73 ವರ್ಷದ ಧರ್ಮರಾಜ ಅವರು ಕಳೆದ 53 ವರ್ಷಗಳಿಂದ ಸೈಕಲ್‌ನಲ್ಲೇ ಬಟ್ಟೆ ವ್ಯಾಪಾರ ಮಾಡುತ್ತಿದ್ದಾರೆ. ಪ್ರತಿನಿತ್ಯ 20-30 ಕಿ.ಮೀ ಸೈಕಲ್ ತುಳಿಯುವ ಇವರು, ಯಾವುದೇ ಕಾಯಿಲೆಗಳಿಲ್ಲದೆ ಸಂಪೂರ್ಣ ಆರೋಗ್ಯವಾಗಿದ್ದಾರೆ. ಇವರ ಈ ಕಾಯಕವು ಸಮಾಜಕ್ಕೆ ದೊಡ್ಡ ಮಾದರಿಯಾಗಿದೆ.
ಎಸ್. ನಾರಾಯಣ್
ಮುನಿರಾಬಾದ್: ಇಲ್ಲಿಯ 73 ವರ್ಷದ ವಯೋವೃದ್ಧ ಧರ್ಮರಾಜ ಎಂಬವರು ಕಳೆದ 53 ವರ್ಷಗಳಿಂದ ಸೈಕಲ್‌ನಲ್ಲೇ ಬಟ್ಟೆ ವ್ಯಾಪಾರ ಮಾಡುತ್ತಿದ್ದಾರೆ. ಪ್ರತಿನಿತ್ಯ 20ರಿಂದ 30 ಕಿಲೋಮೀಟರ್ ವರೆಗೆ ಸೈಕಲ್ ಮೇಲೆ ಓಡಾಡುತ್ತಾರೆ.
ಧರ್ಮರಾಜ್ ಅವರು ಪ್ರತಿನಿತ್ಯ ಹೊಸಪೇಟೆಗೆ, ಕಮಲಾಪುರ, ಹುಲಿಗಿ ಗ್ರಾಮಕ್ಕೆ ಸೈಕಲ್ ಚಲಾಯಿಸಿಕೊಂಡು ಹೋಗಿ ಅಲ್ಲಿಯ ಪ್ರತಿಯೊಂದು ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ, ಬಟ್ಟೆ ವ್ಯಾಪಾರ ಮಾಡುತ್ತಾರೆ. ವಾರದಲ್ಲಿ ಎರಡು ದಿನ ಹೊಸಪೇಟೆ ಕಡೆ ತೆರಳಿದರೆ, ಇನ್ನೆರಡು ದಿನ ಹುಲಿಗಿ ಕಡೆಗೆ ಮತ್ತು ಎರಡು ದಿನ ಕಮಲಾಪುರ್ ಕಡೆ ಸೈಕಲ್‌ನಲ್ಲಿ ತೆರಳಿ ಬಟ್ಟೆ ಮಾರುತ್ತಾರೆ.
ಮೊಬೈಲ್ ಬಟ್ಟೆ ಅಂಗಡಿ
ಧರ್ಮರಾಜ ಅವರದ್ದು ಮೊಬೈಲ್ ಬಟ್ಟೆ ಅಂಗಡಿ. ಅವರ ಹತ್ತಿರ ಎಲ್ಲ ತರದ ಬಟ್ಟೆಗಳು, ಮಕ್ಕಳ, ಪುರುಷರ ಹಾಗೂ ಮಹಿಳೆಯರ ಉಡುಪುಗಳು ದೊರೆಯುತ್ತವೆ. ಧರ್ಮರಾಜ ಅವರು ಹಳ್ಳಿಯ ರಸ್ತೆಯಲ್ಲಿ ಕೂಗುತ್ತ ಸಾಗಿದರೆ ಸಾಕು, ಜನರು ಮನೆಯಿಂದ ಹೊರಗೆ ಬಂದು, ಬಟ್ಟೆ ಖರೀದಿಸುತ್ತಾರೆ. ಅಷ್ಟರ ಮಟ್ಟಿಗೆ ಜನರ ವಿಶ್ವಾಸ, ಪ್ರೀತಿ ಗಳಿಸಿದ್ದಾರೆ.
ಕನ್ನಡಪ್ರಭ ಪ್ರತಿನಿಧಿ ಧರ್ಮರಾಜ ಅವರನ್ನು ಮಾತನಾಡಿಸಿದಾಗ, ನಾನು 20ನೇ ವರ್ಷ ಯುವಕನಿರುವಾಗಲೇ ಸೈಕಲ್‌ನ್ನು ಚಲಾಯಿಸಿಕೊಂಡು ಹೋಗಿ ಬಟ್ಟೆ ವ್ಯಾಪಾರ ಮಾಡಲು ಪ್ರಾರಂಭಿಸಿದ್ದು. ನನಗೆ 73 ವರ್ಷಗಳಾಗಿದ್ದು, ನಾನು 53 ವರ್ಷಗಳಿಂದ ಸೈಕಲ್ ತುಳಿಯುತ್ತಿದ್ದೇನೆ ಎಂದು ಹೇಳಿದರು. ಬೇಸಿಗೆಯ ಉರಿಬಿಸಿಲು, ಮಳೆಗಾಲ ಹಾಗೂ ಚಳಿಗಾಲ ಯಾವುದನ್ನೂ ಲೆಕ್ಕಿಸದೆ 53 ವರ್ಷಗಳಲ್ಲಿ 2 ಲಕ್ಷ ಕಿಲೋಮೀಟರ್‌ಗಿಂತ ಅಧಿಕ ಸೈಕಲ್ ತುಳಿದಿದ್ದೇನೆ ಎಂದು ಹೇಳಿದರು.
73ನೇ ವಯಸ್ಸಿನಲ್ಲೂ ಆರೋಗ್ಯವಾಗಿರೂ ಧರ್ಮರಾಜ್
ಸೈಕಲ್ ತುಳಿಯುವುದರಿಂದ ನಿಮ್ಮ ಆರೋಗ್ಯದ ಮೇಲೆ ಏನಾದರೂ ದುಷ್ಪರಿಣಾಮ ಆಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಧರ್ಮರಾಜ್ ಅವರು, ಸೈಕಲ್ ತುಳಿಯುವುದರಿಂದ ತನಗೆ ಎರಡು ಲಾಭವಾಗಿದೆ. 73ನೇ ವಯಸ್ಸಿನಲ್ಲೂ ನಾನು ಆರೋಗ್ಯವಾಗಿದ್ದೇನೆ, ನನಗೆ ಬಿಪಿ ಅಥವಾ ಸಕ್ಕರೆ ಕಾಯಿಲೆ ಇಲ್ಲ. ನನಗೆ ಬಟ್ಟೆ ವ್ಯಾಪಾರಕ್ಕೂ ಇದು ತುಂಬಾ ಸಹಕಾರಿಯಾಗಿದೆ, ಇದರಿಂದ ಸಾಗಾಟ ವೆಚ್ಚ ಬರುವುದಿಲ್ಲ ಎಂದು ಹೇಳಿದರು. ನನ್ನ ಸೈಕಲ್ ಬಟ್ಟೆ ವ್ಯಾಪಾರವು ನನ್ನ ಕುಟುಂಬದ ಹೊಟ್ಟೆ ತುಂಬಿಸುವ ಕಾಮಧೇನುವಾಗಿದೆ ಎಂದು ಹೇಳಿದರು.
ಹಿರಿಯ ನಾಗರಿಕರಾದ ಧರ್ಮರಾಜ್ ಸಮಾಜಕ್ಕೆ ಮಾದರಿಯಾಗಿದ್ದಾರೆ. ಸಮಾಜದ ವತಿಯಿಂದ ಅವರನ್ನು ಸನ್ಮಾನಿಸುತ್ತೇವೆ ಎಂದು ನಿವೃತ್ತ ಸೇನಾನಿ ಸಂಜೀವ್ ತೋಟಗಂಟಿ ಹೇಳಿದರು.
ಮನಸ್ಸು ಸದೃಢವಿದ್ದರೆ ದೇಹವು ಸದೃಢವಿರುತ್ತದೆ ಎಂಬುದನ್ನು ಧರ್ಮರಾಜ್ ಇಡೀ ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಶಿಕ್ಷಕ ಮಾರ್ತಾಂಡ ರಾವ್ ದೇಸಾಯಿ ಹೇಳಿದರು.


