ತುಮಕೂರು(ಆ.15): ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ವರುಣನ ಅಬ್ಬರಕ್ಕೆ ಮನೆ, ಮಠ ಕಳೆದುಕೊಂಡು ಬೀದಿಗೆ ಬಿದ್ದಿರುವ ನೆರೆ ಸಂತ್ರಸ್ತರಿಗಾಗಿ ಮಿಡಿದ ಮಧುಗಿರಿಯ ಜನರು ಶಾಸಕ ಎಂ.ವಿ.ವೀರಭದ್ರಯ್ಯ ಹಾಗೂ ಮೂವರು ಸ್ವಾಮೀಜಿಗಳ ನೇತೃತ್ವದಲ್ಲಿ 28 ಸಾವಿರ ಹಣ, ನೂರಕ್ಕೂ ಹೆಚ್ಚು ಕ್ವಿಂಟಲ್‌ ಅಕ್ಕಿ, ಲಾರಿಯಷ್ಟು ಬಟ್ಟೆಹಾಗೂ ಇತರೆ ನಿತ್ಯ ಬಳಕೆಯ ವಸ್ತುಗಳನ್ನುಬುಧವಾರ ದೇಣಿಗೆ ನೀಡಿ ಮಾನವೀಯತೆ ಮೆರೆದರು.

ಬೆಳಗ್ಗೆ 11ಕ್ಕೆ ಪಟ್ಟಣದ ಮಲ್ಲೇಶ್ವರಸ್ವಾಮಿ ದೇಗುಲದ ಮುಂದೆ ಆರಂಭವಾದ ಪಾದಯಾತ್ರೆಯಲ್ಲಿ ಸಾರ್ವಜನಿಕರು, ವರ್ತಕರು, ಬೀದಿಬದಿ ವ್ಯಾಪಾರಿಗಳು, ಆಟೋ ಚಾಲಕರು, ವಿದ್ಯಾರ್ಥಿಗಳು ವಿವಿಧ ಬಗೆಯ ಸೇವೆಯನ್ನು ದಾನದ ರೂಪದಲ್ಲಿ ಮಾಡಿದರು.

ಮಳೆಯನ್ನೂ ಲೆಕ್ಕಿಸದೆ ದೇಣಿಗೆ ಸಂಗ್ರಹ:

ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಎಲೆರಾಂಪುರದ ಹನುಮಂತನಾಥ ಸ್ವಾಮೀಜಿ, ತಗ್ಗಿಹಳ್ಳಿಯ ರಮಾನಂದ ಚೈತನ್ಯ ಸ್ವಾಮೀಜಿ ಜೊತೆಗೆ ಮಳೆಯಲ್ಲೇ ಹೆಜ್ಜೆ ಹಾಕಿದ ಕ್ಷೇತ್ರದ ಶಾಸಕ ಎಂ.ವಿ.ವೀರಭದ್ರಯ್ಯ ಪಟ್ಟಣದ ಬೀದಿಗಳಲ್ಲಿ ಸುತ್ತಾಡಿ ಕ್ಷೇತ್ರದ ಜನರಲ್ಲಿ ನೆರೆಯಲ್ಲಿ ನೊಂದವರಿಗಾಗಿ ದೇಣಿಗೆ ಸಂಗ್ರಹಿಸಿದರು.

ಈ ತಂಡದ ಜೊತೆಯಲ್ಲಿ ಹಿಂದೆ ಸಾಗಿದ ಭಾರಿ ಗಾತ್ರದ ವಾಹನದಲ್ಲಿ ದಾನಿಗಳು ಕೊಟ್ಟವಸ್ತುಗಳನ್ನು ಸಾಗಿಸಿ ಒಂದು ಗೋದಾಮಿನಲ್ಲಿ ಶೇಖರಣೆ ಮಾಡಲಾಯಿತು. ಸ್ವಾಮೀಜಿಗಳು ಸಹ ಮಳೆಯನ್ನು ಲೆಕ್ಕಿಸದೆ ಜೊತೆಗಿದ್ದ ವಿದ್ಯಾರ್ಥಿಗಳಿಗೆ ಹಾಗೂ ಜೆಡಿಎಸ್‌ ಕಾರ್ಯಕರ್ತರಿಗೆ ಮತ್ತು ಇತರೆ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಉತ್ಸಾಹ ತುಂಬಿದರು.

ದಾನ ನೀಡಿದ ಇಲಾಖೆಗಳು :

ಶಿಕ್ಷಣ ಇಲಾಖೆ, ಅಯ್ಯನಪಾಳ್ಯ, ಜಿನುಪನಹಳ್ಳಿ ಗ್ರಾಮಸ್ಥರು, ಆರೋಗ್ಯ ಇಲಾಖೆ, ತಾಲೂಕು ಪಂಚಾಯ್ತಿ, ಕೃಷಿ ಇಲಾಖೆ, ಗುತ್ತಿಗೆದಾರರ ಸಂಘ, ಸೇಟುಗಳ ಸಂಘ ಹಾಗೂ ಇತರೆ ಸಂಘ ಸಂಸ್ಥೆಗಳು ನೆರೆ ಸಂತ್ರಸ್ತರಿಗೆ ಅಕ್ಕಿ, ಬೇಳೆ, ಬಿಸ್ಕತ್‌, ಸೋಪು, ಪೇಸ್ಟ್‌, ಬ್ರಶ್‌, ನ್ಯಾಪ್ಕಿನ್‌, ಬಟ್ಟೆ, ಹೊದಿಕೆ, ತಟ್ಟೆ, ಟಾರ್ಪಲ್‌, ಹಣ್ಣು, ತರಕಾರಿ ಹಾಗೂ ಇನ್ನಿತರೆ ಅಗತ್ಯ ಸಾಮಗ್ರಿಗಳನ್ನು ನೀಡಿ ಹೃದಯ ವೈಶಾಲ್ಯತೆ ಮೆರೆದರು.

ತಾಪಂ ಇಒ ದೊಡ್ಡಸಿದ್ದಯ್ಯ, ಬಿಇಒ ರಂಗಪ್ಪ, ಟಿಎಚ್‌ಇ, ಧರಣೇಶ್‌ಗೌಡ, ಶಿಕ್ಷಕರ ಮುಖಂಡ ಫಣೀಂದ್ರನಾಥ್‌, ಪತಾಂಜಲಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಂಜುನಾಥ್‌ ಗುಪ್ತ, ಧಾರ್ಮಿಕ ಮುಖಂಡ ಎಂ.ಜಿ.ಶ್ರೀನಿವಾಸಮೂರ್ತಿ, ಕಾಲೇಜು ಪ್ರಾಂಶುಪಾಲ ಮುನೀಂದ್ರ ಕುಮಾರ್‌, ಅಶ್ವತ್ಥನಾರಾಯಣ್‌, ಸಮಾಜ ಸೇವಕರಾದ ಗಾಯತ್ರಿ ನಾರಾಯಣ್‌, ಲಲಿತ ಮಲ್ಲಪ್ಪ, ಸಹನಾ ನಾಗೇಶ್‌, ಕೀರ್ತಿ, ಮುಖಂಡರಾದ ತುಂಗೋಟಿ ರಾಮಣ್ಣ, ಪುರಸಭೆ ಸದಸ್ಯರಾದ ಜಗನ್ನಾಥ್‌, ಚಂದ್ರಶೇಖರ್‌ ಬಾಬು, ನರಸಿಂಹಮೂರ್ತಿ, ಗುತ್ತಿಗೆದಾರರ ಸಂಘದ ಸದಸ್ಯರು, ಜೆಡಿಎಸ್‌ ಕಾರ್ಯಕರ್ತರು ಹಾಗೂ ಮುಖಂಡರು ಭಾಗವಹಿಸಿದ್ದರು.