ಕೊಡಗು: ಹದಗೆಟ್ಟ ರಸ್ತೆ, ಶಾಸಕರನ್ನು ತರಾಟೆಗೆ ತೆಗೆದುಕೊಂಡು ಜನರ ಆಕ್ರೋಶ
ಕೊಡಗು ಜಿಲ್ಲೆಯಲ್ಲಿ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳನ್ನು ಹೊರತ್ತು ಪಡಿಸಿದರೆ ಜಿಲ್ಲೆಯ ಬಹುತೇಕ ಗ್ರಾಮೀಣ ರಸ್ತೆಗಳು ಗುಂಡಿಮಯವಾಗಿವೆ. ರಸ್ತೆಯಲ್ಲಿ ಗುಂಡಿ ಇವೆಯೋ ಇಲ್ಲ, ಗುಂಡಿಯಲ್ಲಿ ರಸ್ತೆ ಇದೆಯೋ ಎಂದು ಹುಡುಕಾಡಬೇಕಾದ ಸ್ಥಿತಿ ಇದೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾ ನೆಟ್ ಸುವರ್ಣನ್ಯೂಸ್
ಕೊಡಗು (ನ.18): ಕೊಡಗು ಜಿಲ್ಲೆಯಲ್ಲಿ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳನ್ನು ಹೊರತ್ತು ಪಡಿಸಿದರೆ ಜಿಲ್ಲೆಯ ಬಹುತೇಕ ಗ್ರಾಮೀಣ ರಸ್ತೆಗಳು ಗುಂಡಿಮಯವಾಗಿವೆ. ರಸ್ತೆಯಲ್ಲಿ ಗುಂಡಿ ಇವೆಯೋ ಇಲ್ಲ, ಗುಂಡಿಯಲ್ಲಿ ರಸ್ತೆ ಇದೆಯೋ ಎಂದು ಹುಡುಕಾಡಬೇಕಾದ ಸ್ಥಿತಿ ಇದೆ. ಹೀಗಾಗಿ ಜಿಲ್ಲೆಯ ಎರಡು ಕ್ಷೇತ್ರಗಳ ಶಾಸಕರನ್ನು ಜನರು ಸಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಜನರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಶಾಸಕರು ಮಳೆ ಇದ್ದಿದ್ದರಿಂದ ಕಾಮಗಾರಿಗಳನ್ನು ಮಾಡಲು ಆಗಿರಲಿಲ್ಲ ಇನ್ನೇನು ಶುರುಮಾಡುತ್ತೇವೆ ಎನ್ನುತ್ತಿದ್ದಾರೆ. ಇದನ್ನು ಜನರು ರಾಜಕೀಯ ಗಿಮ್ಮಿಕ್ ಹೌದಾ ಎಂದು ಮರು ಪ್ರಶ್ನಿಸುವಂತೆ ಆಗಿದೆ.
ಗುಂಡಿ ಬಿದ್ದ ರಸ್ತೆಗಳಲ್ಲಿ ನಿತ್ಯ ನೂರಾರು ವಾಹನ ಸವಾರರು ಪರದಾಡಬೇಕಾಗಿದೆ. ಕರ್ನಾಟಕ ಕಾಶ್ಮೀರ ಕೊಡಗು ಜಿಲ್ಲೆಯ ಬಹುತೇಕ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಇದೇ ಸ್ಥಿತಿ ಇದೆ. ಜಿಲ್ಲೆಯ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳನ್ನು ಹೊರತ್ತು ಪಡಿಸಿದರೆ ಉಳಿದ ಯಾವ ರಸ್ತೆಗಳು ಸರಿಯಾಗಿಲ್ಲ ಎನ್ನುವುದು ಜನರ ಆಕ್ರೋಶಕ್ಕೆ ಕಾರಣ. ಹೊಂಡಮಯ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದೇ ವಾಹನ ಸವಾರರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ರಸ್ತೆ ಹದಗೆಟ್ಟಿರುವ ವಿಷಯಕ್ಕೆ ಸಂಬಂಧಿಸಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಗಂಭೀರ ಚರ್ಚೆ ಪ್ರಾರಂಭವಾಗಿದೆ.
ಧಾರಾಕಾರವಾಗಿ ಸುರಿಯುವ ಮಳೆ, ಕಳಪೆ ಗುಣಮಟ್ಟದ ಕಾಮಗಾರಿ ಹಾಗೂ ನಿರ್ವಹಣೆ ಇಲ್ಲದೆ ಬಹುತೇಕ ರಸ್ತೆಗಳು ದುಸ್ಥಿತಿಗೆ ತಲುಪಿವೆ ಎಂದು ಜನರು ಇಬ್ಬರು ಶಾಸಕರನ್ನು ಬಹಿರಂಗವಾಗಿಯೇ ಪ್ರಶ್ನಿಸುತ್ತಿದ್ದಾರೆ. ಗ್ರಾಮೀಣ ಭಾಗದ ರಸ್ತೆಗಳು ಹದಗೆಟ್ಟು ಜನರು ನರಕಯಾತನೆಯಲ್ಲಿ ಓಡಾಟಬೇಕಾದ ಸ್ಥಿತಿ ಇದೆ. ಇಷ್ಟು ದಿನಗಳ ಕಾಲ ರಸ್ತೆ ಅಭಿವೃದ್ಧಿ ಮಾಡದ ಶಾಸಕರು ಇದೀಗಾ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ರಸ್ತೆ ಅಭಿವೃದ್ಧಿಯ ನಾಟಕವಾಡುತ್ತಿದ್ದಾರೆ. ಪ್ರತಿ ಚುನಾವಣೆ ಸಂದರ್ಭದಲ್ಲಿ ರಸ್ತೆ ದುರಸ್ಥಿ ಕಾರ್ಯ ನಡೆಸಿ, ಜನರ ಕಣ್ಣೊರೆಸಿ ಮತ ಹಾಕಿಸಿಕೊಳ್ಳುವುದು ರೂಢಿಯಾಗಿದೆ. ಈಗಲೂ ಅದನ್ನೇ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ: ನವೆಂಬರ್ ಅಂತ್ಯಕ್ಕೆ ಮದ್ದೂರು, ಶ್ರೀರಂಗಪಟ್ಟಣ ಬೈಪಾಸ್ ಓಪನ್
ಈ ಕುರಿತು ಪ್ರತಿಕ್ರಿಯಿಸಿರುವ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು, ಕೊಡಗಿನಲ್ಲಿ ತೀವ್ರ ಮಳೆಯಾವುದರಿಂದ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಪ್ರತೀ ವರ್ಷ ರಸ್ತೆ ದುರಸ್ಥಿ ಮಾಡಿದರೂ ಹಾಳಾಗುತ್ತಿವೆ. ಹೀಗಾಗಿ ಈಗ ಸರ್ವ ಋತು ರಸ್ತೆ ಮಾಡಿಸಲಾಗುವುದು ಎಂದಿದ್ದಾರೆ. ಮಡಿಕೇರಿ ಕ್ಷೇತ್ರಕ್ಕೆ 100 ಕೋಟಿ ರೂ. ಅನುದಾನವಿದ್ದು, ಎಲ್ಲಾ ರಸ್ತೆಗಳು ಅಭಿವೃದ್ಧಿ ಕಾಣಲಿವೆ. ಮುಂಬರುವ ಮಳೆಗಾಲದ ಒಳಗಾಗಿ ಎಲ್ಲವೂ ಸರ್ವ ಋತು ರಸ್ತೆಗಳಾಗಲಿವೆ ಎಂದಿದ್ದಾರೆ.
ನಾಳೆಯಿಂದ ರೈಲು ನಿಲ್ದಾಣ ಮುಂಭಾಗದ ರಸ್ತೆಯಲ್ಲಿ ವಾಹನ ಸಂಚಾರ ಬಂದ್
ಏನೇ ಆಗಲಿ ಜಿಲ್ಲೆಯಲ್ಲಿ ಕಳೆದ ಎರಡೂವರೆ ದಶಕಗಳ ಕಾಲ ಶಾಸಕರಾಗಿರುವ ಜಿಲ್ಲೆಯ ಇಬ್ಬರು ಶಾಸಕರು ಯಾವುದೇ ರಸ್ತೆಗಳ್ನು ಅಭಿವೃದ್ಧಿ ಮಾಡುವ ಕೆಲಸ ಮಾಡಲಿಲ್ಲ ಎಂದು ಜನರು ಆಕ್ರೋಶ ಹೊರಹಾಕುತ್ತಿರುವುದಂತು ಸತ್ಯ.