ಉಡುಪಿ(ಮೇ 23): ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೂ ಮಹಾಮಾರಿ ಕೊರೋನಾದ ಭೀತಿ ತಟ್ಟಿದೆ. ಕೊಲ್ಲೂರು ದೇವಸ್ಥಾನ ಬೈಂದೂರು ತಾಲೂಕಿನಲ್ಲಿದ್ದು, ಈ ತಾಲೂಕಿನಲ್ಲಿ ಜಿಲ್ಲೆಯ ಅತೀ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.

ಅಲ್ಲದೆ ದೇವಸ್ಥಾನದ ಸುತ್ತಮುತ್ತಲಿನ ಕಾಲೇಜು, ಹಾಸ್ಟೆಲ್‌, ಲಾಡ್ಜ್‌ಗಳಲ್ಲಿ ಹೊರ ರಾಜ್ಯ-ದೇಶಗಳಿಂದ ಬಂದ ಸುಮಾರು 1,000ಕ್ಕೂ ಅಧಿಕ ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ. ಈ ಕ್ವಾರಂಟೈನ್‌ ಕೇಂದ್ರಗಳಲ್ಲಿಯೇ ಕೊರೋನಾ ಸೋಂಕಿತರು ನಿತ್ಯ ಪತ್ತೆಯಾಗುತ್ತಿದ್ದಾರೆ.

 

ಕೊಲ್ಲೂರು ದೇವಾಲಯವನ್ನು ಲಾಕ್‌ಡೌನ್‌ ನಂತರ ಮುಚ್ಚಲಾಗಿದ್ದರೂ ಸ್ಥಳೀಯ ಕೆಲವು ಭಕ್ತರು ದೇವಾಲಯಕ್ಕೆ ಬಂದು ಹೋಗುತ್ತಿದ್ದಾರೆ. ಇದೆಲ್ಲ ಕಾರಣದಿಂದ ಕೊಲ್ಲೂರು ದೇವಾಲಯಕ್ಕೆ ಕೊರೋನಾ ಭೀತಿ ತಟ್ಟಿದ್ದು, ಶುಕ್ರವಾರ ದೇವಾಲಯಕ್ಕೆ ಹೋಗುವ ರಸ್ತೆಗೆ ರಾಸಾಯನಿಕ ಸಿಂಪಡಣೆ ಮಾಡಲಾಯಿತು. ದೇವಾಲಯದ ಹೊರ ಆವರಣ ಗೋಡೆಗಳಿಗೆ, ಕಿಟಕಿ, ರಥಬೀದಿಗಳಲ್ಲಿಯೂ ಸ್ಯಾನಿಟೈಸೇಶನ್‌ ದ್ರಾವಣ ಸಿಂಪಡಣೆ ಮಾಡಿ ಶುದ್ಧೀಕರಿಸಲಾಯಿತು.