ಕೋಲಾರ : ಪ್ರಧಾನಿ ಮೋದಿ ಪ್ರಚಾರಕ್ಕೆ ಭಾರಿ ಸಿದ್ಧತೆ
ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸಿದ್ದು, ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಏ.29 ಅಥವಾ 30ರಂದು ಕೋಲಾರ ಜಿಲ್ಲೆಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಲಾರದಿಂದ 10 ಕಿಮೀ ದೂರದಲ್ಲಿರುವ ಕೆಂದಟ್ಟಿಗೇಟ್ ಬಳಿ ಸಕಲ ಸಿದ್ಧತೆಗಳನ್ನು ಭರದಿಂದ ನಡೆಸಲಾಗುತ್ತಿದೆ
ಕೋಲಾರ : ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸಿದ್ದು, ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಏ.29 ಅಥವಾ 30ರಂದು ಕೋಲಾರ ಜಿಲ್ಲೆಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಲಾರದಿಂದ 10 ಕಿಮೀ ದೂರದಲ್ಲಿರುವ ಕೆಂದಟ್ಟಿಗೇಟ್ ಬಳಿ ಸಕಲ ಸಿದ್ಧತೆಗಳನ್ನು ಭರದಿಂದ ನಡೆಸಲಾಗುತ್ತಿದೆ.
ಸುಮಾರು 100 ಎಕರೆಗೂ ಹೆಚ್ಚಿನ ಜಾಗವನ್ನು ಜೆಸಿಬಿ, ಹಿಟಾಚಿಗಳ ಮೂಲಕ ಸ್ವಚ್ಛಗೊಳಿಸಲಾಗುತ್ತಿದ್ದು, ಸಂಸದ ಎಸ್.ಮುನಿಸ್ವಾಮಿ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ಏ.29 ಅಥವಾ 30ರಂದು ಕೋಲಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಬರಲಿದ್ದು, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಸುಮಾರು 2.5 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.
ವಾಹನ ನಿಲುಗಡೆಗೆ 100 ಎಕರೆ
ಸುಮಾರು 150 ರಿಂದ 200 ಎಕರೆ ಪ್ರದೇಶದಲ್ಲಿ ಸಮಾವೇಶ ಮಾಡಲಾಗುತ್ತಿದ್ದು, 100 ಎಕರೆ ಪಾರ್ಕಿಂಗ್‌ಗಾಗಿ ಮೀಸಲಿಡಲಾಗುವುದು. ಈಗಾಗಲೇ ಎಲ್ಲ ಜಮೀನುಗಳ ಮಾಲೀಕರೊಂದಿಗೆ ಮಾತನಾಡಿದ್ದು, ಖುಷಿಯಿಂದ ಒಪ್ಪಿಕೊಂಡು ಸಹಕಾರ ನೀಡಿದ್ದಾರೆ. ಈಗಾಗಲೇ ಎಲ್ಲ ಕಡೆ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ರಾಜ್ಯ, ರಾಷ್ಟ್ರ ನಾಯಕರು ಆಗಮಿಸುತ್ತಿದ್ದಾರೆ. ಈಗಾಗಲೇ ಎಸ್‌ಪಿಜೆ ಅವರು ಆಗಮಿಸಿ ಹೆಲಿಪ್ಯಾಡ್‌ಗಳಿಗೆ ಜಾಗ ವೀಕ್ಷಣೆ ನಡೆಸಿದ್ದಾರೆ. 5 ಎಕರೆಯಲ್ಲಿ 3 ಹೆಲಿಪ್ಯಾಡ್‌ಗೆ ವ್ಯವಸ್ಥೆ ಮಾಡಲಾಗುವುದು. ಸುಮಾರು 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್‌್ತಗೆ ಬಳಸಿಕೊಳ್ಳಲಾಗುವುದು. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಚರ್ಚಿಸಿದ್ದಾರೆ ಎಂದರು.
ಹೈ ಕಮಾಂಡ್ ಸೂಚನೆಯಂತೆ ಎರಡು ಜಿಲ್ಲೆಯವರು ಸೇರಿ ಕೋಲಾರದ ಕೆಂದಟಿಯಲ್ಲಿ ಸಮಾವೇಶ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಸುಮಾರು 20 ಕಡೆಗಳಿಗೆ ಪ್ರಧಾನಿ ತೆರಳಲಿದ್ದಾರೆ. ಪ್ರತಿದಿನ 3-4 ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಕನಿಷ್ಠ 8 ಸ್ಥಾನಗಳನ್ನು ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಪ್ರಧಾನಿಯನ್ನು ನೋಡಲು ಎಲ್ಲರೂ ಕಾತುರದಿಂದ ಪಕ್ಷಾತೀತವಾಗಿ ಕಾಯುತ್ತಿದ್ದು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಭಿಮಾನಿಗಳು ಆಗಮಿಸಲಿದ್ದಾರೆ ಎಂದರು.
ಎಲ್ಲ ಕ್ಷೇತ್ರದಲ್ಲೂ ಗೆಲುವು ಖಚಿತ
ಕೋಲಾರ ನಗರದಲ್ಲಿ ಕಾರ್ಯಕ್ರಮ ಮಾಡಬೇಕಿತ್ತು, ಇಷ್ಟುಪ್ರಮಾಣದ ಜಾಗವಿಲ್ಲದ ಕಾರಣ ಇಲ್ಲಿ ಮಾಡುತ್ತಿದ್ದೇವೆ. ಈ ಜಾಗದ ವಾಸ್ತು ಉತ್ತಮವಾಗಿದ್ದು, ನಮಗೆ ಹೇಳಿ ಮಾಡಿಸಿದಂತಿದೆ. ಇಡೀ ದೇಶ ಅಲ್ಲದೆ ವಿಶ್ವದಲ್ಲೇ ಅವರ ಶಕ್ತಿ ಏನೆಂಬುದು ಎಲ್ಲರಿಗೂ ಗೊತ್ತಿದೆ. ಅಮೆರಿಕದಲ್ಲಿ 50-60 ಸಾವಿರ ಜನರು ಸೇರುತ್ತಾರೆ ಎಂದರೆ ಕರ್ನಾಟಕದ ದೇವ ಮೂಲೆ ಕೋಲಾರ ಜಿಲ್ಲೆಯಲ್ಲಿ ಲಕ್ಷಾಂತರ ಮಂದಿ ಸ್ವಯಂಪ್ರೇರಿತರಾಗಿ ಬರಲಿದ್ದು, ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಶಕ್ತಿ ಹೆಚ್ಚಾಗಿ ಬಹುಮತದೊಂದಿಗೆ ಗೆಲುವು ಸಾಧಿಸುತ್ತೇವೆ ಎಂದರು.
ನಮಗೆ ರಾಹುಲ್ ಗಾಂಧಿ, ಪ್ರಿಯಾಂಕಗಾಂಧಿ, ಸೋನಿಯಾಗಾಂಧಿ ಲೆಕ್ಕಕ್ಕೇ ಇಲ್ಲ. ಕೋಲಾರದಲ್ಲಿ 15 ವರ್ಷದಿಂದ ಕಾಂಗ್ರೆಸ್ ಪಕ್ಷವೇ ಇಲ್ಲ. ಅಭ್ಯರ್ಥಿಗಳು ಯಾರೇ ಬಂದು ಹಣ ಇನ್ನೊಂದು ಮತ್ತೊಂದು ಮಾಡಬಹುದಷ್ಟೇ. ಇದು ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ರಾಹುಲ್ ಬಂದರೂ ಚಿತ್ರಣ ಬದಲಾಗಿಲ್ಲ
ಕೋಲಾರ ಕ್ಷೇತ್ರದಲ್ಲಿ 2 ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ವರ್ತೂರು ಪ್ರಕಾಶ್ ಗೆದ್ದಿದ್ದರು. ಕಳೆದ ಬಾರಿ ಕೆ.ಶ್ರೀನಿವಾಸಗೌಡರು ಗೆಲುವು ಸಾಧಿಸಿದ್ದರು. ರಾಹುಲ್ ಬಂದು ಹೋಗಿರುವುದರಿಂದ ಚಿತ್ರಣ ಬದಲಾಗಿಲ್ಲ, ಕೋಲಾರ ಅಲ್ಲದೆ ಈ ಬಾರಿ ಮಾಲೂರು ನಂಜೇಗೌಡರು, ಬಂಗಾರಪೇಟೆ ಎಸ್.ಎನ್.ನಾರಾಯಣಸ್ವಾಮಿ, ಕೆಜಿಎಫ್ ರೂಪಕಲಾ ಶಶಿಧರ್ ಸೋಲುವುದರಲ್ಲಿ ಯಾವುದೇ ಸಂಶಯವಿಲ್ಲ. ರಾಹುಲ್ ಗಾಂಧಿ ನರೇಂದ್ರ ಮೋದಿಗೂ ಅಜಗಜಾಂತರ ವ್ಯತ್ಯಾಸವಿದ್ದು, ಇರುವೆ ಆನೆಗೂ ಇರುವ ವ್ಯತ್ಯಾಸ ಗೊತ್ತಿಲ್ಲವೇ ಎಂದು ಲೇವಡಿ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಪ್ರವೀಣ್‌ಗೌಡ, ಮುಖಂಡರಾದ ಕೆ.ಚಂದ್ರಾರೆಡ್ಡಿ, ಕಪಾಲಿ, ಬೆಗ್ಲಿ ಸಿರಾಜ್, ವೆಂಕಟೇಶ್ ಇದ್ದರು.