ಹಸಿವು ಮುಕ್ತ ಭಾರತ ಕಲ್ಪನೆ ಸಾಕಾರಗೊಳಿಸಿದ್ದ ಕ್ಯಾಂಟೀನ್‌| ಕಾಂಗ್ರೆಸ್‌ ಕಾರ್ಮಿಕ ವಿಭಾಗದಿಂದ ಧರಣಿ| ಅನುದಾನ ನೀಡದೇ ಕ್ಯಾಂಟೀನ್‌ ರದ್ದುಗೊಳಿಸಲು ಸರ್ಕಾರ ಯತ್ನ| ಹಣ ನೀಡದ್ದರೆ ಉಗ್ರ ಹೋರಾಟ| 

ಬೆಂಗಳೂರು(ಮಾ.17): ಹಿಂದಿನ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್‌ ರದ್ದು ಪಡಿಸಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಕೆಪಿಸಿಸಿ ಕಾರ್ಮಿಕ ಘಟಕ ಪ್ರತಿಭಟನೆ ನಡೆಸಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿಗೌಡ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಂಡಿಸಿದ 2021-22ರ ಬಜೆಟ್‌ನಲ್ಲಿ ಇಂದಿರಾ ಕ್ಯಾಂಟೀನ್‌ಗೆ ಮೀಸಲಿಡಬೇಕಾದ ಅನುದಾನ ನೀಡಿಲ್ಲ. ಈ ಮೂಲಕ ಹಸಿವು ಮುಕ್ತ ಭಾರತ ಮತ್ತು ಆಹಾರ ಭದ್ರತೆಯ ಕಲ್ಪನೆಯನ್ನು ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿದರು.

ಇಡ್ಲಿ ಇದೆ, ಚಟ್ನಿ ಇಲ್ಲ, ಅನ್ನಕ್ಕೆ ತಿಳಿಸಾರೇ ಗತಿ; ಏನ್ರಿ ಇದು ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ?

ಬಡವರಿಗೆ ಕನಿಷ್ಠ ಬೆಲೆಯಲ್ಲಿ ಉತ್ಕೃಷ್ಟಗುಣಮಟ್ಟದ ಉಪಾಹಾರ ಮತ್ತು ಊಟ ನೀಡುವುದಕ್ಕಾಗಿ ಇಂದಿರಾ ಕ್ಯಾಂಟೀನ್‌ ಯೋಜನೆಯನ್ನು ಹಿಂದಿನ ಸರ್ಕಾರ ಜಾರಿಗೆ ತಂದಿತ್ತು. ಇದು ಜನಪ್ರಿಯ ಕಾರ್ಯಕ್ರಮವಾಗುವುದು ಮಾತ್ರವಲ್ಲ, ಹಸಿವು ಮುಕ್ತ ಭಾರತ ಕಲ್ಪನೆಯನ್ನು ಸಾಕಾರಗೊಳಿಸಿತ್ತು. ಆದರೆ, ಬಿಜೆಪಿ ಸರ್ಕಾರವು ಇಂದಿರಾ ಕ್ಯಾಂಟೀನ್‌ ಯೋಜನೆಗೆ ತಿಲಾಂಜಲಿ ಇಡುವ ಷಡ್ಯಂತ್ರ ನಡೆಸಿದ್ದು, ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಇಂದಿರಾ ಕ್ಯಾಂಟೀನ್‌ ಯೋಜನೆಗೆ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಆಡಳಿತ ಪಕ್ಷದ ಮಾಜಿ ನಾಯಕ ಎಂ.ಶಿವರಾಜು ಮಾತನಾಡಿ, ಇಂದಿರಾ ಕ್ಯಾಂಟೀನ್‌ ಕಾಂಗ್ರೆಸ್‌ ಪಕ್ಷದ ಪ್ರಮುಖ ಕೊಡುಗೆಯಾಗಿದ್ದು, ಇದನ್ನು ರಾಜಕೀಯ ಕಾರಣಕ್ಕಾಗಿ ಮುಚ್ಚಿಹಾಕಲು ಪ್ರಯತ್ನಿಸುತ್ತಿರುವ ಪ್ರಯತ್ನ ನಡೆಸುತ್ತಿರುವುದು ಖಂಡನೀಯ. ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಅನುದಾನ ಬಿಡುಗಡೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಆರ್‌.ದಿನೇಶ್‌, ಬೆಂಗಳೂರು ನಗರ ಘಟಕ ಅಧ್ಯಕ್ಷ ಕೃಷ್ಣಪ್ಪ, ಚಂದ್ರಶೇಖರಯ್ಯ, ಪ್ರಧಾನ ಕಾರ್ಯದರ್ಶಿಗಳಾದ ಬಾಲರಾಜು, ಶ್ರೀಕಾಂತ್‌ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.