ಈ ಬಸ್‌ಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಗೇಲಿ ಮಾಡುತ್ತಿರುವ ಸ್ಥಳೀಯರು  

ರಾಮು ಅರಕೇರಿ

ಸಂಡೂರು(ಜು.16): ಜುಲೈ ಆರಂಭದಿಂದ ಬಿಡದೆ ಸುರಿಯುತ್ತಿರುವ ಮಳೆಗೆ ಸಂಡೂರು ಅಕ್ಷರಶಃ ಮಲೆನಾಡಿನಂತಾಗಿದ್ದು, ರಸ್ತೆಯ ಗುಂಡಿಗಳಂತೆ ಬಸ್ಸುಗಳೂ ಸಂಪೂರ್ಣ ಕೆಂಪುಬಣ್ಣಕ್ಕೆ ತಿರುಗಿ ಕೆಸರಲ್ಲಿ ಬಿದ್ದು ಎದ್ದು ಬಂದ ಎಮ್ಮೆಗಳಂತಾಗಿವೆ. ಈ ಬಸ್‌ಗಳ ಫೋಟೋಗಳನ್ನು ಸ್ಥಳೀಯರು ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ವಾಟ್ಸಪ್‌ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಗೇಲಿ ಮಾಡುತ್ತಿದ್ದಾರೆ. ಸಂಡೂರಿನಿಂದ ಹೊಸಪೇಟೆ, ಕೂಡ್ಲಿಗಿ ಮತ್ತು ಬಳ್ಳಾರಿಗೆ ಹೆಚ್ಚು ಬಸ್ಸುಗಳು ಸಂಚರಿಸುತ್ತವೆ. ಸಂಡೂರು-ಹೊಸಪೇಟೆಯಂತೂ ಅವಳಿ ನಗರಗಳಂತಾಗಿದ್ದು, ಇಲ್ಲಿಯ ಜನರ ಬಹುತೇಕ ವ್ಯಾಪಾರ ವಹಿವಾಟು ಹೊಸಪೇಟೆಯಲ್ಲಿಯೇ. ಹೊಸಪೇಟೆಯಲ್ಲಿ ನೀವು ಸಂಡೂರು ಬಸ್ಸುಗಳನ್ನು ಕಂಡು ಹಿಡಿಯುವುದು ಸುಲಭ. ಅಲ್ಲಿನ ಅಷ್ಟೂಬಸ್ಸುಗಳಲ್ಲಿ ಯಾವ ಬಸ್‌ಗೆ ಕೆಂಪು ಕೆಸರು ಮೆತ್ತಿಕೊಂಡಿರುವುದೋ ಅದೇ ಸಂಡೂರು ಬಸ್‌ ಎಂದು ಬರೆದುಕೊಂಡು ಇಲ್ಲಿನ ಪರಿಸ್ಥಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಅದೇ ರೀತಿ ಬಳ್ಳಾರಿ ,ಕೂಡ್ಲಿಗಿಯಲ್ಲೂ ಈ ಭಾಗದ ಬಸ್ಸುಗಳನ್ನು ಸುಲಭವಾಗಿ ಕಂಡು ಹಿಡಿಯಬಹುದು.

ಕಿಟಕಿಗೆ ಗಾಜಿನ ಬದಲು ತಗಡು:

ದೇವಗಿರಿ, ನಂದಿಹಳ್ಳಿ ಪಿಜಿ ಸೆಂಟರ್‌ ಮತ್ತು ಬಳ್ಳಾರಿ ಭಾಗದಲ್ಲಿ ಸಂಚರಿಸುತ್ತಿದ್ದ ಮಿನಿ ಬಸ್‌ನ ಕಿಟಕಿಯ ಗಾಜುಗಳೆಲ್ಲಾ ಒಡೆದು ಹೋದ ಪರಿಣಾಮ ಹಳೆ ತಗಡುಕಟ್ಟಿಬಸ್‌ ಓಡಿಸುತ್ತಿದ್ದಾರೆ. ಈ ಡಿಪೋ ಬಸ್‌ಗಳ ಅವಾಂತರ ಇಷ್ಟಕ್ಕೆ ಮುಗಿಯುವುದಿಲ್ಲ. ಸಂಜೆ ಮತ್ತು ಬೆಳಗಿನ ಜಾವ ಬಸ್‌ಗಳ ಸಮಸ್ಯೆ ಹೇಳತೀರದು. ವಿದ್ಯಾಭ್ಯಾಸಕ್ಕಾಗಿ ವಿವಿಧೆಡೆ ಓಡಾಡುವ ವಿದ್ಯಾರ್ಥಿಗಳಿಗೆ ಸಮರ್ಪಕ ಸಾರಿಗೆ ಸೌಲಭ್ಯವಿಲ್ಲದೆ ನಿರಂತರವಾಗಿ ಪರದಾಡುವ ಪರಿಸ್ಥಿತಿ ಇದೆ.

ಕರ್ನಾಟಕದ ಜನತೆಗೆ KSRTC ಬಸ್ ದರ ಏರಿಕೆ ಬಿಸಿ, ಎಷ್ಟಾಗಲಿದೆ ಟೆಕೆಟ್?

ಬೆಳಗಿನ ಜಾವ ಹೊಸಪೇಟೆ ಕಡೆ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳ ದಂಡೇ ಇರುತ್ತದೆ. ಊಟ, ಟಿಫಿನ್‌ ಮಾಡದ ವಿದ್ಯಾರ್ಥಿಗಳ ಅಸಹನೆ ಹೇಳತೀರದು. ಎಷ್ಟುಕಾದರೂ ಒಂದೂ ಬಸ್‌ ಬರುವುದಿಲ್ಲ. ಹಾಗೆಯೇ ಸಂಜೆ ಇಲ್ಲಿನ ಪುರಸಭೆ ಬಸ್‌ ನಿಲ್ದಾಣದಲ್ಲಿ ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಮತ್ತು ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುವ ಜನ ಬಸ್‌ಗಾಗಿ ಕಾದು ಕಾದು ರೋಸಿಹೋಗುತ್ತಾರೆ. ಹದಗೆಟ್ಟಸಂಡೂರು ಬಸ್‌ ಡಿಪೋ ಸುಧಾರಣೆ ತಂದು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಬಸ್‌ ಬಿಡಬೇಕೆಂದೂ ಮತ್ತು ಬಸ್‌ಗಳನ್ನು ಮಳೆಗಾಲದಲ್ಲಿ ಸ್ವಚ್ಛಗೊಳಿಸಿ ರಸ್ತೆಗೆ ಬಿಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿತ್ತಿದ್ದಾರೆ.

ಸಂಡೂರು ತಾಲೂಕಿಗೆ ಇಂತಹ ಬಸ್‌ಗಳನ್ನು ಬಿಟ್ಟಿರುವುದು ನಮ್ಮ ದುರಂತ. ಇದೇ ಜಿಲ್ಲೆಯವರೆ ಸಾರಿಗೆ ಸಚಿವರಾಗಿದ್ದರೂ ವ್ಯವಸ್ಥೆ ಹದಗೆಟ್ಟಿದೆ. ಕಲ್ಯಾಣ ಕರ್ನಾಟಕ ಬೋರ್ಡ್‌ಗಳಿಗೆ ಸೀಮಿತಾಗಿದೆ. ಈಗಿರುವ ಸಾರಿಗೆ ವ್ಯವಸ್ಥೆಗಿಂತ ಎತ್ತಿನ ಬಂಡಿಗಳನ್ನು ಅವಲಂಬಿಸುವುದು ಎಷ್ಟೋ ಸೂಕ್ತ ಅಂತ ಜೆಡಿಎಸ್‌ ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಕೆ. ಮೆಹಬೂಬ್‌ ಬಾಷಾ ಹೇಳಿದ್ದಾರೆ.

ರಸ್ತೆಗಳು ಹಾಳಾಗುವುದು ಮತ್ತು ಕೆಂಪು ಧೂಳಿನಿಂದ ಹೊಲಸಾಗುವುದಕ್ಕೆ ಮೈನಿಂಗ್‌ ಲಾರಿಗಳೇ ಕಾರಣ. ಗಣಿ ಕಂಪನಿಗಳು ರಸ್ತೆಗಳ ನಿರ್ವಹಣೆ, ಮುಖ್ಯವಾಗಿ ಸ್ವಚ್ಛತೆ ಕಡೆಗೆ ಗಮನ ಹರಿಸಬೇಕು. ಹಾಗಾದರೆ ಮಾತ್ರ ಹೀಗೆ ಸರ್ಕಾರಿ ಬಸ್‌ಗಳು ವಿರೂಪ ಆಗುವುದು ತಪ್ಪುತ್ತದೆ ಅಂತ ಲಕ್ಷ್ಮಿಪುರದ ಯುವಕ ನಾಗರಾಜ್‌ ತಿಳಿಸಿದ್ದಾರೆ.