ಬೆಂಗಳೂರು(ಫೆ.24): ರಸಗೊಬ್ಬರಗಳ ಬಳಕೆಯಿಂದಾಗಿ ಭೂಮಿ ಮತ್ತು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕಾರಣ ಸಾವಯವ ಕೃಷಿ ಪದ್ಧತಿಗೆ ಹಿಂದಿರುಗಬೇಕಾದ ಅಗತ್ಯವಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದ್ದಾರೆ.

ಕನಕಪುರ ರಸ್ತೆಯ ಆರ್ಟ್‌ ಆಫ್‌ ಲಿವಿಂಗ್‌ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಶನಿವಾರದಿಂದ ಹಮ್ಮಿಕೊಂಡಿರುವ ‘ಶ್ರೀ ಸಾವಯವ ಕೃಷಿ ಮೇಳ’ದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಪುರಾತನ ಕಾಲದಿಂದಲೂ ಸಾವಯವ ಕೃಷಿ ಪದ್ಧತಿಯಿದೆ. ನಮ್ಮ ಪೂರ್ವಜರು ಅದನ್ನೇ ಅವಲಂಭಿಸಿದ್ದರು, ಭಾರತ ದೇಶಕ್ಕೆ ಈ ಪದ್ಧತಿ ಹೊಸದಲ್ಲ. ಇದೀಗ ಮತ್ತೆ ಸಾವಯವ ಕೃಷಿ ಪದ್ಧತಿಗೆ ಹಿಂದಿರುಗಬೇಕಾದ ಅನಿವಾರ್ಯತೆಯಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಎರಡನೇ ಮಹಾಯುದ್ಧಕ್ಕೂ ಮುನ್ನ ದೇಶದಲ್ಲಿ ಸಾವಯವ ಕೃಷಿ ಪದ್ಧತಿಯೊಂದೇ ಜಾರಿಯಲ್ಲಿತ್ತು. ನಂತರ ದಿನಗಳಲ್ಲಿ ಎದುರಾದ ಬರಗಾಲದಿಂದಾಗಿ ಆಹಾರಕ್ಕಾಗಿ ವಿಶ್ವದ ಇತರೆ ದೇಶಗಳ ಮೇಲೆ ಅವಲಂಬಿಸುವ ಅನಿವಾರ್ಯತೆ ಎದುರಾಗಿತ್ತು. ಈ ಮಧ್ಯ ಅಮೆರಿಕದಿಂದ ಆಹಾರ ಪದಾರ್ಥಗಳ ಪೂರೈಕೆಗೆ ಅಡ್ಡಿಯಾದ ಪರಿಣಾಮ ಆಹಾರ ಪದಾರ್ಥಗಳಲ್ಲಿ ಸ್ವಾವಲಂಬನೆ ಸಾಧಿಸಲು ಸಾವಯವ ಕೃಷಿಯಿಂದ ಹೊರ ಬರಲಾಗಿತ್ತು ಎಂದು ತಿಳಿಸಿದರು.

ರೈತರು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದಕ್ಕೆ ಸಿದ್ಧರಿದ್ದಾರೆ. ಆದರೆ, ಸೂಕ್ತ ಬೆಲೆ ಮತ್ತು ಮಾರುಕಟ್ಟೆಸೌಲಭ್ಯ ಲಭ್ಯವಾಗುತ್ತಿಲ್ಲ. ಈ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕಾದ ಅಗತ್ಯವಿದೆ. ರೈತರು ಎದುರಿಸುತ್ತಿರುವ ಸಮಸ್ಯೆ, ಸವಾಲುಗಳಿಂದ ಹೊರ ಬರಲು ಸರ್ಕಾರ ಕಾರ್ಯಕ್ರಮ ರೂಪಿಸಬೇಕು ಎಂದು ಹೇಳಿದರು.

ಶಾಸಕ ರವಿ ಸುಬ್ರಹ್ಮಣ್ಯ ಮಾತನಾಡಿ, ಕೃಷಿಯಲ್ಲಿ ವಿಪರೀತವಾಗಿ ರಸಗೊಬ್ಬರಗಳ ಬಳಕೆಯಿಂದ ಭೂಮಿ ಕಲುಷಿತಗೊಳ್ಳುತ್ತಿದೆ. ಇದನ್ನು ತಡೆಯಲು ರೈತರು ಸಾವಯವ ಕೃಷಿಯತ್ತ ಮುಖ ಮಾಡಬೇಕಾದ ಅಗತ್ಯವಿದೆ. ದೇಶದಲ್ಲಿ ಅತಿ ಹೆಚ್ಚು ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿಯ ಸತ್ವ ಕಡಿಮೆಯಾಗುತ್ತಿದೆ, ಈ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕ ರೈತರನ್ನು ಹ್ಯಾಟ್ರಿಕ್‌ ಹೀರೋ ಡಾ. ಶಿವರಾಜ್‌ಕುಮಾರ್‌ ಸನ್ಮಾನಿಸಿದರು, ಬೆಂಗಳೂರು ಕೃಷಿ ವಿವಿ ಕುಲಪತಿ ಡಾ. ಎಸ್‌.ರಾಜೇಂದ್ರಪ್ರಸಾದ್‌ ಮತ್ತಿತರರಿದ್ದರು.
ಇದೇ ವೇಳೆ ಮಾತನಾಡಿದ ನಟ ಶಿವರಾಜ್‌ಕುಮಾರ್‌ ಅವರು, ರೈತರ ಮಕ್ಕಳು ಹಳ್ಳಿಗಳನ್ನು ಬಿಟ್ಟು ನಗರಗಳಿಗೆ ಬರುವುದನ್ನು ಬಿಡಬೇಕು. ಭೂ ತಾಯಿಯನ್ನು ನಂಬಿ ಬದುಕು ನಡೆಸಿದಲ್ಲಿ ಎಂದಿಗೂ ನಮ್ಮನ್ನು ಕೈ ಬಿಡುವುದಿಲ್ಲ. ಯುವ ಜನತೆ ಗ್ರಾಮೀಣ ಭಾಗಗಳಲ್ಲಿ ಜೀವನ ನಡೆಸಲು ಮುಂದಾಗಬೇಕು. ಜೊತೆಗೆ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕು ಎಂದು ತಿಳಿಸಿದ್ದಾರೆ.