ಮಯೂರ ಹೆಗಡೆ

ಹುಬ್ಬಳ್ಳಿ[ಡಿ.04]: ಪ್ಲಾಸ್ಟಿಕ್‌ ತ್ಯಾಜ್ಯಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕೆಎಂಎಫ್‌ ಧಾರವಾಡ (ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ) ಪ್ರಾಯೋಗಿಕವಾಗಿ ಮಹಾನಗರದಲ್ಲಿ 2 ಎಟಿಎಂ ಮಾದರಿಯ ಮಷಿನ್‌ ಸ್ಥಾಪಿಸಿ ಅದರ ಮೂಲಕ ಹಾಲು ಪೂರೈಸಲು ಚಿಂತನೆ ನಡೆಸಿದೆ. ಅದಲ್ಲದೆ, ಮೊಬೈಲ್‌ ವ್ಯಾನ್‌ ಮೂಲಕವೂ ಮನೆ ಮನೆಗೆ ಹಾಲು ವಿತರಣೆಯ ಯೋಜನೆಯನ್ನೂ ಕಾರ್ಯರೂಪಕ್ಕೆ ತರಲು ಉತ್ಸುಕವಾಗಿದೆ.

ಹಾಲಿನ ಪ್ಯಾಕೆಟ್‌ ಕೂಡ ಪ್ಲಾಸ್ಟಿಕ್‌ ತ್ಯಾಜ್ಯಕ್ಕೆ ಹೆಚ್ಚಿನದಾಗಿ ಕಾರಣವಾಗುವ ಒಂದಂಶ. ಇದನ್ನು ನಿಯಂತ್ರಿಸಲು ಕೆಎಂಎಫ್‌ ಮುಂದಾಗಿದೆ. ಒಂದು ವೇಳೆ ಈ ಯೋಜನೆಗಳು ಯಶಸ್ವಿಯಾದಲ್ಲಿ, ಮುಂದಿನ ದಿನದಲ್ಲಿ ಗ್ರಾಹಕರು ಹಾಲು ಹಾಕಿಸಿಕೊಳ್ಳಲು ಪಾತ್ರೆ ಹಿಡಿದುಕೊಂಡು ಮಿಲ್ಕ್  ವೆಂಡಿಂಗ್‌ ಮಷಿನ್‌ ಬಳಿ ಹೋಗಬೇಕಾಗಲಿದೆ.

ಹಣ ಹಾಕಿದರೆ ಹಾಲು:

ಮಹಾನಗರ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಪ್ರಾಯೋಗಿಕವಾಗಿ ತಲಾ ಒಂದೊಂದು ಇಂತಹ ಮಷಿನ್‌ ಅಳವಡಿಕೆಗೆ ಕೆಎಂಎಫ್‌ ಪ್ರಸ್ತಾವನೆ ಇಟ್ಟಿದೆ. ಎಟಿಎಂ ಮಾದರಿಯಲ್ಲಿ ಈ ಮಷಿನ್‌ ಕಾರ್ಯನಿರ್ವಹಿಸಲಿದ್ದು, ಗ್ರಾಹಕರು ತಮಗೆ ಎಷ್ಟು ಹಾಲು ಬೇಕೊ ಅದಕ್ಕೆ ನಿಗದಿತ ಹಣವನ್ನು ಭರಿಸಿ ಹಾಲು ಪಡೆಯುವ ಅವಕಾಶವಿರಲಿದೆ. ಇದರ ಮೂಲಕ ಗ್ರಾಹಕ 250 ಎಂಎಲ್‌, 500ಎಂಎಲ್‌-1ಲೀಟರ್‌ ಹಾಲನ್ನು ಪಡೆಯಬಹುದು. ಕೆಎಂಎಫ್‌ ತೆರೆಯಲು ನಿರ್ಧರಿಸಿರುವ ಹಾಲು ಹಾಗೂ ಹಾಲಿನ ಉತ್ಪನ್ನಗಳಿರುವ ಮಿಲ್ಕ್  ಪಾರ್ಲರ್‌ಗಳಲ್ಲೂ ಮಿಲ್ಕ್  ವೆಂಡಿಂಗ್‌ ಮಷಿನ್‌ ಇಡಲು ಉದ್ದೇಶಿಸಲಾಗಿದೆ. ಯೋಜನೆ ಪ್ರಾಥಮಿಕ ಹಂತದಲ್ಲಿದ್ದು, ಕಾರ್ಡ್‌ ಮಾದರಿ, ಸಬ್‌ಸ್ಕ್ರಿಪ್ಶನ್‌ ಮಾದರಿ ಬಗ್ಗೆ, ಮಷಿನ್‌ ಕಾರ್ಯನಿರ್ವಹಣೆ ಕುರಿತು ಕೆಎಂಎಫ್‌ ನಿರ್ಣಯ ಕೈಗೊಳ್ಳಲಿದೆ.

ಮನೆಮನೆಗೆ ಪೂರೈಕೆ:

ಪ್ಲಾಸ್ಟಿಕ್‌ ಕಡಿವಾಣಕ್ಕೆ ಮಾತ್ರವಲ್ಲದೆ ಗ್ರಾಹಕರಿಗೆ ತಾಜಾ ಹಾಲು ಬಹುಬೇಗ ಪೂರೈಸುವ ಉದ್ದೇಶದಿಂದ ಚಿಕ್ಕ ಮೊಬೈಲ್‌ ವ್ಯಾನ್‌ಗಳ ಮೂಲಕ ಮನೆಮನೆಗೆ ಹಾಲು ಪೂರೈಸುವ ಯೋಜನೆಯನ್ನೂ ಕೆಎಂಎಫ್‌ ಧಾರವಾಡ ವ್ಯವಸ್ಥಾಪಕ ನಿರ್ದೇಶಕ ಸುರೇಶ ನಾಯ್ಕ್ ರೂಪಿಸಿದ್ದಾರೆ. ನಿರಂತರ ಗ್ರಾಹಕರನ್ನು ಗುರುತಿಸಿ ಅವರಿಗೆ ಹಾಲನ್ನು ಬೆಳಗ್ಗೆ ಹಾಗೂ ಸಂಜೆ ವಿತರಣೆ ಮಾಡಲು ಯೋಜಿಸಿದ್ದಾಗಿ ಅವರು ತಿಳಿಸಿದರು.

ಈ ವಾಹನಗಳು ಬೆಳಗ್ಗೆ 5ಗಂಟೆಯಿಂದಲೇ ಹಾಲು ಪೂರೈಸಲು ಕಾರ್ಯಪ್ರವೃತ್ತವಾಗಲಿವೆ. ಹಾಲನ್ನು ಈ ರೀತಿ ಬಿಡಿಯಾಗಿ ಮಾರಾಟ ಮಾಡಲು ಮಹಾನಗರ ಪಾಲಿಕೆ ಹಾಗೂ ಸರ್ಕಾರದಿಂದ ಪರವಾನಗಿ ಬೇಕು. ಈ ಬಗ್ಗೆ ಈಗಾಗಲೇ ಮೇಲಧಿಕಾರಿಗಳ ಜೊತೆ ಚರ್ಚಿಸಲಾಗಿದ್ದು, ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಅವರು ಹೇಳಿದರು.

ಈ ಕುರಿತು ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ಎನ್‌ಜಿಟಿ ನಿಯಮಾನುಸಾರ ಪ್ಲಾಸ್ಟಿಕ್‌ ಉತ್ಪನ್ನದಲ್ಲಿ ಆಹಾರ ಪದಾರ್ಥ ಪೂರೈಕೆ ಮಾಡುವವರು ಕಡ್ಡಾಯವಾಗಿ ಪ್ಲಾಸ್ಟಿಕನ್ನು ಸಂಗ್ರಹಿಸಿ ವಿಲೇವಾರಿ ಮಾಡಬೇಕು. ಕೆಎಂಎಫ್‌ ಎಟಿಎಂ ಮಾದರಿಯಲ್ಲಿ ಹಾಲು ಪೂರೈಸುವ ಪ್ರಸ್ತಾಪವಿಟ್ಟಿದ್ದು, ಇದಕ್ಕೆ ಅಗತ್ಯ ಸ್ಥಳಾವಕಾಶವನ್ನು ಪಾಲಿಕೆಯಿಂದ ನೀಡಲಿದ್ದೇವೆ ಎಂದರು.

1.80 ಲಕ್ಷ ಪ್ಯಾಕೆಟ್‌

ಹುಬ್ಬಳ್ಳಿ- ಧಾರವಾಡದಲ್ಲಿ ಪ್ರತಿನಿತ್ಯ ಕೆಎಂಎಫ್‌ನಿಂದ 1.80 ಲಕ್ಷ ನಂದಿನಿ ಹಾಲಿನ ಪ್ಯಾಕೆಟ್‌ ವಿತರಣೆಯಾಗುತ್ತದೆ. ಒಟ್ಟಾರೆ ಮಹಾನಗರದಲ್ಲಿ ಪ್ರತಿನಿತ್ಯ ಉತ್ಪಾದನೆಯಾಗುವ 400 ಟನ್‌ ತ್ಯಾಜ್ಯದಲ್ಲಿ ಇವುಗಳ ಪಾಲೂ ಇದೆ. ಹಾಲಿನ ಪ್ಯಾಕೆಟ್‌ ಮಾತ್ರವಲ್ಲದೆ, ಸ್ವಿಗ್ಗಿ, ಝೋಮೆಟೊ ನಂತಹ ಆಹಾರ ಪದಾರ್ಥ ಪೂರೈಸುವ ಸಂಸ್ಥೆಗಳು ಹಾಗೂ ಲೇಸ್‌, ಪಾರ್ಲೇಜಿ ಬಿಸ್ಕತ್ತು ಮತ್ತಿತರ ಕಂಪನಿಗಳ ಪ್ರತಿನಿಧಿಗಳನ್ನು ಕರೆದು ನಿಮ್ಮ ಪ್ಲಾಸ್ಟಿಕ್‌ ಸಂಗ್ರಹಕ್ಕೆ ನೀವೆ ಮುಂದಾಗಬೇಕೆಂದು ಮಹಾನಗರ ಪಾಲಿಕೆ ಸೂಚಿಸಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ಲಾಸ್ಟಿಕ್‌ ನಿಯಂತ್ರಣಕ್ಕಾಗಿ ಎಟಿಎಂ ಮಾದರಿಯಲ್ಲಿ ಹಾಲು ಪೂರೈಕೆ ಮಾಡಲು ಹಾಗೂ ವಾಹನದ ಮೂಲಕ ಮನೆಮನೆಗೆ ಹಾಲು ವಿತರಿಸಲು ಚಿಂತನೆ ನಡೆಸಿದ್ದು, ಶೀಘ್ರ ಕಾರ್ಯರೂಪಕ್ಕೆ ತರಲು ನಿರ್ಧರಿಸಿದ್ದೇವೆ ಎಂದು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಸುರೇಶ ನಾಯ್ಕ ಹೇಳಿದ್ದಾರೆ. 

ಈ ಬಗ್ಗೆ ಮಾಹಿತಿ ನೀಡಿದ ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರು, ಪ್ಲಾಸ್ಟಿಕ್‌ ನಿಯಂತ್ರಣಕ್ಕೆ ಕೆಎಂಎಫ್‌ ಎಟಿಎಂ ರೂಪದಲ್ಲಿ ಹಾಲು ವಿತರಣೆ ಕುರಿತು ಪ್ರಸ್ತಾಪಿಸಿದ್ದು ಉತ್ತಮ ಸಂಗತಿ. ಪಾಲಿಕೆಯಿಂದ ಸೂಕ್ತ ಸ್ಪಂದನೆ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.