Asianet Suvarna News Asianet Suvarna News

ಕೊಪ್ಪಳ ವಿಮಾನ ನಿಲ್ದಾಣ ನಿರ್ಮಾಣ ಸ್ಥಳ ಶೀಘ್ರ ಅಂತಿಮ: ಸಂಗಣ್ಣ ಕರಡಿ

ಉಜ್ವಲ ಭಾರತ, ಉಜ್ವಲ ಭವಿಷ್ಯ ಕಾರ್ಯಕ್ರಮದಲ್ಲಿ ಸಂಸದ ಸಂಗಣ್ಣ ಕರಡಿ ಭರವಸೆ

Koppal Airport Construction Site Will Be Finalized Soon Says MP Sanganna Karadi grg
Author
Bengaluru, First Published Jul 31, 2022, 11:06 AM IST

ಕಾರಟಗಿ(ಜು.31):  ಕೊಪ್ಪಳದ ಬಳಿ ಉಡಾನ್‌ ಯೋಜನೆಯಡಿಯಲ್ಲಿ ವಿಮಾನ ನಿಲ್ದಾಣಕ್ಕೆ ಎರಡು ಕಡೆ ಸ್ಥಳ ಪರಿಶೀಲಿಸಲಾಗಿದ್ದು, ಶೀಘ್ರದಲ್ಲಿಯೇ ಒಂದು ಸ್ಥಳವನ್ನು ಅಧಿಕಾರಿಗಳ ತಂಡ ಅಂತಿಮಗೊಳಿಸಲಿದೆ ಎಂದು ಸಂಸದ ಕರಡಿ ಸಂಗಣ್ಣ ಭರವಸೆ ನೀಡಿದರು. ತಾಲೂಕಿನ ಮರಲಾನಹಳ್ಳಿ ಗ್ರಾಮದಲ್ಲಿ ಜೆಸ್ಕಾಂ ಶನಿವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಉಜ್ವಲ ಭಾರತ-ಉಜ್ವಲ ಭವಿಷ್ಯ, ‘ವಿದ್ಯುತ್‌ ಅಟ್‌ 2047’ ಮತ್ತು ‘ವಿದ್ಯುತ್‌ ಮಹೋತ್ಸವ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕೇಂದ್ರದಲ್ಲಿನ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ದೂರದೃಷ್ಟಿಯಿಂದಾಗಿ ಜಿಲ್ಲೆಯಲ್ಲಿಯೂ ವಿಮಾನ ನಿಲ್ದಾಣವಾಗಲಿದೆ. ಆ ಮೂಲಕ ಈ ಜಿಲ್ಲೆಯ ಉಕ್ಕು ಉದ್ಯಮ ಜತೆಗೆ ಭತ್ತ, ಅಕ್ಕಿ ಮತ್ತು ತೋಟಗಾರಿಕೆ ಹಾಗೂ ಕುಕುಟೋದ್ಯಮಕ್ಕೂ ಸಹಕಾರವಾಗಲಿದೆ ಎಂದರು.

ದೇಶದಲ್ಲಿ ಇಂಧನ ಮತ್ತು ವಿದ್ಯುತ್‌ ಸಚಿವಾಲಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿವೆ. 2014ರಲ್ಲಿ 2 ಲಕ್ಷ ಮೆಗಾವ್ಯಾಟ್‌ ಉತ್ಪಾದನೆಯಿದ್ದರೆ, ಪ್ರಸ್ತುತ 4 ಲಕ್ಷ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಬೆಳಕು, ವಿದ್ಯುತ್‌ ಸೇವಾ, ಸೌಭಾಗ್ಯ ಯೋಜನೆಗಳು, ಎಸ್ಸಿ ಹಾಗೂ ಎಸ್ಟಿ ಜನತೆಗೆ 75 ಯುನಿಟ್‌ವರೆಗೆ ಉಚಿತ ವಿದ್ಯುತ್‌ ಪೂರೈಸಲಾಗುತ್ತದೆ. ಸಹಾಯಧನದೊಂದಿಗೆ ಸೋಲಾರ್‌ ಅಳವಡಿಕೆಗೂ ಸರ್ಕಾರ ಪ್ರೋತ್ಸಾಹಿಸುತ್ತಿದೆ ಎಂದರು.

Koppala; ಗಂಗಾವತಿಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಕೂಗು

ಪ್ರಧಾನಿ ಮೋದಿಯವರು ಬಡವರಿಗಾಗಿ ಆಯುಷ್ಮಾನ್‌ ಭಾರತ ಯೋಜನೆಯಡಿ 5 ಲಕ್ಷದವರೆಗೆ ಉಚಿತ ಆರೋಗ್ಯ ಚಿಕಿತ್ಸೆಗೆ ಅವಕಾಶ ಕಲ್ಪಿಸಿದ್ದಾರೆ. ಜನೌಷಧಿ ಕೇಂದ್ರಗಳಿಂದ ರಿಯಾಯಿತಿ ದರದಲ್ಲಿ ಔಷಧಗಳನ್ನು ವಿತರಿಸಲಾಗುತ್ತಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕೇಂದ್ರ ಸರ್ಕಾರ ನೇರವಾಗಿ ಅರ್ಹ ಫಲಾನುಭವಿಗಳಿಗೆ ಯೋಜನೆಗಳು ತಲುಪುವ ರೀತಿಯಲ್ಲಿ ರೂಪಿಸಿರುವುದು ವಿಶೇಷ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಜಿಲ್ಲೆಗೆ ಸಾಕಷ್ಟುಅನುದಾನ ಮಂಜೂರಾಗಿದೆ. ಪಟ್ಟಣಕ್ಕೆ ರೈಲು ಸಂಚಾರ ಆರಂಭಗೊಂಡಿದೆ. ಅಂಜನಾದ್ರಿ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸಲಾಗುತ್ತಿದೆ ಎಂದರು.

ಶಾಸಕ ಬಸವರಾಜ ದಢೇಸ್ಗೂರು ಮಾತನಾಡಿ, ಕಳೆದ ನಾಲ್ಕು ವರ್ಷಗಳಲ್ಲಿ ಕ್ಷೇತ್ರದಲ್ಲಿ ವಿದ್ಯುತ್‌ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ತುಂಗಭದ್ರಾ ನದಿ ಪಾತ್ರದ ರೈತರ ಪಂಪ್‌ಸೆಟ್‌ಗಳಿಗೆ 7 ಗಂಟೆ ವಿದ್ಯುತ್‌ ಬದಲಾಗಿ ನಿರಂತರ 10 ಗಂಟೆಗಳ ಕಾಲ ಪೂರೈಸುವ ಕ್ರಮ ಕೈಗೊಳ್ಳಲಾಗಿದೆ. ಕ್ಷೇತ್ರದಲ್ಲಿ ಹಣವಾಳ, ಮುಷ್ಟೂರು ಭಾಗಕ್ಕೆ ಮತ್ತೆರಡು ವಿದ್ಯುತ್‌ ವಿತರಣಾ ಕೇಂದ್ರ ಮಂಜೂರು ಮಾಡಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜೆಸ್ಕಾ ಅಧಿಕಾರಿಗಳ ಬದಲು ಮತ್ತು ಶಿಷ್ಟಾಚಾರದ ಪಾಲನೆ ಸಂಪೂರ್ಣ ವಿಫಲವಾಗಿ ಶಾಸಕರ ಹಿಂಬಾಲಕರೆ ವೇದಿಕೆಯಲ್ಲಿ ರಾರಾಜಿಸಿದರು.

ಕೊಪ್ಪಳ ವಿಮಾನ ನಿಲ್ದಾಣ ಭೂಸ್ವಾಧೀನಕ್ಕೆ ರೈತರ ವಿರೋಧ

ಪುರಸಭೆ ಸದಸ್ಯ ಎಚ್‌. ಈಶಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಶೇಖರ ಮುಸಾಲಿ, ಗಂಗಾವತಿ ಎಪಿಎಂಸಿ ಮಾಜಿಅಧ್ಯಕ್ಷ ಚಂದ್ರುಗೌಡ ಯರಡೋಣಾ, ರುದ್ರಗೌಡ ನಂದಿಹಳ್ಳಿ, ವಿಶೇಷ ಎಪಿಎಂಸಿ ಮಾಜಿ ಸದಸ್ಯ ನಾಗರಾಜ ಅರಳಿ, ಪ್ರಮುಖರಾದ ಚನ್ನಬಸಪ್ಪ ಸುಂಕದ್‌, ಅಮರೇಶ ಕುಳಗಿ, ಗುರುಸಿದ್ದಪ್ಪ ಯರಕಲ್‌, ಸತ್ಯನಾರಾಯಣ ದೇಶಪಾಂಡೆ, ನಾಗರಾಜ ಬಿಲ್ಗಾರ್‌ ಸೇರಿದಂತೆ ಇತರರು ಇದ್ದರು.

ಸ್ವಚ್ಛ ಭಾರತ ಯೋಜನೆ ಕುರಿತು ಕಾಂಗ್ರೆಸ್‌ ನಿರಂತರವಾಗಿ ಅಪಪ್ರಚಾರದಲ್ಲಿ ಮುಳುಗಿದೆ. ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ. ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ದೇಶದ ಪ್ರತಿ ಕುಟುಂಬ ವೈಯಕ್ತಿಕ ಶೌಚಗೃಹ ಹೊಂದಿದೆ. ಇದರಿಂದ ಮಹಿಳೆಯರು ಬಯಲು ಶೌಚಕ್ಕೆ ತೆರಳದೆ ಗೌರವಯುತ ಜೀವನ ಸಾಗಿಸುತ್ತಿದ್ದಾರೆ. ಇದನ್ನು ಸಹಿಸದ ಕಾಂಗ್ರೆಸ್‌ ಸಾಕಷ್ಟು ಅರ್ಥಹೀನ ಟೀಕೆ ಮಾಡುತ್ತಿದೆ ಅಂತ ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.  
 

Follow Us:
Download App:
  • android
  • ios