ಕೋಲಾರ [ಡಿ.26]:  ಮನುಷ್ಯತ್ವ ಮೀರಿ ಯಾರು ವರ್ತನೆ ಮಾಡಬಾರದು. ರಾಜಕಾರಣ ಇಂದು ಇರುತ್ತದೆ, ನಾಳೆ ಹೋಗುತ್ತದೆ. ಒಂದಲ್ಲ ಒಂದು ದಿನ ಎಲ್ಲರೂ ಸಾಯುತ್ತಾರೆ. ಆದರೆ, ನಾವು ನಡೆದು ಬಂದ ದಾರಿ ಹಾಗೂ ಮೌಲ್ಯಗಳನ್ನು ಜನರು ನೆನೆಯುತ್ತಾರೆ. ಮನುಷ್ಯನಿಗೆ ಇತಿ-ಮಿತಿ ಇರಬೇಕು. ಕುಡಿದವರ ರೀತಿ ಮಾತನಾಡಬಾರದು ಎಂದು ಶಾಸಕ ಶ್ರೀನಿವಾಸಗೌಡ, ಮಾಜಿ ಸಚಿವ ವರ್ತೂರ್‌ ಪ್ರಕಾಶ್‌ ವಿರುದ್ಧ ಪರೋಕ್ಷವಾಗಿ ತೀವ್ರ ವಾಗ್ದಾಳಿ ನಡೆಸಿದರು.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ತೂರ್‌ ಪ್ರಕಾಶ್‌ ಅವರು ಮಾಡಿದ ಟೀಕೆಗೆ ತಿರುಗೇಟು ನೀಡಿದರು. ಯಾರ ವಿರುದ್ಧವೇ ಆಗಲಿ ಗೌರವಯುತವಾಗಿ ಮಾಡನಾಡಬೇಕು. ಆತ ಬದುಕಿದ್ದಾಗಲೇ ಉಗಿಸಿಕೊಳ್ಳುತ್ತಿದ್ದು, ಆತನ ಹೆಸರು ಹೇಳೋಕೆ ಅಸಹ್ಯವಾಗುತ್ತಿದೆ. ಕುಡಿದು ರಾಜಕಾರಣ ಮಾಡುವ ಅಂತಹವರ ಬಗ್ಗೆ ನಾನು ಮಾತನಾಡುವುದಿಲ್ಲ. ಈಗಾಗಲೇ ಆತ ಹೇಗೆ ಎಂಬುದು ಕ್ಷೇತ್ರದ ಜನರಿಗೆ ಗೊತ್ತಾಗಿದೆ. ಆತ ಸೋಲಿನಿಂದ ಹೊರಗೆ ಬರುವುದಿಲ್ಲ ಎಂದು ಹೆಸರು ಹೇಳದೇ ಟೀಕಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅವನಾಗೆ ನಾನೇನು ಆಲೂಗಡ್ಡೆ ಹಾಕುವುದಿಲ್ಲ. ನನ್ನ ತೋಟದಲ್ಲಿ ಮಾವು ಬೆಳೆದಿದ್ದೇನೆ. ಡಿಆರ್‌ಡಿಒದಿಂದ ಹಣ ಬಂದಿದ್ದಕ್ಕೆ ನಾನು ಚುನಾವಣೆಗೆ ಸ್ಪರ್ಧಿಸಿದೆನೇ ಹೊರತು, ಅವನ ರೀತಿ ದರೋಡೆ ಮಾಡಲಿಲ್ಲ. ಚುನಾವಣೆ ಅಂದರೆ ಭಯ ಆಗುತ್ತಿತ್ತು. ಅವನು ದರೋಡೆ ಮಾಡಿ ಹಣ ಹೊಂದಿಸಿ ಚುನಾವಣೆಗೆ ಸ್ಪರ್ಧಿಸುತ್ತಾನೆ. ನಮಗಿಲ್ಲಿ ಕೈಕಾಲು ಆಡುವುದಿಲ್ಲ. ಒಂದು ಬಾರಿ ಗೆಲ್ಲಬೇಕಿತ್ತು, ಗೆದ್ದಿದ್ದೇನೆ ಎಂದು ಏಕವಚನದಲ್ಲೇ ಮೂದಲಿಸಿದರು.

ಕಾಸು ಕೊಟ್ಟು ಎರಡು ಬಾರಿ ಗೆದ್ದಿದ್ದೇನೆಂದು ಬೀಗುತ್ತಿದ್ದು, ಆತ ಎರಡು ಬಾರಿ ಗೆದ್ದ ಮತದಷ್ಟುಅಂತರದ ಗೆಲುವನ್ನು ಆತನ ವಿರುದ್ಧ ನಾನು ಪಡೆದಿದ್ದೇನೆ. ಬಿಜೆಪಿಯವರು ನೀಡಿದ್ದ 30 ಕೋಟಿ ರು. ಹಣ ಆತನನ್ನು ಹೀಗೆ ಮಾಡಿಸುತ್ತಿದೆ ಎಂದು ವ್ಯಂಗ್ಯವಾಡಿದರು.

ಬೆಗ್ಲಿ ಸೂರ್ಯಪ್ರಕಾಶ್‌ ಬಗ್ಗೆ ಮಾತನಾಡಿದ ಶಾಸಕರು, ಬೆಗ್ಲಿಗೆ ಜೀವನ ನಡೆಯಬೇಕು. ಅದಕ್ಕೆ ಅವನ ಜತೆ ಇದ್ದಾನೆ. ಅದೇ ನನ್ನ ಬಳಿ ಬಂದರೆ ನಾನು ಏನು ಕೊಡುವುದಿಲ್ಲ. ಅದಕ್ಕೆ ನಮ್ಮಲ್ಲಿಯೂ ಒಕ್ಕಲಿಗ ಲೀಡರ್‌ ಇದ್ದಾರೆ ಅಂತ ತೋರಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಕಮಿಷನ್‌ ಪಡೆದಿದ್ದರೆ ನೇಣು ಹಾಕಿ: ನಾನು ಕಮಿಷನ್‌ ತೆಗೆದುಕೊಂಡಿದ್ದರೆ ನೇಣು ಹಾಕಿ. ಮಾನ ಮರ್ಯಾದೆ ಅಂತ ಬದುಕುವವನು ನಾನು. ವೆಂಕಟಗಿರಿಗೌಡ, ಸಿ.ಬೈರೇಗೌಡ ಹಾಗೂ ಲತೀಫ್‌ಸಾಬ್‌ ಅಂತಹವರ ಹಾದಿಯಲ್ಲಿ ನಡೆದು ಬಂದಿದ್ದು, ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಬೇಕು ಎಂದು ಟೀಕಿಸಿದರು.

ಸಿ.ಎಸ್‌.ವೆಂಕಟೇಶ್‌ ಜಿಪಂ ಅಧ್ಯಕ್ಷರಾದ ಬಳಿಕ ಅವನಿಗೆ ಎರಡು ಕೊಂಬುಗಳು ಬಂದಂತೆ ಆಡುತ್ತಿದ್ದಾನೆ. ಅದೂ ಇನ್ನೇನು ಒಂದು ವರ್ಷ ಮಾತ್ರ ಇರುತ್ತದೆ. ಹಿಂದೆ ಜಿಪಂ ಸದಸ್ಯರು ಐದು ಮಂದಿ ಗೆದ್ದಾಗ ಯಾಕೆ ಗೆಲ್ಲಲಿಲ್ಲ. ಜನರಿಗೆ ಅರ್ಥವಾಗಿದೆ ಈತ ಹೇಗೆ ನಡೆದುಕೊಂಡಿದ್ದಾನೆ ಎಂದು ಟೀಕಿಸಿದರು.