ಇಟಲಿ ದಂಪತಿ ಮಡಿಲು ಸೇರಿದ ಕೊಪ್ಪಳದ 3 ಅನಾಥ ಹೆಣ್ಣು ಮಕ್ಕಳು!
ಕೊಪ್ಪಳ ಜಿಲ್ಲೆಯ ಮೂವರು ಅನಾಥ ಮಕ್ಕಳು ಇಟಲಿ ದಂಪತಿಗಳಿಂದ ದತ್ತು ಪಡೆಯಲಾಗಿದೆ. 2019 ರಲ್ಲಿ ಕೊಪ್ಪಳದಲ್ಲಿ ಪತ್ತೆಯಾದ ಈ ಮಕ್ಕಳು ಈಗ ಇಟಲಿಗೆ ತೆರಳಲಿದ್ದಾರೆ. ಮುಂದೆ ಇಟಲಿ ಪ್ರಜೆಗಳಾಗಿ ವಾಸ ಮಾಡಲಿದ್ದಾರೆ.
ವರದಿ: ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್
ಕೊಪ್ಪಳ (ನ.15): ಇತ್ತೀಚೆಗಷ್ಟೆ ಕೊಪ್ಪಳ ಜಿಲ್ಲೆಯೊಂದರ ಅನಾಥ ಮಗುವೊಂದು ಅಮೇರಿಕಾದ ದಂಪತಿಗಳ ಮಡಿಲು ಸೇರಿತ್ತು. ಇದೀಗ ಮತ್ತೆ ಮೂವರು ಅನಾಥ ಮಕ್ಕಳು ಇಟಲಿ ದಂಪತಿಗಳ ಮಡಿಲು ಸೇರಿ, ಇದೀಗ ಭಾರತವನ್ನು ಬಿಟ್ಟು ದತ್ತು ಪಡೆದ ದಂಪತಿಯನ್ನೇ ಅಪ್ಪ-ಅಮ್ಮನಾಗಿ ಸ್ವೀಕರಿಸಿ ಇಟಲಿಗೆ ಹೋಗಲಿದ್ದಾರೆ. ಮುಂದೆ ಇಟಲಿ ಪ್ರಜೆಗಳಾಗಿ ಅಲ್ಲಿ ವಾಸ ಮಾಡಲಿದ್ದಾರೆ.
ಕೊಪ್ಪಳ ಜಿಲ್ಲೆ ಇತ್ತೀಚಿನ ದಿನಗಳಲ್ಲಿ ಅನಾಥ ಮಕ್ಕಳ ವಿಚಾರದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಕೊಪ್ಪಳ ಜಿಲ್ಲೆಯಿಂದ ಅನೇಕ ಅನಾಥ ಮಕ್ಕಳು ವಿದೇಶಗಳಿಗೆ ಹೋಗುತ್ತಿದ್ದಾರೆ. ಅದೇ ರೀತಿ ಇದೀಗ ಕೊಪ್ಪಳ ಜಿಲ್ಲೆಯ ಮೂವರು ಅನಾಥ ಮಕ್ಕಳು ಇಟಲಿಗೆ ಹೋಗುತ್ತಿದ್ದಾರೆ. ಸದ್ಯ ಇಟಲಿಗೆ ಹೋಗುತ್ತಿರುವ ಮಕ್ಕಳು 2019ರಲ್ಲಿ ಶಿಶುವಾಗಿದ್ದಾಗ ಕೊಪ್ಪಳ ನಗರದ ಅಂಬೇಡ್ಕರ್ ಸರ್ಕಲ್‌ನಲ್ಲಿ ದೊರಕಿದ್ದವು.ಅದಾದ ಬಳಿಕ ಈ ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ರಕ್ಷಣೆ ಮಾಡಿ ದತ್ತು ಸ್ವಾಧಾರ ಕೇಂದ್ರಕ್ಕೆ ಬಿಟ್ಟಿದ್ದರು. ಇದೀಗ 5 ವರ್ಷಗಳ ಬಳಿಕ ಈ ಮೂವರು ಹೆಣ್ಣು ಮಕ್ಕಳು ಇಟಲಿಗೆ ತೆರಳುತ್ತಿದ್ದಾರೆ.
ಅರ್ಜಿ ಸಲ್ಲಿಸಿ ದತ್ತು ಪಡೆದ ಇಟಲಿ ದಂಪತಿ: ಇಟಲಿಯಲ್ಲಿ ನೆಲೆಸಿರುವ ಮಕ್ಕಳಿಲ್ಲದ ದಂಪತಿ ಮಕ್ಕಳನ್ನು ದತ್ತು ಪಡೆಯುವುದಾಗಿ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಮೂವರು ಮಕ್ಕಳನ್ನು ಸಾಕಲು ಮುಂದೆ ಬಂದು, ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರು. ದತ್ತು ಪ್ರಕ್ರಿಯೆಯು ಕಾನೂನಿನಡಿ ಮೂವರು ಮಕ್ಕಳನ್ನು ಇಟಲಿಯ ದಂಪತಿಗೆ ನಿಯಮಾವಳಿಯಂತೆ ಜಿಲ್ಲಾಡಳಿತದಿಂದ ಹಸ್ತಾಂತರಿಸಲಾಗಿದೆ. ಈ ಮೂಲಕ ಕೊಪ್ಪಳ ನಗರದಲ್ಲಿ ಅನಾಥವಾಗಿ ಸಿಕ್ಕ ಮಕ್ಕಳಿಗೆ ಇದೀಗ ಸಾಕಲು ಅಪ್ಪ ಅಮ್ಮನೂ ಸಿಕ್ಕಿದ್ದು, ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದು ಉತ್ತಮ ಜೀವನ ಕಟ್ಟಿಕೊಳ್ಳಲಿ ಎನ್ನವುದು ಜಿಲ್ಲೆಯ ಜನರ ಹಾರೈಕೆ ಆಗಿದೆ.
ಇದೇ ಮೊದಲ ಪ್ರಕರಣವೇನಲ್ಲ: ಕೊಪ್ಪಳ ಜಿಲ್ಲೆಯಿಂದ ವಿದೇಶಿಗರಿಗೆ ದತ್ತು ಹೋದ ಮಕ್ಕಳು ಇವರೇ ಮೊದಲೇನಲ್ಲ. ಈ ಮೊದಲು 2019ರಲ್ಲಿ ಸ್ಪೇನ್‌ಗೆ ನಾಲ್ಕು ಅನಾಥ ಮಕ್ಕಳು, 2020 ಸ್ಬೀಡನ್, 2021 ರಿಂದ 2024 ರವರೆಗೆ ಅಮೇರಿಕಾ ಸೇರಿ ವಿವಿಧ ದೇಶಗಳಿಗೆ ಕೊಪ್ಪಳ ಜಿಲ್ಲೆಯಿಂದ ಒಟ್ಟು 19 ಮಕ್ಕಳು ದತ್ತು ಸ್ವೀಕಾರವಾಗಿ ಹೋಗಿದ್ದಾರೆ. ಜೊತೆಗೆ 38 ಮಕ್ಕಳು ದೇಶದ ತಮಿಳುನಾಡು, ಕೇರಳ, ದಿಲ್ಲಿ, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳ ಹಲವು ದಂಪತಿಗಳಿಗೆ ದತ್ತು ನೀಡಲಾಗಿದೆ.
ಬೇಡವಾದ ಮಕ್ಕಳನ್ನು ನಮಗೆ ಒಪ್ಪಿಸಿ: ಸಾಮಾನ್ಯವಾಗಿ ವಿದೇಶಕ್ಕೆ ಹೋಗುತ್ತಿರುವ ಅನಾಥ ಮಕ್ಕಳು ಬೀದಿಯಲ್ಲಿ, ಮುಳ್ಳಿನ ಪೊದೆಗಳಲ್ಲಿ , ಚರಂಡಿಯಲ್ಲಿ ಸಿಕ್ಕ ಮಕ್ಕಳಾಗಿವೆ. ಹೀಗಾಗಿ, ಕೊಪ್ಪಳ ಜಿಲ್ಲಾಡಳಿತವು ನಿಮಗೆ ಮಕ್ಕಳು ಬೇಡವಾದರೆ, ಎಲ್ಲೆಂದರಲ್ಲಿ ಎಸೆದು ಅವರ ಪ್ರಾಣಕ್ಕೆ ಕುತ್ತು ತರುವ ಬದಲು ಮಕ್ಕಳನ್ನು ನಮಗೆ ಒಪ್ಪಿಸಿ. ಇಲ್ಲವೇ ಮಮತೆಯ ತೊಟ್ಟಿಲಿನಲ್ಲಿ ಹಾಕಿ ಎಂದು ಜಿಲ್ಲಾ ಆಡಳಿತ ಮನವಿ ಮಾಡಿದೆ. ಒಟ್ಟಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಹೆತ್ತವರಿಗೆ ಬೇಡವಾದ ಮಕ್ಕಳು ಇದೀಗ ವಿದೇಶ ದಂಪತಿಗಳ ಮಡಿಲು ಸೇರುತ್ತಿರುವುದು ನಿಜಕ್ಕೂ ಅಪರೂಪದ ಕೆಲಸ ಎಂದು ಹೇಳಬಹುದು.