ಬೆಂಗಳೂರು [ನ.17]:  ಕಳೆದ ಹತ್ತು ತಿಂಗಳಿನಿಂದ ವೇತನ ನೀಡದೆ ದುಡಿಸಿಕೊಳ್ಳುತ್ತಿದ್ದ ಕಿಮ್ಸ್‌ ಆಸ್ಪತ್ರೆಯ ಆಡಳಿತ ಮಂಡಳಿ ವರ್ತನೆಯಿಂದ ಬೇಸತ್ತು ಸಿಬ್ಬಂದಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಚಾಮರಾಜಪೇಟೆ ನಿವಾಸಿ ಯೋಗೇಶ್‌ (28) ಮೃತರು. ಘಟನೆ ಸಂಬಂಧ ಮೃತನ ಸಂಬಂಧಿಕರು ಆಸ್ಪತ್ರೆ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೂಲತಃ ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ತಾಲೂಕಿನ ಯೋಗೇಶ್‌ ಅವಿವಾಹಿತರಾಗಿದ್ದು, ಚಾಮರಾಜಪೇಟೆಯ ಮನೆಯಲ್ಲಿ ಬಾಡಿಗೆಗೆ ನೆಲೆಸಿದ್ದರು. ಕಳೆದ ಹತ್ತು ವರ್ಷಗಳಿಂದ ವಿ.ವಿ.ಪುರಂನಲ್ಲಿರುವ ಕಿಮ್ಸ್‌ ಆಸ್ಪತ್ರೆಯಲ್ಲಿ ವಾರ್ಡ್‌ ಬಾಯ್‌ ಆಗಿ ಕೆಲಸಕ್ಕಿದ್ದರು. ಕೆಲ ತಿಂಗಳ ಹಿಂದೆ ಯೋಗೇಶ್‌ ತಮ್ಮ ತಂದೆ ಆರೋಗ್ಯ ಸರಿ ಇಲ್ಲ ಎಂದು ಕೆಲಸಕ್ಕೆ ರಜೆ ಹಾಕಿದ್ದರು. ಮತ್ತೆ ಕೆಲಸಕ್ಕೆ ಮರಳಿದ ಯೋಗೇಶ್‌ ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿತ್ತು. ಆದಾಗ್ಯೂ ಯೋಗೇಶ್‌ ಅವರು ಕೆಲಸದಲ್ಲಿ ಮುಂದುವರೆದಿದ್ದರು. ಆದರೆ ಆಡಳಿ ಮಂಡಳಿ ನಿತ್ಯ ಯೋಗೇಶ್‌ ಅವರಿಗೆ ಕಿರುಕುಳ ನೀಡುತ್ತಿದ್ದಲ್ಲದೆ, ಕಳೆದ ಡಿಸೆಂಬರ್‌ ತಿಂಗಳಿನಿಂದ ವೇತನ ಪಾವತಿಸಿಲ್ಲ. ವೇತನ ಪಾವತಿ ಮಾಡುತ್ತಾರೆ ಎಂಬ ವಿಶ್ವಾಸದಲ್ಲಿ ಯೋಗೇಶ್‌ ಅವರು ಕೆಲಸ ಮಾಡಿಕೊಂಡು ಬಂದಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇತ್ತೀಚೆಗೆ ವೇತನ ಇಲ್ಲದೆ, ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದ ಯೋಗೇಶ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಕಿಮ್ಸ್‌ ಆಡಳಿತ ಮಂಡಳಿ ವಿರುದ್ಧ ಮೃತನ ಪೋಷಕರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಯೋಗೇಶ್‌ ಸರಿಯಾಗಿ ಕೆಲಸಕ್ಕೆ ಬರುತ್ತಿರಲಿಲ್ಲ ಎಂದು ಆಡಳಿತ ಮಂಡಳಿ ಮಾಹಿತಿ ಹೇಳಿದೆ ಎಂದು ಪೊಲೀಸರು ತಿಳಿಸಿದರು.

ಕಿಮ್ಸ್‌ ಆಸ್ಪತ್ರೆ ಬಳಿ ಶವ ಇಟ್ಟು ಪ್ರತಿಭಟನೆ ನಡೆಸಿ ನ್ಯಾಯಾ ಕೇಳುತ್ತೇವೆ. ಆಡಳಿತ ಮಂಡಳಿಯ ಕಿರುಕುಳದಿಂದ ಯೋಗೇಶ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.