪ ಈಗ ಹೊಸದೊಂದು ಪ್ರಯೋಗ ನಡೆಸಲು ಮುಂದಾಗಿದ್ದು ಕೊತ್ತೂರು ಮಂಜುನಾಥ್ ಅವರನ್ನು ಕಾಂಗ್ರೆಸ್ ಸೇರಿಸಿಕೊಳ್ಳಲು ಮುಂದಾಗಿದ್ದಾರೆ.
ರಾಜ್ಯ ರಾಜಕೀಯಕ್ಕೆ ಮುನಿಯಪ್ಪ?
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮುಳಬಾಗಿಲು ವಿಧಾನ ಸಭಾ ಕ್ಷೇತ್ರದಿಂದ ಮುನಿಯಪ್ಪ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದು ಇತ್ತ ಕೋಲಾರದಲ್ಲಿ ಕೊತ್ತೂರು ಮಂಜುನಾಥ್ ಅವರಿಗೆ ಅವಕಾಶ ಮಾಡಿಕೊಡುವುದು ಉದ್ದೇಶವಿದೆಯಂತೆ. ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಮುಂದೆ ಮುಖ್ಯಮಂತ್ರಿ ಸ್ಪರ್ಧಿಯಾಗುವುದು ಮುನಿಯಪ್ಪ ಅವರ ಲೆಕ್ಕಾಚಾರ ಎನ್ನಲಾಗಿದೆ. ಮುಳಬಾಗಿಲು ಕ್ಷೇತ್ರ ಸಾಕಷ್ಟುಪ್ರಭಾವ ಹೊಂದಿರುವ ಕೊತ್ತೂರು ಮಂಜುನಾಥ್ ಜತೆ ರಾಜೀ ಮಾಡಿಕೊಳ್ಳುತ್ತಿದ್ದಾರೆಂಬ ಮಾತುಗಳೂ ಕೇಳಿ ಬರುತ್ತಿವೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲು ಜಿಲ್ಲಾ ಕಾಂಗ್ರೆಸ್ ಅರ್ಜಿ ಸಲ್ಲಿಸಿರುವ ಕೊತ್ತೂರು ಮಂಜುನಾಥ್ ಮುಳಬಾಗಿಲಿಗೆ ಆಗಮಿಸುತ್ತಿರುವ ಡಿ.ಕೆ.ಶಿವಕುಮಾರ್ ಅವರಿಗೂ ಅರ್ಜಿ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಡಿಕೆಶಿ ರಾಜಕೀಯ ಲೆಕ್ಕಾಚಾರ: ಕೊತ್ತೂರು ಮಂಜುನಾಥ್ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವುದರಿಂದ ಮುಳಬಾಗಿಲು ಮತ್ತು ಕೋಲಾರ ವಿಧಾನ ಸಭೆ ಎರಡೂ ಕ್ಷೇತ್ರಗಳನ್ನು ಗೆದ್ದು ಕೊಳ್ಳಬಹುದೆಂಬ ಲೆಕ್ಕಾಚಾರವೂ ಡಿ.ಕೆ.ಶಿವಕುಮಾರ್‌ಗೆ ಇದೆ ಎನ್ನಲಾಗುತ್ತಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರ ನಾಳಿನ ಕುರುಡಮಲೆ ಭೇಟಿ ಜಿಲ್ಲಾ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.