ಸಿದ್ದರಾಮಯ್ಯಗೆ ಕೊಡವರಿಂದ ಖಡಕ್ ವಾರ್ನಿಂಗ್
ಕೊಡವ ಮುಖಂಡರು ಮಾಜಿ ಸಿಎಂ ಸಿದ್ದರಾಮಯ್ಯಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಅಸಮಾಧಾನ ಹೊರ ಹಾಕಿದ್ದಾರೆ.
ಮಡಿಕೇರಿ (ಡಿ.20): ಕೊಡವರು ಕೂಡ ಗೋ ಮಾಂಸ ಸೇವಿಸುತ್ತಾರೆ ಎಂದು ಹೇಳಿಕೆ ನೀಡುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಡವರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ನಾಪೋಕ್ಲು ಕೊಡವ ಸಮಾಜ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ ಹಾಗೂ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ ಅವರು, ಯಾರನ್ನೋ ಮೆಚ್ಚಿಸಲೆಂದು ಕೊಡವರ ಮನಸ್ಸಿಗೆ ಘಾಸಿ ಉಂಟು ಮಾಡುವ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಕೊಡವರ ಬೇಷರತ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.
ಬ್ರಿಟಿಷರ ಕಾಲದಿಂಂದಲೇ ಕೊಡಗಿನಲ್ಲಿ ಗೋಹತ್ಯೆ ನಿಷೇಧ ಜಾರಿಯಲ್ಲಿದ್ದು, ಕೊಡವರು ಎಂದಿಗೂ ಗೋಮಾಂಸ ಸೇವಿಸಿದವರಲ್ಲ. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿದ್ದರಾಮಯ್ಯ ಕೊಡವರು ಗೋಮಾಂಸ ಸೇವಿಸುತ್ತಾರೆ ಎಂದು ಹೇಳಿಕೆ ನೀಡುವ ಮೂಲಕ ತಮ್ಮ ದರ್ಪವನ್ನು ಪ್ರದರ್ಶಿಸಿದ್ದಾರೆ. ರಾಜಕಾರಣಿ ತಮ್ಮ ನಾಲಗೆಯನ್ನು ಹರಿಬಿಟ್ಟು ಸಣ್ಣವನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಚಾಮುಂಡೇಶ್ವರಿಯಲ್ಲಿ ಸೋಲಿಸಿದ್ಯಾರು? ಕೊನೆಗೂ ಬಹಿರಂಗಪಡಿಸಿದ ಸಿದ್ದರಾಮಯ್ಯ ...
ಟಿಪ್ಪು ಜಯಂತಿಯ ಸಂದರ್ಭದಲ್ಲೂ ಕೊಡವರ ಭಾವನೆಗಳನ್ನು ಕೆಣಕಲಾಗಿದೆ. ಅಲ್ಲದೆ ವಿರೋಧದ ನಡುವೆಯೂ ಪೊಲೀಸ್ ಕಾವಲಿನಲ್ಲಿ ಹಠಕ್ಕೆ ಬಿದ್ದು ಟಿಪ್ಪು ಜಯಂತಿ ಆಚರಿಸಿದ ಸಿದ್ದರಾಮಯ್ಯ ಅವರು ರಾಜಕೀಯವಾಗಿ ಮುಗ್ಗರಿಸಿದರೂ ಬುದ್ಧಿ ಕಲಿತಂತೆ ಕಾಣುತ್ತಿಲ್ಲ ಎಂದು ಮುನುಮುತ್ತಪ್ಪ ಹಾಗೂ ಅಜಿತ್ ನಾಣಯ್ಯ ತಿಳಿಸಿದ್ದಾರೆ.
ಕೊಡವರ ವಿರೋಧ ವ್ಯಕ್ತವಾಗುತ್ತಿರುವಾಗಲೇ ತಮ್ಮ ಮಾತಿಗೆ ತೇಪೆ ಹಾಕುವ ಕಾರ್ಯ ಮಾಡಿರುವ ಸಿದ್ದರಾಮಯ್ಯ ಅವರು, ನಾನು ಹಾಗೆ ಹೇಳಿಯೇ ಇಲ್ಲವೆಂದು ಸಮಜಾಯಿಷಿ ನೀಡಿದ್ದಾರೆ. ಅಲ್ಲದೆ ಕೊಡವರ ಬಗ್ಗೆ ಅಪಾರ ಗೌರವವಿದೆ ಎಂದು ಕಣ್ಣೊರೆಸುವ ತಂತ್ರ ಮಾಡಿದ್ದಾರೆ. ಈ ರೀತಿಯ ಮಾತುಗಳಿಗೆ ಕೊಡವರು ಮರುಳಾಗುವುದಿಲ್ಲ, ಬದಲಿಗೆ ಬೇಷರತ್ ಕ್ಷಮೆಯಾಚಿಸಿದರೆ ಮಾತ್ರ ಕೊಂಚ ಸಮಾಧಾನವಾಗಬಹುದು. ತಪ್ಪಿದಲ್ಲಿ ಸ್ವಾಭಿಮಾನಿ ಕೊಡವರು ಗ್ರಾ.ಪಂ ಚುನಾವಣೆ ಸಂದರ್ಭ ಸರಿಯಾದ ನಿರ್ಧಾರವನ್ನೇ ತೆಗೆದುಕೊಳ್ಳಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.